ಹಾಸನ :ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಹಾಸನ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಸವಿತಾ ಸಮಾಜದ ನಾಯಕರಿಂದ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.
ಚಿಕ್ಕಮಗಳೂರು ರೂರಲ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಮೂಲಕ ನಡೆಸಿದ ಮಾತುಕತೆಯಲ್ಲಿ ಸಿ.ಟಿ.ರವಿ ಅವರು ಸವಿತಾ ಸಮಾಜವನ್ನು ನಿಂದಿಸುವ ಪದವನ್ನು ಬಳಸಿರುವ ದೃಶ್ಯ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಇದು ಸವಿತಾ ಸಮಾಜದ ಸದಸ್ಯರ ವೃತ್ತಿ ಮತ್ತು ಜಾತಿಗೆ ಅವಮಾನ ಎಸಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಈ ಸಂಬಂಧ ಹಾಸನ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಂಗಳಾಪುರ ನಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಸವಿತಾ ಸಮಾಜದ ನಗರಾಧ್ಯಕ್ಷ ಮುರುಗೇಶ್ ಮತ್ತು ಹಲವರು ಸಹಿ ಮಾಡಿರುವ ದೂರು ಪತ್ರವನ್ನು ವೃತ್ತ ನಿರೀಕ್ಷರಿಗೆ ಸಲ್ಲಿಸಲಾಯಿತು.
“ವಿಧಾನ ಪರಿಷತ್ ಸದಸ್ಯರ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಅಸಂವಿಧಾನಿಕ ಹಾಗೂ ಜಾತಿ ಅವಹೇಳನಕಾರಿ ಪದ ಬಳಕೆ ಜನರಮನಗಳಿಗೆ ನೋವು ತಂದಿದ್ದು, ಸಂಬಂಧಿತ ವಿಧಿನಿಯಮಗಳಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ,” ಎಂದು ಆಗ್ರಹಿಸಿದ್ದಾರೆ.
