Monday, July 28, 2025

ಸತ್ಯ | ನ್ಯಾಯ |ಧರ್ಮ

ಜನಪದೀಯರ ಕೋಲದ ಭೂತಕ್ಕೆ ಧರ್ಮದ ಬಣ್ಣ ಬಳಿಯಬೇಡಿ: ನಟ ಕಿಶೋರ್ ಕುಮಾರ್ ಆಕ್ರೋಶ

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯ, ನಿರ್ದೇಶನದ ಕಾಂತಾರ ಚಿತ್ರದಲ್ಲಿ‌ ಬಳಸಲಾಗಿರುವ ಭೂತದ‌ ಕೋಲ, ನೇಮದ ದೈವಕ್ಕೆ ಧರ್ಮದ ಬಣ್ಣ ಏಕೆ ಬಳಿಯುತ್ತಿದ್ದೀರಿ ಎಂದು ಕಾಂತಾರದಲ್ಲಿ ಅರಣ್ಯಾಧಿಕಾರಿ ಪಾತ್ರ ನಿರ್ವಹಿಸಿರುವ ಹೆಸರಾಂತ ನಟ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂತಾರದ ದಲಿತ ಪಾತ್ರಗಳು ವೈದಿಕವೋ ಅವೈದಿಕವೋ, ಹಿಂದೂ ಧರ್ಮಕ್ಕೆ ಸೇರಿದ್ದೋ ಅಲ್ಲವೋ ಎಂಬ ಬಿರುಸಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಟ ಕಿಶೋರ್ ಕುಮಾರ್ ಅಸ್ಪೃಶ್ಯತೆಯ ಆಚರಣೆಯಲ್ಲಿ ನಿಮಗೆ ಅಧರ್ಮದ ಬಣ್ಣ ಯಾಕೆ ಕಾಣುತ್ತಿಲ್ಲ ಎಂದು ಸೂಕ್ಷ್ಮವಾಗಿ ಪ್ರಶ್ನಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಈ ಕುರಿತು ಕಿಶೋರ್ ಕುಮಾರ್ ಬರೆದಿರುವ ಅಭಿಪ್ರಾಯಗಳ ಪೂರ್ಣಪಾಠ ಹೀಗಿದೆ:

“ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಸಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ??

ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು.

ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ.
ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ.”

ನಟ ಅಹಿಂಸಾ ಚೇತನ್ ಅವರ ಕಾಂತಾರದಲ್ಲಿ ತೋರಿಸುವ ಆಚರಣೆಗಳು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ, ಅವು ಆದಿವಾಸಿಗಳ ಮೂಲ ಪರಂಪರೆ ಎಂದು ಹೇಳಿದ್ದರಿಂದ ವಿವಾದ ಭುಗಿಲೆದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page