Friday, April 26, 2024

ಸತ್ಯ | ನ್ಯಾಯ |ಧರ್ಮ

ಆರ್ ಕೆ ಲಕ್ಷ್ಮಣ್ ಈಗಿರುತ್ತಿದ್ದರೆ…!

ವ್ಯಂಗ್ಯ ಗೆರೆ ಜಗತ್ತಿನ ಚಕ್ರವರ್ತಿ ಆರ್‌ ಕೆ ಲಕ್ಷ್ಮಣ್‌ ಈ ದೇಶ ಕಂಡ ಹೆಮ್ಮೆಯ ವ್ಯಂಗ್ಯ ಚಿತ್ರಕಾರ. ಇವರ 101 ನೆಯ ಜನ್ಮದಿನದ (ಅ.24) ಸ್ಮರಣೆಯಾಗಿ ಖ್ಯಾತ ವ್ಯಂಗ್ಯ ಚಿತ್ರಕಾರ ಪಂಜು ಗಂಗೊಳ್ಳಿಯವರ ಈ ಲೇಖನದ ಮೂಲಕ ಪೀಪಲ್‌ ಮೀಡಿಯಾವು ಅವರಿಗೆ ಗೌರವದ ನಮನವನ್ನು ಸಲ್ಲಿಸುತ್ತದೆ.

ರಾಶಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಂದರೆ ಹೆಚ್ಚಿನವರಿಗೆ ಯಾರೆಂದು ತಿಳಿಯಲಿಕ್ಕಿಲ್ಲ. ಆರ್ ಕೆ ಲಕ್ಷ್ಮಣ್ ಅಂದರೆ ಯಾರಿಗೇ ಆದರೂ ತಟ್ಟನೆ ಯಾರೆಂದು ತಿಳಿಯುತ್ತದೆ. ಹೌದು, ಅವರೇ ಭಾರತ ಕಂಡ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ವ್ಯಂಗ್ಯ ಚಿತ್ರಕಾರ. ಕನ್ನಡಿಗರಿಗೆ ಇವರ ಬಗ್ಗೆ ಉಳಿದವರಿಗಿಂತ ಹೆಚ್ಚಿನ ಅಭಿಮಾನ. ಕಾರಣ-ಇವರು ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ಏಳು ಮಕ್ಕಳಲ್ಲಿ ಕೊನೆಯವರಾದ ಲಕ್ಷ್ಮಣ್ ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತರಾಗಿದ್ದರು. ಅಣ್ಣ ಆರ್ ಕೆ ನಾರಾಯಣ್ ಹೆಸರಾಂತ ಇಂಗ್ಲಿಷ್ ಕತೆಗಾರ. ಲಕ್ಷ್ಮಣ್, ಆರ್ಟ್ ಕೋರ್ಸ್ ಮಾಡಲು ಮುಂಬೈಯ ಪ್ರಖ್ಯಾತ `ಜೆ ಜೆ ಸ್ಕೂಲ್ ಆಫ್ ಆರ್ಟ್ಸ್’ ಸಂಸ್ಥೆಗೆ ಅರ್ಜಿ ಹಾಕಿದಾಗ, ಆ ಸಂಸ್ಥೆಯು, ತಮ್ಮ ಸಂಸ್ಥೆಗೆ ಸೇರುವ ಅರ್ಹತೆ ಅವರ ಚಿತ್ರಗಳಲ್ಲಿಲ್ಲ ಎಂದು ಅವರ ಅರ್ಜಿಯನ್ನು ತಿರಸ್ಕರಿಸಿತು. (ಈಗ ಅದೇ `ಜೆ ಜೆ ಸ್ಕೂಲ್ ಆಫ್ ಆರ್ಟ್ಸ್’ ಕ್ಯಾಂಪಸಿನಲ್ಲಿ ಲಕ್ಷ್ಮಣರ ಒಂದು ಸ್ಮಾರಕವಿದೆ ಎಂಬುದು ಬೇರೆಯೇ ವಿಚಾರ.) ಹಾಗಾಗಿ ಅವರು ಮೈಸೂರು ಯೂನಿವರ್ಸಿಟಿ (ಮಹಾರಾಜ ಕಾಲೇಜು) ಸೇರಿ, ಅಲ್ಲಿ ಆರ್ಟ್ಸ್ ಪದವಿ ಪಡೆದರು. ಕಲೆಯ ಜೊತೆಯಲ್ಲಿ ಅರ್ಥಶಾಸ್ತ್ರ, ತತ್ವಶಾಸ್ತ್ರ, ಆಧ್ಯಾತ್ಮ, ವಿಜ್ಞಾನ ಮೊದಲಾಗಿ ಹತ್ತು ಹಲವು ವಿಷಯಗಳಲ್ಲಿ ಆಸಕ್ತರಾಗಿದ್ದ ಅವರು ಒಂದು ಸಂದರ್ಶನದಲ್ಲಿ ತಾನು ಮೈಸೂರಿನ ಬದಲು ಮುಂಬೈಯಲ್ಲಿ ಹುಟ್ಟಿದ್ದರೆ ಕಾರ್ಟೂನಿಸ್ಟ್ ಆಗುವ ಬದಲು ಹರ್ಷದ್ ಮೆಹ್ತಾನಂತಹ ಒಬ್ಬ ಸ್ಟಾಕ್ ಬ್ರೋಕರ್ ಆಗುತ್ತಿದ್ದೆ ಅಂದಿದ್ದರು!

