ಒಕ್ಕಲಿಗರನ್ನು ಪ್ರತಿನಿಧಿಸುವ ಒಕ್ಕೂಟವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತನ್ನ ಬೆಂಬಲವನ್ನು ಘೋಷಿಸಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಒಕ್ಕಲಿಗ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಿ ಹನುಮಂತಯ್ಯ, ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆಯನ್ನು ಪರಿಗಣಿಸಿ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
“ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಹೆಚ್ಚಿನ ಕೊಡುಗೆ ನೀಡಿದೆ, ಒಕ್ಕಲಿಗ ಸಮುದಾಯ ಕಾಲೇಜು ನಿರ್ಮಿಸಲು ಕಾಂಗ್ರೆಸ್ ಬೆಂಗಳೂರಿನಲ್ಲಿ ಒಂಬತ್ತು ಎಕರೆ ಜಮೀನು ನೀಡಿದೆ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದಿಂದ ನಡೆಸುತ್ತಿರುವ ವೈದ್ಯಕೀಯ ಕಾಲೇಜಿಗೆ ಪಡೆದಿರುವ ಸಾಲದ ಕೋಟ್ಯಂತರ ರೂಪಾಯಿ ಬಡ್ಡಿಯನ್ನು ಮನ್ನಾ ಮಾಡುವ ಭರವಸೆ ನೀಡಿದೆ” ಎಂದು ಅವರು ಹೇಳಿದರು.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡ ಹನುಮಂತಯ್ಯ, ಗೌಡರು ಮತ್ತೊಂದು ಮಠ ಸ್ಥಾಪಿಸುವ ಮೂಲಕ ಸಮುದಾಯವನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ‘ದೇವೇಗೌಡರ ಜೆಡಿ(ಎಸ್) ಯಾವುದೇ ಒಕ್ಕಲಿಗ ನಾಯಕರನ್ನು ರಾಜಕೀಯದಲ್ಲಿ ಬೆಳೆಯಲು ಬಿಡಲಿಲ್ಲ, ಎಚ್ ಎನ್ ನಂಜೇಗೌಡ, ಬೈರೇಗೌಡ, ಬಚ್ಚೇಗೌಡ, ಅಂಬರೀಶ್ ಸೇರಿದಂತೆ ಅನೇಕ ನಾಯಕರನ್ನು ಪಕ್ಷದಿಂದ ಹೊರಹಾಕಿದ ಪಕ್ಷ ಅದು’ ಎಂದು ಹನುಮಂತಯ್ಯ ಹೇಳಿದರು. ಈ ಸಮುದಾಯ ಜೆಡಿಎಸ್‌ಗೆ ಬೆಂಬಲ ನೀಡಿದ್ದರಿಂದ ಇಷ್ಟು ವರ್ಷ ಸಂಕಷ್ಟ ಅನುಭವಿಸಬೇಕಾಯಿತು ಎಂದೂ ಅವರು ಹೇಳಿದರು.
ಬಿಜೆಪಿ ಸಮಾಜಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಆರೋಪಿಸಿದ ಅವರು, ‘ಡಿವಿ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಇಳಿಸಿತ್ತು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಂದದ ಕಾವಲ್‌ನಲ್ಲಿರುವ ಒಕ್ಕಲಿಗ ಸಂಘದ ಒಂಬತ್ತು ಎಕರೆ ಜಮೀನನ್ನು ಸರ್ಕಾರ ಇತರರಿಗೆ ಮಂಜೂರು ಮಾಡಿತ್ತು” ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 10,000 ಸದಸ್ಯರನ್ನು ಹೊಂದಿರುವ ಒಕ್ಕೂಟವು ಕಾಂಗ್ರೆಸ್‌ಗೆ ತನ್ನ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದೆ. ಹನುಮಂತಯ್ಯ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಹೌದು.