Friday, April 26, 2024

ಸತ್ಯ | ನ್ಯಾಯ |ಧರ್ಮ

ಜನ ಮರುಳೋ ಜಾತ್ರೆ ಮರುಳೋ ಹಾಸನಾಂಬಾ

ವರ್ಷದಿಂದ ವರ್ಷಕ್ಕೆ ದೀಪಾವಳಿ ಸಮಯದಲ್ಲಿ ಹಾಸನಾಂಬ ದೇವಸ್ಥಾನದ ಮುಂದೆ ಹತ್ತಾರು ಕಿಲೋಮೀಟರ್ ನಷ್ಟು ಸರದಿ ಸಾಲು ಬೆಳೆಯುತ್ತಲೇ ಇರುತ್ತದೆ. ದೇವಾಲಯದ ಆದಾಯ ಕೋಟಿಗಳಲ್ಲಿ ಹೆಚ್ಚುತ್ತಲೇ ಇರುತ್ತದೆ.  ಇದೇ ನಿಜವಾದ ಪವಾಡ. ಉಳಿದಿದ್ದೆಲ್ಲಾ ಪುರೋಹಿತಶಾಹಿಗಳ ಮುಖವಾಡ- ಶಶಿಕಾಂತ ಯಡಹಳ್ಳಿ

ಹಾಸನದ ಹಾಸನಾಂಬ ದೇವಿಯ ದೇವಸ್ಥಾನದಿಂದ ತರಾವರಿ ಸುದ್ದಿಗಳು ಮಾಧ್ಯಮದಲ್ಲಿ ಬ್ರೇಕಿಂಗ್ ನ್ಯೂಸ್‌ ಆಗಿ ಅಪ್ಪಳಿಸಿವೆ. ಎಂದೆಂದೂ ಇಲ್ಲದಷ್ಟು ಜನಸಾಗರ ದೇವಿ ದರ್ಶನಕ್ಕೆ ಹರಿದು ಬಂದಿದೆ. ಜನರನ್ನು ನಿಯಂತ್ರಿಸುವುದೇ ಪೊಲೀಸ್ ಇಲಾಖೆಗೆ ಹರಸಾಹಸವಾಗಿದೆ. ಡಿಸಿ ಎಸಿ ಎಸ್ಪಿಗಳು ಬಹಿರಂಗವಾಗಿಯೇ ಜಗಳಾಡಿದ್ದಾರೆ. ಹತ್ತಾರು ಕಿಲೋಮೀಟರ್ ಉದ್ದದ ಸರದಿ ಸಾಲಿನಲ್ಲಿ ಕೂಡಲೂ ಆಗದೇ ನಿಂತು, ತಿನ್ನಲೂ ಏನೂ ಸಿಗದೇ ಹಸಿದು, ಉಸಿರು ಬಿಗಿಹಿಡಿದು ದರ್ಶನಕ್ಕಾಗಿ ಹತ್ತು ಹನ್ನೆರಡು ಗಂಟೆಗಳ ಕಾಲ ಭಕ್ತ ಜನರು ಕಾಯುತ್ತಿರುವುದನ್ನು ನೋಡುವುದು ಸಂಭ್ರಮಕ್ಕಿಂತಾ ಸಂಕಟದ ಸಂಗತಿ. ಆದರೂ ಭಕ್ತಿಯೆಂಬ ಭಾವನಾತ್ಮಕ ಶಕ್ತಿಯ ಮುಂದೆ ಈ ಸಂಕಟಗಳೆಲ್ಲಾ ನಗಣ್ಯ. ಎಲ್ಲರಿಗೂ ಬೇಕಿರುವುದು ಆ ದೇವಿಯ ಕಾರುಣ್ಯ.