ಮೈಸೂರಿನಲ್ಲಿರುವಾಗಲೇ ಆರ್ ಕೆ ಲಕ್ಷ್ಮಣ್ ‘ದಿ ಹಿಂದೂ’ ಹಾಗೂ ಸ್ಥಳೀಯ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯುವ ಮೂಲಕ ತನ್ನ ಮುಂದಿನ ಹಾದಿಯನ್ನು ಗುರುತಿಸಿಕೊಂಡಿದ್ದರು. ರಾಶಿಯವರ `ಕೊರವಂಜಿ’ಯಲ್ಲಿ ಆಗಿನ ಹೆಸರಾಂತ ವ್ಯಂಗ್ಯಚಿತ್ರಕಾರರ ಜೊತೆ ಇವರ ವ್ಯಂಗ್ಯಚಿತ್ರಗಳೂ ಪ್ರಕಟವಾಗುತ್ತಿದ್ದವು. 40ರ ದಶಕದಲ್ಲಿ ಮುಂಬೈಗೆ ಬಂದ ಲಕ್ಷ್ಮಣ್, ಮೊದಲು ಕೆಲಸ ಮಾಡಿದ್ದು `ಬ್ಲಿಝ್’ ಎಂಬ ಇಂಗ್ಲಿಷ್ ವಾರಪತ್ರಿಕೆಯಲ್ಲಿ. 1946ರಲ್ಲಿ ಅವರು `ಫ್ರೀ ಪ್ರೆಸ್ ಜರ್ನಲ್’ ಎಂಬ ಇಂಗ್ಲಿಷ್‌ ದಿನಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಸೇರಿದರು. ಅಲ್ಲಿ ಇವರ ಸಹೋದ್ಯೋಗಿಯಾಗಿದ್ದವರು ಆಗಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾಗಿದ್ದ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ. 1951ರಲ್ಲಿ ಲಕ್ಷ್ಮಣ್ `ದಿ ಟೈಮ್ಸ್ಆಫ್ ಇಂಡಿಯಾ’ ಪತ್ರಿಕೆ ಸೇರಿದರು. ಅಲ್ಲಿ ಅವರು ಮುಂದಿನ 57 ವರ್ಷಗಳ ಕಾಲ ಕೆಲಸ ಮಾಡುವ ಮೂಲಕ ತಾನೊಬ್ಬ ದೇಶದ ಅತ್ಯಂತ ಜನಪ್ರಿಯ ಹಾಗೂ ಮಹತ್ವದ ವ್ಯಂಗ್ಯಚಿತ್ರಕಾರನಾಗಿ ಬೆಳೆಯುವ ಜೊತೆಯಲ್ಲಿ, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನೂ ಬೆಳೆಸಿದ್ದು ಒಂದು ವಿಶೇಷ ವಿದ್ಯಮಾನ. ಎಷ್ಟೆಂದರೆ, ಎಷ್ಟೋ ಜನ ಓದುಗರು ದಿನ ಅವರ `ಯೂ ಸೆಡ್ ಇಟ್’ ಎಂಬ ಪಾಕೆಟ್ ಕಾರ್ಟೂನಿಗಾಗಿಯೇ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯನ್ನು ಕೊಂಡುಕೊಳ್ಳುತ್ತಿದ್ದರು! ದಿ ಟೈಮ್ಸ್ ಆಫ್ ಇಂಡಿಯಾ ಎಂಬ ಸಂಸ್ಥೆಯೊಳಗೆ ಆರ್ ಕೆ ಲಕ್ಷ್ಮಣ್  ತಾನೇ ಒಂದು ಏಕವ್ಯಕ್ತಿ ಸಂಸ್ಥೆಯಾಗಿದ್ದರು.

