Home ರಾಜ್ಯ  ಜೈನ ಧರ್ಮ ಇಡಿ ವಿಶ್ವಕ್ಕೆ ಸತ್ಯ ಅಹಿಂಸೆಯ ಬೋಧನೆ ಮಾಡುತ್ತಿದೆ – ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

 ಜೈನ ಧರ್ಮ ಇಡಿ ವಿಶ್ವಕ್ಕೆ ಸತ್ಯ ಅಹಿಂಸೆಯ ಬೋಧನೆ ಮಾಡುತ್ತಿದೆ – ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

0

ಶ್ರವಣಬೆಳಗೊಳ: ಜೈನ ಧರ್ಮ ಇಡಿ ವಿಶ್ವಕ್ಕೆ ಸತ್ಯ ಅಹಿಂಸೆಯ ಬೋಧನೆ ಮಾಡುತ್ತಿದೆ. ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯು ಜೈನ ಧರ್ಮದ ಪ್ರತೀಕ ಮಾತ್ರವಲ್ಲದೆ, ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರುವ ಸಂಕೇತವೂ ಆಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ದಿಂದ ಗೊಮ್ಮಟ ನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ ಚಕ್ರವರ್ತಿ ಪ.ಪೂ ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು ವಿಶ್ವದೆಲ್ಲೆಡೆ ಸಂಘರ್ಷದ ಸನ್ನಿವೇಶಗಳು ಉಂಟಾಗಿದ್ದು ಮನುಕುಲವೇ ಅಪಾಯಕ್ಕೆ ಸಿಲುಕಿದೆ ಇಂತಹ ಸನ್ನಿವೇಶದಲ್ಲಿ ವಿಶ್ವ ಶಾಂತಿ ಸ್ಥಾಪಿಸಲು ಜೈನ ಮುನಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

ಶ್ರವಣಬೆಳಗೊಳ ಹಾಗೂ ಇಡಿ ಕರ್ನಾಟಕ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಕಲೆ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.ಸರ್ಕಾರ ಜ್ಞಾನಭಾರತಿ ಮಿಷನ್ ಅಡಿಯಲ್ಲಿ ಪ್ರಾಚೀನ ಭಾಷೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರಾಕೃತ ಮತ್ತು ಕನ್ನಡಕ್ಕೆ ಪಾರಂಪರಿಕ ಭಾಷೆಯ ಸ್ಥಾನಮಾನ ನೀಡಲಾಗಿದ್ದು, ಸಂಶೋಧನೆ ಹಾಗೂ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು. ಜೈನ ಧರ್ಮದ ಪ್ರಾಚೀನ ಸಾಹಿತ್ಯ ಹಸ್ತಪ್ರತಿಗಳ ಸಂಶೋಧನೆ ಮತ್ತು ಅಧ್ಯಯನಕ್ಕೆ ಇದರಿಂದ ಸಹಕಾರಿಯಾಗಿದೆ ಎಂದರು.

ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ದಿಗಂಬರ ಮುನಿ ಪರಂಪರೆಗೆ ಅಪಾರ ಕೊಡುಗೆ ನೀಡಿರುವ ಶಾಂತಿ ಸಾಗರ ಮಹಾರಾಜರು 1925 ರಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮಹಾಮಸ್ತಕಾಭಿಷೇಕ ದಲ್ಲಿ ಭಾಗವಹಿಸಿ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಶಾಂತಿ ಸಾಗರ ಮಹಾರಾಜರ ಜೀವನ ಸಂದೇಶ ಅಜರಾಮರವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಶಿಲಾಶಾಸನ ಪ್ರತಿಷ್ಠಾಪನೆ ಮಾಡುವುದರ ಜೊತೆಗೆ ನಾಲ್ಕನೇ ಬೆಟ್ಟಕ್ಕೆ ಶಾಂತಿಸಾಗರ ಮಹಾರಾಜರ ಹೆಸರಿಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಘನ ಉಪಸ್ಥಿತಿವಹಿಸಿ ಮಾತನಾಡಿ ಭಗವಾನ್ ಮಹಾವೀರರು ನಮಗೆ “ಬದುಕು ಮತ್ತು ಬದುಕಲು ಬಿಡಿ” ಎಂಬ ದೈವಿಕ ಸಂದೇಶವನ್ನು ನೀಡಿದರು. ನಾವು ಅವರ ದೈವಿಕ ಸಂದೇಶದಿಂದ ಸ್ಫೂರ್ತಿ ಪಡೆದು, ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು. “ಮೋಕ್ಷವನ್ನು ಪಡೆದ ಭಗವಾನ್ ಬಾಹುಬಲಿ, ಮಾನವನ ಆಧ್ಯಾತ್ಮಿಕ ಉನ್ನತಿ ಮತ್ತು ಮಾನಸಿಕ ಶಾಂತಿಗಾಗಿ ನಾಲ್ಕು ತತ್ವಗಳನ್ನು ಪ್ರತಿಪಾದಿಸಿದರು: ಅಹಿಂಸೆಯ ಮೂಲಕ ಸಂತೋಷ, ತ್ಯಾಗದ ಮೂಲಕ ಶಾಂತಿ, ಸ್ನೇಹದ ಮೂಲಕ ಪ್ರಗತಿ ಮತ್ತು ಧ್ಯಾನದ ಮೂಲಕ ಸಾಧನೆ ಎಂಬ ಸಂದೇಶ ನೀಡಿದ್ದರು. ಈ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ವಿಶ್ವ ಶಾಂತಿ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ” ಎಂದು ರಾಜ್ಯಪಾಲರು ಹೇಳಿದರು.