ಬಸವಣ್ಣನವರು ಹೇಳಿದಂತೆ ದೈವ ದೈವವೆಂದು ಕಾಲಿಡಲೂ ಇಂಬಿಲ್ಲದಂತಾಗಿರುವಾಗ, ಈ ದೇಶದಲ್ಲಿ ಶಾಲೆಗಳಿಗಿಂತಾ ಎಲ್ಲಿ ನೋಡಿದಲ್ಲಿ ದೇವಾಲಯಗಳೇ ಅಧಿಕ ಸಂಖ್ಯೆಯಲ್ಲಿ ಇರುವಾಗ ಯಾಕೆ ಈ ಹಾಸನಾಂಬ ದೇವಿಯ ದರ್ಶನಕ್ಕೆ ಜನರು ಹೀಗೆ ಮುಗಿಬಿದ್ದು ಬರ್ತಿದ್ದಾರೆ? ಸಿದ್ದರಾಮಯ್ಯನವರ ಸರಕಾರ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿರುವುದೂ ಒಂದು ಕಾರಣವಾದರೆ ಅದಕ್ಕಿಂತಾ ದೊಡ್ಡ ಕಾರಣ ಹಾಸನಾಂಬೆಯ ಪವಾಡ. ಈ ಪವಾಡವೇ ಜನರಲ್ಲಿ ಭಕ್ತಿಭಾವ ಉಲ್ಬಣಕ್ಕೆ ನಿಜ ಕಾರಣ. ಸಕ್ಕರೆ ಇದ್ದಲ್ಲಿ ಇರುವೆಗಳಿದ್ದಂತೆ ಪವಾಡಗಳಿದ್ದಲ್ಲಿ ಭಕ್ತರು ಸೇರುತ್ತಾರೆ. ಅಂತಹ ಪವಾಡಗಳನ್ನು  ದೇವಸ್ಥಾನದ ಪುರೋಹಿತರು ಹಾಗೂ ಆಡಳಿತ ಮಂಡಳಿ ಕಾಲಕಾಲಕ್ಕೆ ಸೃಷ್ಟಿಸುತ್ತಲೇ ಬಂದಿದ್ದಾರೆ. ಯಾಕೆಂದರೆ ಈ ದೇಶದಲ್ಲಿ ದೇವಸ್ಥಾನಗಳು ಭಕ್ತರಿಗೆ ಶ್ರದ್ಧಾ ಕೇಂದ್ರಗಳಾದರೆ, ದೇವಸ್ಥಾನಗಳ ಮುಖ್ಯಸ್ಥರಿಗೆ ಆದಾಯ ತರುವ ಉದ್ಯಮವಾಗಿದೆ. ರಾಜಕೀಯ ನಾಯಕರುಗಳಿಗೆ ಭಕ್ತರ ಮತ ಸೆಳೆಯುವ ಭಾವಕೇಂದ್ರಗಳೂ ಆಗಿವೆ. ಹೀಗಾಗಿ ಬಹುತೇಕ ದೇವಸ್ಥಾನಗಳಲ್ಲಿ ಏನೋ ಒಂದು ಪವಾಡ ಪ್ರದರ್ಶನ ಕುರಿತ ಕತೆಗಳು ದಂತಕತೆಗಳು ಹುಟ್ಟಿರುತ್ತವೆ ಹಾಗೂ ಹುಟ್ಟಿಸಲಾಗಿರುತ್ತದೆ.

ಹಾಸನಾಂಬ ದೇವಸ್ಥಾನವು ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಮಾತ್ರ ಹದಿನೈದು ದಿವಸಗಳ ಕಾಲ ಬಾಗಿಲು ತೆಗೆದಿರುತ್ತದೆ. ಮೊದಲ ದಿನ ಹಾಗೂ ಕೊನೆಯ ದಿನ ಅರ್ಚಕರಿಗೆ ಮೀಸಲು. ಹೀಗಾಗಿ ಅತೀ ಕಡಿಮೆ ದಿನ ದರ್ಶನ ಕೊಡುವ ಹಾಸನಾಂಬಳ ದರ್ಶನ ಮಾಡಿ ಪುನೀತರಾಗಲು ಜನ ಹಾತೊರೆಯುತ್ತಾರೆ. ಹಾಸನಾಂಬೆಯ ಆಕರ್ಷಣೆ ಇರೋದು ಆ ದೇವಿ ಮಾಡುವ ಪವಾಡದಲ್ಲಿ. ಅದ್ಯಾವುದಪ್ಪಾ ಅಂಥಾ ಪವಾಡ? ಈ ವರ್ಷ ಹಚ್ಚಿಟ್ಟ ಹಣತೆ ಎಣ್ಣೆ ಇಲ್ಲದೇ ಮುಂದಿನ ವರ್ಷದ ವರೆಗೂ ಉರಿಯುತ್ತಲೇ ಇರುತ್ತದಂತೆ! ದೇವತೆ ಮುಂದಿಟ್ಟ ಅನ್ನದ ನೈವೇದ್ಯ ವರ್ಷವಾದರೂ ಕೆಡದೇ ಹಳಸದೇ ಪ್ರೆಶ್ ಆಗಿಯೇ ಇರುತ್ತದಂತೆ! ದೇವಿಗೆ ಹಾಕಿದ ಹೂವಿನ ಮಾಲೆ ವರ್ಷ ಕಳೆದರೂ ಬಾಡದೇ ಬತ್ತದೇ ಹಾಗೆಯೇ ಇರುತ್ತದಂತೆ! ಹೀಗೆ, ಅಂತೆ ಕಂತೆಗಳ ಸಂತೆ ಸುದ್ದಿಗಳು ದೇವಿಯ ಸುತ್ತ ಸುತ್ತಿ ಭಕ್ತಾದಿಗಳ ಮೆದುಳಲ್ಲಿ ನಂಬಿಕೆಯ ಹುತ್ತವನ್ನೇ ಕಟ್ಟಿದೆ. ನಂಬಿಸುವವರು ಇರುವವರೆಗೂ ನಂಬುವವರೂ ಇದ್ದೇ ಇರುತ್ತಾರೆ. ಮುಂದೊಮ್ಮೆ ನಂಬಿಸುವವರೇ ಅಲ್ಲಗಳೆದರೂ ನಂಬಿಕೆ ಜನತೆಯ ಭಾವಕೋಶದಲ್ಲಿ ಮೊಳೆಯುತ್ತಾ ಬೆಳೆಯುತ್ತಾ ಜನಮಾನಸದಲ್ಲಿ ಪಸರಿಸುತ್ತಾ ಹೋಗುತ್ತದೆ.