ರಾಜಕೀಯ ವ್ಯಂಗ್ಯಚಿತ್ರಕಾರರ ಕಾರ್ಟೂನ್‍ಗಳಿಗೆ ಸಹಜವಾಗಿಯೇ ರಾಜಕಾರಣಿಗಳು ಮುಖ್ಯ ವಸ್ತುಗಳು. 50ರ ದಶಕದಿಂದ ಲಕ್ಷ್ಮಣ್ ಸಕ್ರಿಯರಾಗಿದ್ದ 2010ರ ವರೆಗೆ ಭಾರತದ ರಾಜಕೀಯ ಕ್ಷೇತ್ರ ನೆಹರೂ, ಶಾಸ್ತ್ರಿ, ಜಯಪ್ರಕಾಶ್ ನಾರಾಯಣ್, ಇಂದಿರಾ, ರಾಜ್ ನಾರಾಯಣ್, ಜಗಜೀವನ್ ರಾಮ್, ಚರಣ್ ಸಿಂಗ್, ವಾಜಪೇಯಿ. ಎಲ್ ಕೆ ಅಡ್ವಾಣಿ, ಮೊರಾರ್ಜಿ ದೇಸಾಯಿ, ಪಿ ವಿ ನರಸಿಂಹ ರಾವ್, ಮನ್ ಮೋಹನ್ ಸಿಂಗ್, ಪ್ರಣಬ್ ಮುಖರ್ಜಿ, ಸಂಜಯ್ ಗಾಂಧಿ, ವೈ ಬಿ ಚವಾಣ್, ವಿ ಪಿ ಸಿಂಗ್, ರಾಜೀವ್ ಗಾಂಧಿ, ಜೈಲ್ ಸಿಂಗ್, ಚಂದ್ರಶೇಖರ್, ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್, ಮುಲಾಯಂ ಸಿಂಗ್, ದೇವರಾಜ್ ಅರಸ್, ಕರುಣಾನಿಧಿ, ಎಮ್ ಜಿ ಆರ್, ಎನ್ ಟಿ ರಾಮರಾವ್, ಜಯಲಲಿತಾ ಮೊದಲಾದ ದಿಗ್ಗಜರಿಂದ ಕೂಡಿತ್ತು. ಮತ್ತು, ಆ ಕಾಲಘಟ್ಟವು ಭಾರತೀಯ ವ್ಯಂಗ್ಯಚಿತ್ರಕಾರರಿಗೆ ಅತ್ಯಂತ ಫಲವತ್ತಾದ ಕಾಲವೂ ಆಗಿತ್ತು. ಈ ಘಟಾನುಘಟಿ ನಾಯಕರ ಜೊತೆ ತುರ್ತುಪರಿಸ್ಥಿತಿ, ಹಸಿರು ಕ್ರಾಂತಿ, ಕುಟುಂಬ ಯೋಜನೆ, ಗರೀಬಿ ಹಟಾವೋ, ರಥಯಾತ್ರೆ ಮೊದಲಾದ ಸರ್ಕಾರಿ, ರಾಜಕೀಯ ಕಾರ್ಯಕ್ರಮಗಳು ಅಂದಿನ ವ್ಯಂಗ್ಯಚಿತ್ರಕಾರರಿಗೆ ದಿನನಿತ್ಯ ಸರಕುಗಳನ್ನು ಒದಗಿಸುತ್ತಿದ್ದವು. ರಾಜಕೀಯದಲ್ಲಿ ಇವರೆಲ್ಲರೂ ಎಷ್ಟೇ ಘಟಾನುಘಟಿಗಳಾದರೂ ಲಕ್ಷ್ಮಣ್, ಅಬೂ ಅಬ್ರಾಹಂ, ರಾಜಿಂದರ್ ಪುರಿ, ರವಿಶಂಕರ್, ಕುಟ್ಟಿ, ವಿಜಯನ್, ರಾಮಮೂರ್ತಿ ಮೊದಲಾದವರ ವ್ಯಂಗ್ಯಚಿತ್ರಗಳಲ್ಲಿ ಪ್ರತಿನಿತ್ಯ ಎಂಬಂತೆ ಲೇವಡಿಗೆ ಒಳಗಾಗುತ್ತಿದ್ದರು.

