ಹಾಸನ : “ಜಿಲ್ಲಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸದಿದ್ದರೆ ಜನರೇ ಜಿಲ್ಲಾಧಿಕಾರಿಯನ್ನು ಸರಿ ಮಾಡುತ್ತಾರೆ,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಟೀಕೆ:
“ಹಾಸನಾಂಬ ಜಾತ್ರೆಯಲ್ಲಿ ಎಡಿಆರ್‌ಒ ಸಂಶುದ್ದಿನ್ ನನ್ನೊಂದಿಗೆ ನಡೆದುಕೊಂಡು ಬಂದರು ಎಂಬ ಕಾರಣಕ್ಕೆ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದಾರೆ. ಅಧಿಕಾರಿಗಳು ಶಾಸಕರೊಂದಿಗೆ ಮಾತನಾಡಬಾರದೇ? ಪ್ರಾಮಾಣಿಕ ಅಧಿಕಾರಿಯನ್ನು ಶಿಕ್ಷಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದರು.
“ಮುಸ್ಲಿಂರು ಕಾಂಗ್ರೆಸ್‌ಗೆ ಮತ ಹಾಕದಿದ್ದರೆ 136 ಸ್ಥಾನ ಗೆಲ್ಲುತ್ತಿರಲಿಲ್ಲ. ಆದರೆ ಈಗ ಅವರಿಗೂ ಭದ್ರತೆ ಇಲ್ಲವಾಗಿದೆ. ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅವಧಿಯಲ್ಲೂ ನೆಮ್ಮದಿ ಇರಲಿಲ್ಲ, ಈಗ ಕಾಂಗ್ರೆಸ್ ಅವಧಿಯಲ್ಲೂ ಅದೇ ಪರಿಸ್ಥಿತಿ,” ಎಂದು ಟೀಕಿಸಿದರು.
ಜಿಲ್ಲಾಧಿಕಾರಿಯ ವಿರುದ್ಧ ಕಿಡಿಕಾರಿದ ರೇವಣ್ಣ
“ಮಹಾನಗರ ಪಾಲಿಕೆ ಆಯುಕ್ತರನ್ನು ಕಡ್ಡಾಯ ರಜೆಗೆ ಕಳಿಸಿದ ಕಾರಣವನ್ನು ಸರ್ಕಾರ ಸ್ಪಷ್ಟಪಡಿಸಬೇಕು. 15 ದಿನಗಳಿಂದ ಬಯೋಮೆಟ್ರಿಕ್ ವ್ಯವಸ್ಥೆ ಸ್ಥಗಿತಗೊಂಡಿದೆ. ಅಧಿಕಾರಿಗಳ ಕೊರತೆಯಿಂದ ಕಾರ್ಯಗಳಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ,” ಎಂದು ಅವರು ದೂರಿದರು.
“ಈ ಜಿಲ್ಲಾಧಿಕಾರಿಗೆ ಹೆದರಿ ಅಪರ ಜಿಲ್ಲಾಧಿಕಾರಿ ಹುದ್ದೆಗೆ ಯಾರೂ ಬರುವುದಿಲ್ಲ. ವಿ.ಮಂಜುನಾಥ್ ಒಬ್ಬರೇ 14 ಹುದ್ದೆಗಳ ಪ್ರಭಾರ ನಿಭಾಯಿಸುತ್ತಿದ್ದಾರೆ. ಎಸಿ ಮಾರುತಿ ಹಾಗೂ ಅಬಕಾರಿ ಡಿಸಿ ಸಹ ವರ್ಗಾವಣೆ ಮಾಡಿಸಿಕೊಂಡು ಹೋದರು,” ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
“ಕಾರಿನಲ್ಲಿ ಓಡಾಡಿ ಜನರ ಸಮಸ್ಯೆ ಬಗೆಹರಿಸಲಿ”
“ಡಿಸಿ, ಬೈಕ್ ಅಥವಾ ಸೈಕಲ್‌ನಲ್ಲಿ ತಿರುಗಾಡುವುದಕ್ಕಿಂತ ಸರ್ಕಾರ ಕೊಟ್ಟ ಕಾರಿನಲ್ಲಿ ಹೊರಟು ಜನರ ಸಮಸ್ಯೆ ಬಗೆಹರಿಸಲಿ,” ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
“ಜಿಲ್ಲಾಧಿಕಾರಿಯ ದುರಹಂಕಾರಿ ವರ್ತನೆ ಮೀರಿ ಹೋಗಿದೆ. ಆಡಳಿತ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಕುಸಿಯುತ್ತಿದೆ,” ಎಂದು ಅವರು ಕಿಡಿಕಾರಿದರು.