“ಜೈನ ಧರ್ಮವು ಪ್ರಾಚೀನ ಶ್ರವಣ ಸಂಪ್ರದಾಯದಿಂದ ಪಡೆದ ಧರ್ಮವಾಗಿದ್ದು, ಇದನ್ನು ಭಗವಾನ್ ಋಷಭದೇವ ಮತ್ತು ನಂತರದ ತೀರ್ಥಂಕರರು ಉತ್ತೇಜಿಸಿದರು. 24 ನೇ ತೀರ್ಥಂಕರರಾದ ಭಗವಾನ್ ಮಹಾವೀರ ಸ್ವಾಮಿಗಳು ಇದಕ್ಕೆ ವ್ಯವಸ್ಥಿತ ರೂಪ ನೀಡಿದರು. ಭಗವಾನ್ ಮಹಾವೀರ ಸ್ವಾಮಿಗಳು ಸತ್ಯ, ಅಹಿಂಸೆ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಮತ್ತು ಸ್ವಾಧೀನ ಮಾಡದಿರುವುದು ಮುಂತಾದ ತತ್ವಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಹಾದಿಯನ್ನು ಬೆಳಗಿಸಿದರು. ಅವರು “ಅಹಿಂಸಾ ಪರಮೋ ಧರ್ಮಃ” ಎಂದು ಹೇಳುತ್ತಿದ್ದರು, ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ದೈಹಿಕ ಹಿಂಸೆಯಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿಯೂ ಸಹಾನುಭೂತಿ ಇರಬೇಕು ಎಂದು ಅವರು ನಮಗೆ ಕಲಿಸಿದರು.ಇಂದಿನ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಮಹಾವೀರ ಸ್ವಾಮಿಗಳ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ” ಎಂದು ತಿಳಿಸಿದರು.“ಆಚಾರ್ಯ ಶ್ರೀ ಶಾಂತಿಸಾಗರ್ ಮಹಾರಾಜ್ ಸಂಯಮದ ಜೀವಂತ ಸಾಕಾರವಾಗಿದ್ದರು. ಆಧ್ಯಾತ್ಮಿಕ ಜೀವನವು ಧರ್ಮಗ್ರಂಥಗಳಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲೂ ಇದೆ ಎಂದು ಅವರು ಪ್ರದರ್ಶಿಸಿದರು.

