Home ದೆಹಲಿ ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತವೇ ಕಾರಣ: ಜಪಾನ್ ಮಾಜಿ ಸಚಿವ ಮಕಿಹಾರ ಆರೋಪ

ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತವೇ ಕಾರಣ: ಜಪಾನ್ ಮಾಜಿ ಸಚಿವ ಮಕಿಹಾರ ಆರೋಪ

0

ದೆಹಲಿ: ಅತ್ಯಂತ ಪ್ರತಿಷ್ಠಿತ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ವಿಳಂಬಕ್ಕೆ ಭಾರತದ ಒಬ್ಬ ಸಚಿವ ಹಾಗೂ ಅಧಿಕಾರಿಗಳೇ ಜವಾಬ್ದಾರರು ಎಂದು ಜಪಾನ್‌ನ ಮಾಜಿ ಸಚಿವರೊಬ್ಬರು ನೇರ ಆರೋಪ ಮಾಡಿದ್ದಾರೆ.

ಶಿಂಕನ್ಸೆನ್ ಯೋಜನೆಗೆ ಸಂಬಂಧಿಸಿದ ಮಾತುಕತೆಗಳ ಸಂದರ್ಭದಲ್ಲಿ ಭಾರತದ ಅಧಿಕಾರಿಗಳು ಪದೇ ಪದೇ ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು ಮತ್ತು ಸ್ವಂತ ಹಿತಾಸಕ್ತಿಗಾಗಿ ಕೆಲಸ ಮಾಡಿದರು ಎಂದು ಜಪಾನ್‌ನ ಮಾಜಿ ಕಾನೂನು ಸಚಿವ ಹಿದೇಕಿ ಮಕಿಹಾರ ಗಂಭೀರವಾಗಿ ಆರೋಪಿಸಿದ್ದಾರೆ. ಅಧಿಕಾರಿಗಳ ನಡೆ ಸಂಪೂರ್ಣ ಬೇಜವಾಬ್ದಾರಿತನದಿಂದ ಕೂಡಿತ್ತು ಎಂದು ಅವರು ಟೀಕಿಸಿದ್ದಾರೆ.

ಈ ಯೋಜನೆಯು ಮೂಲ ಶಿಂಕನ್ಸೆನ್ ಮಾದರಿಯಿಂದಲೇ ದೂರ ಸರಿದಿದೆ ಎಂದು ಜಪಾನ್ ಸುದ್ದಿ ಸಂಸ್ಥೆಯೊಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಮಕಿಹಾರ ಈ ಹೇಳಿಕೆ ನೀಡಿದ್ದಾರೆ. ಭಾರತದ ಈ ಮಹತ್ವಾಕಾಂಕ್ಷೆಯ ಹೈಸ್ಪೀಡ್ ರೈಲು ಕಾರಿಡಾರ್ ಕಾಮಗಾರಿಯಲ್ಲಿ ಪ್ರಗತಿ ಕಾಣದಿರಲು ಸಂಪೂರ್ಣವಾಗಿ ಭಾರತದ ಕಡೆಯ ಲೋಪವೇ ಕಾರಣ ಎಂದು ಮಕಿಹಾರ ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಮಾರ್ಗದಲ್ಲಿ ಭಾರತದ ಮೊದಲ ಹೈಸ್ಪೀಡ್ ರೈಲಿನ ಪ್ರಯಾಣಿಕರ ಸೇವೆಗಳು ಹಂತ ಹಂತವಾಗಿ 2027ರ ಆಗಸ್ಟ್ 15ರಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಿಡಾರ್ ಜಪಾನಿನ ಶಿಂಕನ್ಸೆನ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಇದಕ್ಕೆ ಜಪಾನ್ ಸರ್ಕಾರದ ‘ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ’ (JICA) ಭಾಗಶಃ ಧನಸಹಾಯ ನೀಡುತ್ತಿದೆ.

ಪ್ರಧಾನಿ ಮತ್ತು ರೀಲ್ ಸಚಿವರ ಖಾತೆಗೆ ಮತ್ತೊಂದು ಗರಿ!

ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತೀಯ ಅಧಿಕಾರಿಗಳೇ ಕಾರಣ ಎಂಬ ಜಪಾನ್ ಮಾಜಿ ಸಚಿವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿರೋಧ ಪಕ್ಷಗಳು ಅಸ್ತ್ರವಾಗಿಸಿಕೊಂಡಿವೆ. ಮಕಿಹಾರ ಅವರ ಟ್ವೀಟ್ ಅನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಇದು ಪ್ರಧಾನಿ ಮೋದಿ ಮತ್ತು ‘ರೀಲ್ ಸಚಿವ’ರ (ರೈಲ್ವೆ ಸಚಿವ) ಖಾತೆಗೆ ಸೇರಿದ ಮತ್ತೊಂದು ಹೆಮ್ಮೆಯ ಗರಿ” ಎಂದು ಅವರು ವ್ಯಂಗ್ಯವಾಡಿದ್ದಾರೆ. ಭಾರತದ ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ಮೂಲಸೌಕರ್ಯ ಸಹಭಾಗಿತ್ವದ ಯೋಜನೆಯನ್ನು ಸರ್ಕಾರ ಎಷ್ಟು ಕಳಪೆಯಾಗಿ ನಿಭಾಯಿಸಿದೆ ಎಂದರೆ, ಈಗ ವಿದೇಶಿ ಅಧಿಕಾರಿಗಳೂ ಸಹ ಸರ್ಕಾರದ ಅಸಮರ್ಥತೆಯನ್ನು ಬಹಿರಂಗವಾಗಿ ಟೀಕಿಸುವಂತಾಗಿದೆ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಪಾನ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಕೇಂದ್ರ ಸ್ಪಷ್ಟನೆ

ಯೋಜನೆಯ ವಿಳಂಬಕ್ಕೆ ಭಾರತವೇ ಕಾರಣ ಎಂಬ ಜಪಾನ್ ಮಾಜಿ ಸಚಿವರ ಆರೋಪಗಳ ಬೆನ್ನಲ್ಲೇ, ಈ ಯೋಜನೆಯ ವಿಷಯದಲ್ಲಿ ಜಪಾನ್ ಜೊತೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎಂಬ ವರದಿಗಳನ್ನು ಭಾರತ ಶುಕ್ರವಾರ ಬಲವಾಗಿ ತಳ್ಳಿಹಾಕಿದೆ. ಈ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಸುಸೂತ್ರವಾಗಿ ಮುಂದುವರಿದಿವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಜಪಾನ್ ಮಾಜಿ ಕಾನೂನು ಸಚಿವ ಹಿದೇಕಿ ಮಕಿಹಾರ ನೀಡಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದೆ.

You cannot copy content of this page

Exit mobile version