ಇಲ್ಲಿಯೂ ಆಗಿದ್ದು ಹಾಗೆಯೇ. ಈ ದೇವಿಯ ಪವಾಡ ಜನಮಾನಸದಲ್ಲಿ ಬೆರೆತು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ದ್ವಿಗುಣಗೊಳ್ಳತ್ತಲೇ ಹೋಗಿ ಈ ಪವಾಡಾಂಬೆಯನ್ನು ನೋಡಲು ಕೇವಲ ಹಾಸನ ಮಾತ್ರವಲ್ಲ ಇಡೀ ನಾಡಿನ ಮೂಲೆ ಮೂಲೆಗಳಿಂದ ಜನರು ಬರತೊಡಗಿದ್ದಾರೆ. ಅನ್ಯ ರಾಜ್ಯಗಳಲ್ಲೂ ಈ ದೇವಿಯ ಪವಾಡ ಜನಜನಿತವಾಗಿ ಭಕ್ತರ ಸಂಖ್ಯೆ ಏರುಮುಖವಾಗಿದೆ.

ಆದರೆ ಎಲ್ಲವನ್ನೂ ಒರೆಗೆ ಹಚ್ಚಿ ನೋಡುವ ಪ್ರಜ್ಞಾವಂತರೂ ಇದ್ದಾರಲ್ಲಾ… ಅಂತವರು ಈ ಪವಾಡವನ್ನು ಪ್ರಶ್ನಿಸ ತೊಡಗಿದರು. “ಎಣ್ಣೆ ಇಲ್ಲದೇ ದೀಪ ವರ್ಷಗಳ ಕಾಲ ಉರಿಯುವುದು, ಅನ್ನ ಹಳಸದಿರುವುದು, ಹೂ ಬಾಡದಿರುವುದು ಪ್ರಕೃತಿ ಧರ್ಮಕ್ಕೆ ವಿರುದ್ಧ. ಇದೆಲ್ಲಾ ಪುರೋಹಿತರು ಜನರನ್ನು ಮರುಳು ಮಾಡಲು ಹೂಡಿದ ನಾಟಕ” ಎಂದು ತಾತ್ವಿಕವಾಗಿ ಪ್ರಶ್ನಿಸತೊಡಗಿದರು. ವರ್ಷದ ನಂತರ ದೇವಸ್ಥಾನದ ಬಾಗಿಲು ತೆರೆದಾಗ ತಮಗೂ ಈ ಪವಾಡಗಳನ್ನು ಕಣ್ಣಾರೆ ನೋಡಲು ಅವಕಾಶ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸ ತೊಡಗಿದರು. ಸರಕಾರದ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಸ್ಥಾನದ ಕೀಲಿ ಕೈ ಜಿಲ್ಲಾಧಿಕಾರಿಗಳ ಬಳಿ ಇರುತ್ತದೆ. ಅವರೇ ಪ್ರತಿ ವರ್ಷ ಬಂದು ದೇವಸ್ಥಾನದ ಬಾಗಿಲು ತೆರೆದು ದರ್ಶನದ ಕಾಲಾವಧಿ ಮುಗಿದ ನಂತರ ಬಾಗಿಲನ್ನು ಸೀಲ್ ಮಾಡುತ್ತಾರೆ. ಮತ್ತೆ ಈ ಬಾಗಿಲು ತೆರೆಯುವುದು ಒಂದು ವರ್ಷದ ನಂತರವೇ.