ಆದರೂ ಅವರ್ಯಾರೂ ಸಾರ್ವಜನಿಕವಾಗಿ ಆ ವ್ಯಂಗ್ಯಚಿತ್ರಕಾರರ ವಿರುದ್ಧ ಸಿಟ್ಟಾಗುವುದು, ಮುನಿಸಿಕೊಳ್ಳುವುದು, ಕೇಸು ಹಾಕುವುದು ಮಾಡಲಿಲ್ಲ. ಬದಲಿಗೆ, ಹಲವರು ಲಕ್ಷ್ಮಣರಿಂದ ತಮ್ಮ ವ್ಯಂಗ್ಯ ಚಿತ್ರಗಳ ಮೂಲಪ್ರತಿಗಳನ್ನು ಪಡೆದುಕೊಂಡು ಫ್ರೇಮ್ ಹಾಕಿಸಿ, ತಮ್ಮ ಮನೆಗಳ ಗೋಡೆಗಳ ಮೇಲೋ, ಮೇಜಿನ ಮೇಲೋ ಇಟ್ಟುಕೊಳ್ಳುತ್ತಿದ್ದರು. ಆದರೆ, ಮೊರಾರ್ಜಿ ದೇಸಾಯಿ ಒಮ್ಮೆ ಲಕ್ಷ್ಮಣರ ಕಾರ್ಟೂನ್‍ಗಳಿಗೆ ಲಗಾಮು ಹಾಕಲು ಒಂದು ಕ್ಯಾಬಿನೆಟ್ ಮೀಟಿಂಗ್ ಮಾಡಿದ್ದರು ಎಂದು ಹೇಳಲಾಗುತ್ತದೆ. 1994ರಲ್ಲಿ ಪುಣೆಯಲ್ಲಿ ʼಸಹಮತ್ʼ ಎಂಬ ಕಲಾವಿದರ ಸಂಘಟನೆಯೊಂದು ಲಕ್ಷ್ಮಣರ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಸಿದಾಗ ಎಲ್ ಕೆ ಅಡ್ವಾಣಿಯವರ ವ್ಯಂಗ್ಯಚಿತ್ರಗಳ ಕಾರಣಕ್ಕೆ ಆರ್ ಎಸ್ ಎಸ್ ಪಡೆ ದಾಳಿ ಮಾಡಿದ ಘಟನೆ ನಡೆದಿತ್ತು. ಅದರೂ, ಅಂದಿನ ರಾಜಕಾರಣಿಗಳು ಹಾಗು ಅವರ ಹಿಂಬಾಲಕರು ಈಗಿನ ನಾಯಕರ ಹಿಂಬಾಲಕರಂತೆ ವ್ಯಂಗ್ಯಚಿತ್ರಕಾರರಿಗೆ ಬೈಯ್ಯುವುದು, ಧಮ್ಕಿ ಹಾಕುವ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಈಗಿನಂತೆ ಆಗ ಸೋಷಿಯಲ್ ಮೀಡಿಯಾ ಎಂಬುದೊಂದು ಇರಲಿಲ್ಲ ಅನ್ನುವುದು ಗಮನಿಸಬೆಕಾದ ವಿಚಾರ.