ಜೈನ ಧರ್ಮದ ಅದ್ಭುತ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿರುವ ಅವರು ಸಂಯಮ ಮತ್ತು ಧ್ಯಾನದ ಆದರ್ಶಗಳಿಂದ ಸಮಾಜವನ್ನು ಬೆಳಗಿಸಿದ್ದಾರೆ ಎಂದು ತಿಳಿಸಿದರು.ಒಬ್ಬ ಅನ್ವೇಷಕನು ದೃಢನಿಶ್ಚಯ, ಆತ್ಮವಿಶ್ವಾಸ ಮತ್ತು ಸತ್ಯದ ಹಾದಿಯಲ್ಲಿ ನಡೆದಾಗ, ಯುಗಗಳ ಹರಿವು ಕೂಡ ಅವನ ಭಕ್ತಿಯ ಮುಂದೆ ತಲೆಬಾಗುತ್ತದೆ ಎಂಬುದಕ್ಕೆ ಅವರ ಜೀವನ ಸಾಕ್ಷಿಯಾಗಿದೆ. ಅವರ ಹೆಸರಿನಲ್ಲಿರುವ “ಶಾಂತಿ” ಮತ್ತು “ಸಾಗರ” ಎಂಬ ಪದಗಳು ಅವರ ವ್ಯಕ್ತಿತ್ವದ ಸಾರವನ್ನು ಸಾಕಾರಗೊಳಿ ಸುತ್ತವೆ. ಶಾಂತಿಯು ಬಾಹ್ಯ ಸಂದರ್ಭಗಳಿಂದಲ್ಲ, ಆದರೆ ಸ್ವಯಂ ನಿಯಂತ್ರಣ ಮತ್ತು ವಿವೇಕಯುತ ನಡವಳಿಕೆ ಯಿಂದ ಉಂಟಾಗುತ್ತದೆ ಎಂದು ತೋರಿಸಿದರು. ಸಾಗರದಂತೆ, ಅವರ ಹೃದಯವು ವಿಶಾಲವಾಗಿತ್ತು – ತನ್ನೊಳಗಿನ ಪ್ರತಿಯೊಬ್ಬರನ್ನು ಒಳಗೊಳ್ಳುತ್ತಿತ್ತು, ಎಲ್ಲರಿಗೂ ಯೋಗಕ್ಷೇಮದ ಮನೋಭಾವ ದಿಂದ ತುಂಬಿತ್ತು” ಎಂದು ಶ್ಲಾಘಿಸಿದರು.

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ರೀಕ್ಷೇತ್ರ ಶ್ರವಣಬೆಳ ಗೊಳದ ನಾಲ್ಕನೇ ಬೆಟ್ಟಕ್ಕೆ ಪದನಾಮ ಅನಾವರಣ ಮಾಡಿ ಮಾತನಾಡಿದ ಅವರು ಶ್ರವಣಬೆಳಗೊಳ ಭಾರತದ ಪ್ರಾಚೀನ ನಾಗರಿಕತೆಯ ಮುಕುಟಮಣಿಯಾಗಿದೆ ಇಲ್ಲಿನ ಚಂದ್ರಗಿರಿಯಲ್ಲಿ 2000 ವರ್ಷಗಳ ಹಿಂದೆ ಮೌರ್ಯ ವಂಶದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ಸಲ್ಲೇಖನ ವ್ರತದ ಮೂಲಕ ಜಿನಪಾದ ಸೇರಿದ ಇತಿಹಾಸವಿದೆ ಇಂದು ಅನಾವರಣಗೊಂಡಿರುವ ಶಾಂತಿ ಸಾಗರ ಸ್ವಾಮೀಜಿಯ ವರ ಪ್ರತಿಮೆಯು ಮುಂದಿನ ಪೀಳಿಗೆಗೂ ಅವರು ಹಾಕಿ ಕೊಟ್ಟ ಸನ್ಮಾರ್ಗವನ್ನು ತೋರಿಸುವ ಸಂಕೇತವಾಗಿದೆ ಎಂದು ತಿಳಿಸಿದರು.ಪರಮಪೂಜ್ಯ ತಪಶ್ಚರ್ಯಾ ಚಕ್ರವರ್ತಿ ಆಚಾರ್ಯ ಶ್ರೀ 108 ಸುವಿಧಿಸಾಗರ ಮಹಾರಾಜರು, ಪರಮಪೂಜ್ಯ ಸಂಯಮ ಮೂರ್ತಿ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮಹಾರಾಜರು (ದಕ್ಷಿಣ), ಪ.ಪೂ. ನಿರ್ಯಾಪಕ ಶ್ರಮಣ ಮುನಿಶ್ರೀ 108 ಧರ್ಮಸಾಗರ, ಪ.ಪೂ. ನಿರ್ಯಾಪಕ ಶ್ರಮಣ ಮಹಾರಾಜರು ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರು, ಪ.ಪೂ. ನಿರ್ಯಾಪಕ ಶ್ರಮಣ ಮುನಿಶ್ರೀ 108 ಸಿದ್ಧಾಂತಸಾಗರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಂದಾಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್. ಬಾಲಕೃಷ್ಣ,ಬೆಳಗಾವಿ ದಕ್ಷಿಣದ ಶಾಸಕ ಅಭಯ್ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

You cannot copy content of this page

Exit mobile version