ಹಾಗೆ ಬಾಗಿಲು ತೆರೆದ ಮೊದಲ ದಿನ ಅರ್ಚಕರನ್ನು ಹೊರತು ಪಡಿಸಿ ಯಾರನ್ನೂ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಿಡುವುದಿಲ್ಲ. ಸ್ವತಃ ಜಿಲ್ಲಾಧಿಕಾರಿಗಳಿಗೇ ಒಳಗೆ ಪ್ರವೇಶವಿಲ್ಲ. ಹೀಗಾಗಿ ವರ್ಷಗಳ ಕಾಲ ದೀಪ ಬೆಳಗಿದ್ದನ್ನ, ಅನ್ನ ಹಳಸದೇ ಇರುವುದನ್ನ ಅರ್ಚಕರನ್ನು ಹೊರತು ಪಡಿಸಿ ಬೇರೆ ಯಾರೂ ನೋಡಲು ಅವಕಾಶವಿಲ್ಲ. ಅರ್ಚಕರು ಗರ್ಭ ಗುಡಿಯನ್ನು ಸ್ವಚ್ಛಗೊಳಿಸಿ, ದೇವತೆಗಳನ್ನು ಸಿಂಗರಿಸಿ, ದೀಪವನ್ನು ಬೆಳಗಿಸಿ, ಹೊಸ ಹೂಹಾರಗಳನ್ನು ಹಾಕಿ, ನೈವೇದ್ಯವನ್ನೂ ದೇವಿಗರ್ಪಿಸಿ ಸರ್ವ ಸಿದ್ಧತೆಗಳು ಮುಗಿದ ನಂತರವೇ ಭಕ್ತರ ದರ್ಶನಕ್ಕೆ ದೇವರ ಬಾಗಿಲು ತೆರೆಯುವುದು. ಅರ್ಚಕರು ಹೇಳಿದ ಪವಾಡಗಳನ್ನು ಕಣ್ಣಾರೆ ಕಂಡವರು ಯಾರೂ ಇಲ್ಲದಿದ್ದರೂ ಕಿವಿಯಾರೇ ಕೇಳಿದವರೇ ಸರದಿ ಸಾಲಿನಲ್ಲಿ ನಿಲ್ಲುವವರು.

ಈ ತೆರೆಮರೆಯ ಚಟುವಟಿಕೆಗಳನ್ನು ನಮಗೂ ತೋರಿಸಿ ಎಂದು ಯಾವಾಗ ಪ್ರಗತಿಪರರು ಎನ್ನಿಸಿಕೊಂಡವರು ಜಿಲ್ಲಾಡಳಿತವನ್ನು ಒತ್ತಾಯಿಸ  ತೊಡಗಿದರೋ ಆಗ ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಡಲು ಅರ್ಚಕರನ್ನು ಕೇಳಿದರು. ಎಲ್ಲಿ ಪವಾಡದ ರಹಸ್ಯ ಬಯಲಾಗಿ ತಾವು ಕಟ್ಟಿ ಪಸರಿಸಿದ ಕಟ್ಟು ಕತೆ ಬಯಲಾಗುತ್ತದೋ ಎಂದು ಬೆಚ್ಚಿ ಬಿದ್ದ ಅರ್ಚಕ ಸಮೂಹ ಸತ್ಯವನ್ನು ಹೇಳಲೇ ಬೇಕಾಯ್ತು. ಹಾಸನಾಂಬ ದೇವಾಲಯದ ಪ್ರಮುಖ ಅರ್ಚಕರೇ ಮಾಧ್ಯಮಗಳ ಮುಂದೆ ಬಂದು ಪವಾಡಗಳನ್ನೇ ನಿರಾಕರಿಸಿ ಹೇಳಿಕೆಯನ್ನಿತ್ತರು. “ಇಲ್ಲಿ ಯಾವುದೇ ಪವಾಡಗಳು ನಡೆಯುವುದಿಲ್ಲ. ಜನರು ಶ್ರದ್ಧೆ ಹಾಗೂ ಭಕ್ತಿಯಿಂದ ಕೇಳಿಕೊಂಡರೆ ಅವರ ಮನದಿಚ್ಚೆ ನೆರವೇರುವುದು. ಎಲ್ಲವೂ ಭಕ್ತರ ಭಾವ ಭಕ್ತಿ ನಂಬಿಕೆಗೆ ಬಿಟ್ಟ ವಿಚಾರ. ಪವಾಡ ಎನ್ನುವುದು ಕಟ್ಟುಕತೆ” ಎಂದು ಸಾರ್ವಜನಿಕವಾಗಿಯೆ ಸಮಜಾಯಿಷಿ ಕೊಟ್ಟು ನಿಟ್ಟುಸಿರಿಟ್ಟರು. ಇದು ಸುದ್ದಿ ಮಾಧ್ಯಮಗಳಲ್ಲೂ ಬಿತ್ತರ ಗೊಂಡಿತು. ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು. ಆದರೂ ಭಕ್ತರ ಸಂಖ್ಯೆ ಇಳಿಯುವ ಬದಲು ಹೆಚ್ಚುತ್ತಲೇ ಹೋಯಿತು.