ಲಕ್ಷ್ಮಣರ ಕಾಲಕ್ಕೇ ಹಿಂದುತ್ವ ಬ್ರಿಗೆಡ್ ನಿಧಾನವಾಗಿ ತಲೆ ಎತ್ತುತ್ತಿದ್ದರೂ ಈಗಿನಷ್ಟು ಬಲಾಢ್ಯವಾಗಿ ಬೆಳೆದಿರಲಿಲ್ಲ. ವಿಶ್ವ ಹಿಂದೂ ಪರಿಷತ್ತಿನ ಸಿಂಘಾಲ್ ಆಗಿನ ಅತೀ ದೊಡ್ಡ ಹಿಂದುತ್ವವಾದೀ ನಾಯಕ. ಆದರೆ, ಈಗ ಹಿಂದುತ್ವ ರಾಜಕಾರಣ ಯಾವ ಎತ್ತರಕ್ಕೆ ಬೆಳೆದಿದೆಯೆಂದರೆ ಸಿಂಘಾಲ್‍ರಂತಹ ಆಗಿನ ಹಿಂದುತ್ವ ನಾಯಕರು ಈಗಿನ ಒಬ್ಬ ಸಾಮಾನ್ಯ ಮೋದಿ ಅನುಯಾಯಿಯೆದುರು ಬಚ್ಚಾನಂತೆ ಕಾಣಿಸುತ್ತಾರೆ! ಇದರ ಫಲವೋ ಎಂಬಂತೆ ಈವತ್ತಿನ ಯಾವುದೇ ಪ್ರಮುಖ ದಿನಪತ್ರಿಕೆಯಲ್ಲೂ ಆಳುವ ಸರ್ಕಾರದ ವಿರುದ್ಧ ಒಂದೇ ಒಂದು ವ್ಯಂಗ್ಯಚಿತ್ರ ಕಾಣಿಸಿಕೊಳ್ಳುವುದಿಲ್ಲ. ಆರ್ ಕೆ ಲಕ್ಷ್ಮಣರನ್ನು ಬೆಳೆಸಿದ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯೇ ಇದಕ್ಕೆ ಒಳ್ಳೆಯ ಉದಾಹರಣೆ ಎಂಬುದು ಕುತೂಹಲದ ಸಂಗತಿ ಎನಿಸಬಹುದು. ಲಕ್ಷ್ಮಣರ ವ್ಯಂಗ್ಯಚಿತ್ರಗಳಿಗಾಗಿಯೇ ಖರೀದಿಸಲ್ಪಡುತ್ತಿದ್ದ ಈ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಮೋಹನ್ ಭಾಗವತ್ ಮೊದಲಾದವರ ವ್ಯಂಗ್ಯಚಿತ್ರಗಳು ಪ್ರಕಟವಾಗುವುದಿಲ್ಲ. ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಇಬ್ಬರು ಪ್ರತಿಭಾವಂತ ವ್ಯಂಗ್ಯಚಿತ್ರಕಾರರಿದ್ದು ಅವರು ಆಳುವ ಕೂಟದ ನಾಯಕರ ಬದಲು ಅಧಿಕಾರ, ಜನಮತ ಎರಡೂ ಕಳೆದುಕೊಂಡು ನೆಲಕಚ್ಚಿರುವ ಕಾಂಗ್ರೆಸ್ ಮತ್ತು ಅದರ ನಾಯಕರ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆಂದರೆ ರಾಜಕೀಯ ವ್ಯಂಗ್ಯಚಿತ್ರಕಾರರ ಇಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು.

