ಮಹತ್ವದ ಬೆಳವಣಿಗೆಯೊಂದರಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾದ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಸ್ವಾಮಿಗಳು ಮತ್ತು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ನಡುವಿನ ಹಲವು ದಿನಗಳ ಹಗ್ಗಜಗ್ಗಾಟ ಈಗ ಈ ಹಂತಕ್ಕೆ ಬಂದು ನಿಂತಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸ್ವಾಮೀಜಿಗಳು ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವೆಡೆ ಆಸ್ತಿಗಳನ್ನು ಮಾಡಿದ್ದಾರೆ, ಟ್ರಸ್ಟ್ ಸದಸ್ಯರ ಅಭಿಪ್ರಾಯ ಕೇಳುವುದಿಲ್ಲ, ಲಿಂಗಾಯತ ಧರ್ಮ ವಿರೋಧಿ ಹೇಳಿಕೆಗಳು ಬೇಡ ಬೇಡವೆಂದರೂ ಸ್ವಾಮಿಗಳ ಬಾಯಿಂದ ಬರುತ್ತಿದೆ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ ಕಾರಣದಿಂದಲೂ ಅವರನ್ನು ಉಚ್ಛಾಟಿಸಲಾಗಿದೆ.
ಈ ಎಲ್ಲಾ ಕಾರಣಗಳಿಂದ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ, ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಕಾರ್ಯದರ್ಶಿ ನೀಲಕಂಠ ಅಸೂಟಿ ಸೇರಿದಂತೆ ಹಲವು ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.