ನಂಬಿಕೆಯೆಂಬುದೇ ಹೀಗೆ ಅಫೀಮಿನ ಹಾಗೆ. ಒಂದು ಸಲ ಅಫೀಮಿನ ವ್ಯಸನಕ್ಕೆ ಬಿದ್ದ ವ್ಯಕ್ತಿಗೆ ನಶೆ ಒಳ್ಳೆಯದಲ್ಲ ಎಂದು ನೀವು ಅದೆಷ್ಟೇ ತಿಳಿಸಿ ಹೇಳಿದರೂ ಭ್ರಮಾಪೀಡಿತನಾದ ಆತ ನಂಬುವ ಸ್ಥಿತಿಯಲ್ಲೂ ಇರುವುದಿಲ್ಲ ಹಾಗೂ ತನ್ನ ವ್ಯಾಪ್ತಿಗೆ ಬರುವ ಎಲ್ಲರಿಗೂ ಅಫೀಮಿನಲ್ಲಿರುವ ಆನಂದದ ಬಗ್ಗೆ ಹೇಳುತ್ತಲೇ ಇರುತ್ತಾನೆ. ಈ ದೈವ ಭಕ್ತಿ ಎಂಬುದೂ ಅಫೀಮಿದ್ದಂತೆ ಎಂದು ಕಾರ್ಲ್ ಮಾರ್ಕ್ಸ್ ಎಂದೋ ಹೇಳಿಯಾಗಿದೆ. 

ಮಕರ ಜ್ಯೋತಿ

ಶಬರಿಮಲೆಯ ಆಗಸದಲ್ಲಿ ಪ್ರತಿವರ್ಷ ಜನವರಿಯ ಮಕರ ಸಂಕ್ರಾಂತಿಯ ದಿನ ಗೋಚರಿಸುವ ಮಕರಜ್ಯೋತಿ ಅಯ್ಯಪ್ಪ ಸ್ವಾಮಿಯ ಪವಾಡವೆಂದೇ ಜನರನ್ನು ಶತಮಾನಗಳ ಕಾಲ ನಂಬಿಸಿ ಭಕ್ತಸಮೂಹವನ್ನು ಮರಳು ಮಾಡಲಾಗಿತ್ತು. ಅದು ಪವಾಡವಲ್ಲಾ ಕಾಡುಜನರು ಹಚ್ಚುವ ಬೆಂಕಿ ಎಂದು ಪ್ರಗತಿಪರರು ಎಷ್ಟೇ ಹೇಳಿದರೂ ದೇವಳದ ಆಡಳಿತ ನಿರಾಕರಿಸುತ್ತಲೇ ಬಂದಿತ್ತು. ಯಾವಾಗ ಪವಾಡದ ಹಿಂದಿನ ಅಸಲಿಯತ್ತು ಬಯಲಾಯಿತೋ ಆಗ ಅರ್ಚಕ ವರ್ಗ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಯ್ತು. ಮಕರಜ್ಯೋತಿ ಪವಾಡವಲ್ಲ ಎಂದು ಹೇಳಲೇ ಬೇಕಾಯ್ತು. ಆದರೆ ಸುಳ್ಳಿನ ಮತ್ತಿನ ಭ್ರಮೆಯಲ್ಲಿ ತೇಲಾಡುತ್ತಿರುವ ಭಕ್ತರು ಸತ್ಯವನ್ನು ಸತ್ಯವೆಂದು  ನಂಬಲು ತಯಾರಿಲ್ಲ. ಪವಾಡ ಅಲ್ಲವೆಂದವರ ಮೇಲೇಯೇ ಜಗಳಕ್ಕೆ ನಿಲ್ಲುತ್ತಾರೆ. ದೈವದ್ರೋಹಿ ಪಟ್ಟ ಕಟ್ಟುತ್ತಾರೆ. ಧರ್ಮದ್ರೋಹಿ ಎಂದು ನಿಂದಿಸುತ್ತಾರೆ. ಈಗಲೂ ಮಕರಜ್ಯೋತಿಯನ್ನು ನೋಡಿ ಪುನೀತರಾಗಲು ತಿಂಗಳುಗಳ ಕಾಲ ವ್ರತ ಮಾಡಿ ಶಬರಿಮಲೆಗೆ ಭಕ್ತ ವೃಂದ ಹೋಗುತ್ತಲೇ ಇದೆ. ಅಲ್ಲಿ ಪವಾಡವಲ್ಲದ ಪವಾಡ ನಡೆಯುತ್ತಲೇ ಇದೆ.