ಕನ್ನಡದ ಪ್ರಜಾವಾಣಿ, ಆಂದೋಲನ, ಇಂಗ್ಲಿಷಿನ ದಿ ಏಷಿಯನ್ ಏಜ್, ದಿ ಹನ್ಸ್ ಮೊದಲಾಗಿ ಕೆಲವೇ ಕೆಲವು ದಿನಪತ್ರಿಕೆಗಳು ಆಳುವ ಕೂಟದ ವಿರುದ್ಧದ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವ ಧೈರ್ಯ ತೋರಿಸುತ್ತಿವೆ. ಹೀಗಾಗಿ, ಪ್ರಮುಖ ವ್ಯಂಗ್ಯಚಿತ್ರಕಾರರೆಲ್ಲ ದೈನಿಕಗಳನ್ನು ತೊರೆದು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ನೆಹರೂ ಭಾರತದ ರಾಜಕೀಯ ವ್ಯಂಗ್ಯಚಿತ್ರಕಲೆಯ ಪಿತಾಮಹ ಎನಿಸಿಕೊಂಡಿರುವ ಶಂಕರ್‌ರವರಿಗೆ `ಡೋಂಟ್ ಸ್ಪೇರ್ ಮಿ (ನನ್ನನ್ನೂ ಬಿಡಬೇಡಿ) ಎಂದಿದ್ದರು. ಈಗ ಪರಿಸ್ಥಿತಿ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ತಮ್ಮ ರಾಜಕೀಯ ನಾಯಕರ ವ್ಯಂಗ್ಯಚಿತ್ರ ಬರೆದರೆ ಅವರ ಹಿಂಬಾಲಕರು `ಐ ವೋಂಟ್ ಸ್ಪೇರ್ ಯೂ (ನಾನು ನಿಮ್ಮನ್ನು ಬಿಡುವುದಿಲ್ಲ)’ ಎಂದು ಮೇಲೆರಗಿ, ವಿವಿಧ ಸ್ತರಗಳಲ್ಲಿ ದಾಳಿ ಮಾಡುವ ವಾತಾವರಣ ನಿರ್ಮಾಣವಾಗಿದೆ.

2003ರ ಸೆಪ್ಟಂಬರ್ ತಿಂಗಳಲ್ಲಿ ಸ್ಟ್ರೋಕ್ ಆಗಿ, ದೇಹದ ಎಡಭಾಗ ನಿಷ್ಕ್ರಿಯಯವಾಗುವ ತನಕವೂ ಆರ್ ಕೆ ಲಕ್ಷ್ಮಣ್ ನಿರಂತರವಾಗಿ ವ್ಯಂಗ್ಯಚಿತ್ರಗಳನ್ನು ಬರೆದರು. ಸ್ಟ್ರೋಕ್ ಆದ ನಂತರ ಕೆಲ ಸಮಯದಲ್ಲಿ ತುಸು ಚೇತರಿಸಿಕೊಂಡು ಕೆಲಕಾಲ ವ್ಯಂಗ್ಯಚಿತ್ರಗಳನ್ನು ರಚಿಸಿದರಾದರೂ, ಅವುಗಳಲ್ಲಿ ಹಿಂದಿನ ಕಸುವು ಇರಲಿಲ್ಲ. 2005ರಲ್ಲಿ ಭಾರತ ಸರ್ಕಾರ ಲಕ್ಷ್ಮಣರಿಗೆ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 2015ರ ಜನವರಿ 26ರಂದು ಲಕ್ಷ್ಮಣ್ ಪುಣೆ ಆಸ್ಪತ್ರೆಯಲ್ಲಿ ನಿಧನರಾದರು. ಮಹಾರಾಷ್ಟ್ರ ಸರ್ಕಾರ ಪುಣೆಯಲ್ಲಿ ಲಕ್ಷ್ಮಣರ ನೆನೆಪಿನಲ್ಲಿ ಅವರ ವ್ಯಂಗ್ಯಚಿತ್ರಗಳ ಒಂದು ಮ್ಯೂಸಿಯಂನ್ನು ನಿರ್ಮಿಸಿದೆ. ಕೋಮು ರಾಜಕಾರಣದ ತೀವ್ರತೆ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರತದ ರಾಜಕೀಯ ವ್ಯಂಗ್ಯಚಿತ್ರಕಾರರೂ ಮ್ಯೂಸಿಯಂ ವಸ್ತುಗಳಾದರೆ ಅಚ್ಚರಿಯೇನಿಲ್ಲ!

ಪಂಜು ಗಂಗೊಳ್ಳಿ

ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾಗಿರುವ ಇವರಿಗೆ ಚಿತ್ರಕಲೆ ವೃತ್ತಿಯಾದರೆ ಬರವಣಿಗೆ ಪ್ರವೃತ್ತಿ. ಇವರು ಸಂಪಾದಿಸಿದ ಕುಂದಾಪ್ರ ಕನ್ನಡ ನಿಘಂಟು ಗಮನಾರ್ಹ ಕೃತಿ. ಪ್ರಸ್ತುತ ಮುಂಬೈಯಲ್ಲಿ ವಾಸ.

Related Articles

ಇತ್ತೀಚಿನ ಸುದ್ದಿಗಳು