ಅದೇ ರೀತಿ.. ನಮ್ಮ ಹಾಸನಾಂಬ ದೇವಿಯ ದೇವಸ್ಥಾನದಲ್ಲಿ ನಡೆಯುತ್ತದೆ ಎಂದು ನಂಬಲಾಗಿದ್ದು ಪವಾಡವೇ ಅಲ್ಲಾ ಎಂದು ಮುಖ್ಯ ಅರ್ಚಕರೇ ಹೇಳಿದ್ದರೂ, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದರೂ ಭಕ್ತಾದಿಗಳು ಅದನ್ನು ನಂಬಲು ಸಿದ್ಧರಾಗಿಲ್ಲ. ಸರದಿ ಸಾಲಿನಲ್ಲಿ ನಿಂತ ಯಾರನ್ನೇ ಕೇಳಿದರೂ ದೇವಿಯ ದೀಪದ ಪವಾಡದ ಬಗ್ಗೆ ಮಾತಾಡುತ್ತಾರೆ. ಬಾಡದ ಹೂಮಾಲೆ ಬಗ್ಗೆ ವಾದಿಸುತ್ತಾರೆ. ವರ್ಷಗಳ ಕಾಲ ತಾಜಾ ಇದ್ದ ನೈವೇದ್ಯವನ್ನು  ವರ್ಣಿಸುತ್ತಾರೆ. ಭಕ್ತಿ ಎಂಬ ಕುರುಡಿಗೆ, ಭಾವತೀವ್ರತೆಯ ಕನ್ನಡಕದ ಅಳವಡಿಕೆಗೆ ಕೊನೆ ಮೊದಲಿಲ್ಲ. ಅಂಧಶ್ರದ್ಧೆಯಲ್ಲಿ ಬಿದ್ದವರನ್ನು ಎಚ್ಚರಿಸಿ ಸತ್ಯದರ್ಶನ ಮಾಡಿಸುವುದು ಅಷ್ಟು ಸುಲಭವೂ ಅಲ್ಲ. ಸಂಕಟ ಸಮಸ್ಯೆಗಳಲ್ಲಿ ಬದುಕುತ್ತಿರುವ ಜನಕ್ಕೆ ಈ ದೈವ ನಂಬಿಕೆಗಳೇ ಮುಳುಗುವವನಿಗೆ ಹುಲ್ಲುಕಡ್ಡಿ ಆಶ್ರಯದಂತೆ ಅನಿವಾರ್ಯವಾಗಿದೆ. ಹೀಗಾಗಿ ಪವಾಡವನ್ನು ವಿರೋಧಿಸುವವರೂ ಸಹ “ಜನಮರುಳೋ ಜಾತ್ರೆ ಮರುಳೋ ಹಾಸನಾಂಬಾ” ಎಂದು ಕೇಳುವಂತಾಗಿದೆ. ‘ಉದ್ಭವ’ ಸಿನೆಮಾದ ಕೊನೆಗೆ ಧರ್ಮಾಧಿಕಾರಿಯಾದ ಅನಂತನಾಗ್ ಪ್ರಗತಿಪರರಿಗೆ ಒಂದು ಮಾತು ಹೇಳುತ್ತಾನೆ. ” ನೋಡಿ ಇಲ್ಲಿ ಇರುವ ಗಣೇಶ ಉದ್ಭವ ಮೂರ್ತಿಯಲ್ಲ.. ನಾನೇ ತಂದು ಪ್ರತಿಷ್ಠಾಪಿಸಿದ್ದು ಎಂದು ನೀವು ನೂರು ಜನ ಅದೆಷ್ಟೇ ಬಾಯಿ ಬಡಿದು ಕೊಂಡರೂ ಅಲ್ಲಿ ಭಕ್ತರ ಸಂಖ್ಯೆ ಸಾವಿರ ಸಾವಿರದಷ್ಟು ಹೆಚ್ಚುತ್ತಲೇ ಇರುತ್ತದೆ, ನಂಬಿಕೆಯ ಮುಂದೆ ನಿಮ್ಮ ವಿರೋಧ ಪ್ರತಿರೋಧ ಲೆಕ್ಕಕ್ಕಿಲ್ಲ”. ಈ ಮಾತು ಸತ್ಯವೂ ಆಗಿದೆ. ಪವಾಡಗಳನ್ನು ಬಯಲುಗೊಳಿಸಿ ಧರ್ಮೋದ್ಯಮಿಗಳ ಮುಖವಾಡ ಕಳಚಲು ಕೆಲವರು ಪ್ರಯತ್ನಿಸಿದರೆ, ದೈವ ನಂಬಿಕೆಯ ಅಫೀಮಿನ ನಶೆಯನ್ನು ಜನರ ಭಾವಕೋಶದಲ್ಲಿ ಪಸರಿಸಿ ಭಕ್ತರ ಸಂಖ್ಯೆ ನೂರ್ಮಡಿ ಮಾಡುವವರು ಹಲವರಿದ್ದಾರೆ. ಈ ಅತಿಮಾನುಷ ಪವಾಡಗಳನ್ನು ನಂಬುವ ಅಗಣಿತ ಜನರೂ ದೈವಕೃಪೆಗೆ ಹಾತೊರೆಯುತ್ತಲೇ ಇರುತ್ತಾರೆ. ವರ್ಷದಿಂದ ವರ್ಷಕ್ಕೆ ದೀಪಾವಳಿ ಸಮಯದಲ್ಲಿ ಹಾಸನಾಂಬ ದೇವಸ್ಥಾನದ ಮುಂದೆ ಹತ್ತಾರು ಕಿಲೋಮೀಟರ್ ನಷ್ಟು ಸರದಿ ಸಾಲು ಬೆಳೆಯುತ್ತಲೇ ಇರುತ್ತದೆ. ದೇವಾಲಯದ ಆದಾಯ ಕೋಟಿಗಳಲ್ಲಿ ಹೆಚ್ಚುತ್ತಲೇ ಇರುತ್ತದೆ.  ಇದೇ ನಿಜವಾದ ಪವಾಡ. ಉಳಿದಿದ್ದೆಲ್ಲಾ ಪುರೋಹಿತಶಾಹಿಗಳ ಮುಖವಾಡ.

ದೇವರು ಯಾವುದೇ ಇರಲಿ ದೇವರ ದೃಷ್ಟಿಯಲ್ಲಿ ಜನರೆಲ್ಲಾ ಒಂದೇ ಎಂಬುದು ಎಲ್ಲಾ ಧರ್ಮಗಳು ಹೇಳುವ ಪ್ರವಚನ. ಆದರೆ ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಬೇರೆ ಬೇರೆ. ಹಾಸನಾಂಬ ದೇವಸ್ಥಾನದಲ್ಲಿ ಭಕ್ತರನ್ನು ಅವರ ಆರ್ಥಿಕ ಸಾಮರ್ಥ್ಯ ಮತ್ತು ಅಧಿಕಾರದ ಸ್ಥಾನಮಾನಗಳಿಂದ ವಿಭಜಿಸಲಾಗಿದೆ. ಸಾವಿರ ರೂಪಾಯಿ ತೆತ್ತವರಿಗೆ ಸ್ವಲ್ಪ ಶೀಘ್ರ ದರ್ಶನ ಅಂದರೆ ಒಂದರಿಂದ ಮೂರು ಗಂಟೆಗಳ ಸರದಿ ಸಾಲಿನ ದರ್ಶನವಾದರೆ, ಮುನ್ನೂರು ರೂಪಾಯಿ ಟಿಕೆಟ್ ಪಡೆದವರಿಗೆ ಸರದಿ ಸಾಲಲ್ಲಿ ಕಾಯುವ ಸಮಯ ಮೂರರಿಂದ ಆರು ಗಂಟೆ. ಅದೇ ಹಣ ಕೊಟ್ಟು ಟಿಕೇಟ್ ಪಡೆಯಲಾಗದ ಬಡವರಿಗೆ ಧರ್ಮದರ್ಶನ. ಅಂದರೆ ಹತ್ತಾರು ಕಿಮೀ ಕ್ಯೂನಲ್ಲಿ ಕನಿಷ್ಟ ಹತ್ತರಿಂದ ಹನ್ನೆರಡು ಗಂಟೆಗಳ ಸಮಯ ಸರದಿ ಸಾಲಿನಲ್ಲಿ ಕಳೆಯ ಬೇಕಿದೆ. ಅದೇ ಯಾವ ಹಣವನ್ನೂ ಕೊಡದೇ ವಿಐಪಿ ಹಾಗೂ ವಿವಿಐಪಿ ಪಾಸ್ ಇರುವ ಅತೀ ಗಣ್ಯ ಮಾನ್ಯರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಮುಖ್ಯ ದ್ವಾರದಿಂದ ನೇರ ಪ್ರವೇಶ ಮತ್ತು ಡೈರೆಕ್ಟ್ ದರ್ಶನ. ಈ ಗಣ್ಯರಂತೂ ಕುಟುಂಬ ಪರಿವಾರ ಸಮೇತರಾಗಿ ಬರುತ್ತಲೇ ಇರುತ್ತಾರೆ. ಹಲವಾರು ಗಂಟೆಗಳ ಕಾಲ ಸರದಿಯಲ್ಲಿ ನಿಂತು ಸಹನೆ ಕಳೆದುಕೊಂಡ ಭಕ್ತಾದಿಗಳಿಗೆ ಈ ನೇರ ಪ್ರವೇಶಾತಿ ಪಟಾಲಂ ಕಂಡಾಗೆಲ್ಲಾ ಅಸಹನೆ ಜಾಸ್ತಿಯಾಗುತ್ತದೆ. ಈ ಕುರಿತು ವಾದ ವಿವಾದ ಜಗಳಗಳು ಆಗಿ ಹೋಗಿವೆ. ಈ ಅಸಮಾನ ವ್ಯವಸ್ಥೆಯಲ್ಲಿ ದೈವಸನ್ನಿಧಿಯಲ್ಲಿಯೂ ಇರುವ ತಾರತಮ್ಯವನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆಯಾ? ದೇವಸ್ಥಾನಗಳೂ ವ್ಯಾಪಾರಿ ಕೇಂದ್ರಗಳಾಗಿರುವಾಗ ಆದಾಯ ಕೇಂದ್ರಿತ ವ್ಯವಸ್ಥೆಯನ್ನು ಪ್ರಶ್ನಿಸಲು ಆಗುತ್ತದೆಯಾ? ಪ್ರಜೆಗಳಿಗಿಂತಾ ಪ್ರಭುಗಳೇ ಈ ದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವಾಗ ವಿಐಪಿ ಸಂಸ್ಕೃತಿಯನ್ನು ನಿಷೇಧಿಸಲು ಸಾಧ್ಯವಾ? ಸರಕಾರದ ಮುಜರಾಯಿ ಇಲಾಖೆಯ ಅನುದಾನದಿಂದ ( ಅಂದರೆ ಜನರ ತೆರಿಗೆ ಹಣದಿಂದ) ನಡೆಯುವ ಈ ದೇವಿ ದರ್ಶನ ಕಾರ್ಯಕ್ರಮದಲ್ಲೂ ಆರ್ಥಿಕ ಕ್ರೋಢೀಕರಣ ಬೇಕಾಗಿತ್ತಾ. ಆರ್ಥಿಕ ಸ್ಥಿತಿಗತಿಗನುಗುಣವಾಗಿ ಭಕ್ತರನ್ನು ವಿಭಾಗೀಕರಿಸುವ ಅಗತ್ಯವಿತ್ತಾ? ಈ ರೀತಿ ತಾರತಮ್ಯ ಮಾಡುವವರಿಗೆ ದೇವಿಯ ಕೃಪಕಟಾಕ್ಷ ಸಿಗುತ್ತದಾ? ಪವಾಡಗಳನ್ನು ಹಾಸನಾಂಬೆ ಮಾಡುವುದೇ ದಿಟವಾದಲ್ಲಿ ಈ ಅಸಮಾನತೆಯನ್ನು ಹೋಗಲಾಡಿಸುವಂತಹ ಪವಾಡ ಮಾಡಲು ಸಾಧ್ಯವಿಲ್ಲವಾ? ಹೀಗೆ ಪ್ರಶ್ನೆಗಳು ಹಲವಾರಿವೆ. ಉತ್ತರಿಸಬೇಕಾದ ಅಧಿಕಾರಸ್ಥರು ಮುಖ್ಯದ್ವಾರದ ಮೂಲಕ ಉಚಿತವಾಗಿ ಪ್ರವೇಶಿಸಿ ನೇರ ದರ್ಶನ ಮಾಡಿ ದೇವಿ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಜನಸಾಮಾನ್ಯರು ಹತ್ತಾರು ಗಂಟೆಗಳ ಕಾಲ ಸರದಿ ಸಾಲಲ್ಲಿ ನಿಂತು ಹಸಿದು ಹೈರಾಣಾಗುತ್ತಿದ್ದಾರೆ.

ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಇದನ್ನೂ ಓದಿ- ಬಲಿರಾಜ ಮರಳಿ ಬಾರಯ್ಯ!

Related Articles

ಇತ್ತೀಚಿನ ಸುದ್ದಿಗಳು