Home ಅಂಕಣ ಬೊಗಸೆಗೆ ದಕ್ಕಿದ್ದು-51: ದೇವದಾಸಿ ಪದ್ಧತಿ, ಅರೆಬೆತ್ತಲೆ ಸೇವೆ ಮತ್ತು ಬೇವಿನುಡುಗೆ

ಬೊಗಸೆಗೆ ದಕ್ಕಿದ್ದು-51: ದೇವದಾಸಿ ಪದ್ಧತಿ, ಅರೆಬೆತ್ತಲೆ ಸೇವೆ ಮತ್ತು ಬೇವಿನುಡುಗೆ

0

“..ಈ ಎಲ್ಲಾ ಅಮಾನವೀಯ ಆಚರಣೆಗಳ ಹಿಂದಿರುವ ಜಾತ್ರೆಗಳಲ್ಲಿ ನಡೆಯುವ ಕೋಟಿಗಟ್ಟಲೆ ರೂಪಾಯಿಗಳ ಆರ್ಥಿಕ ವ್ಯವಹಾರಗಳೂ ಅವುಗಳ ಮುಂದುವರಿಕೆಗೆ ಉತ್ತೇಜನ ನೀಡುವಂತಿವೆ. ಸರಕಾರ ಇವುಗಳನ್ನು ನಿಯಂತ್ರಿಸುವಷ್ಟೇ ಮುಖ್ಯ ಜನ ಶಿಕ್ಷಿತರಾಗುವುದು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಹಿಂದೆ ಇಲ್ಲಿ ಕರ್ನಾಟಕದಲ್ಲಿ ಆಚರಿಸಲಾಗುತ್ತಿದ್ದ ಹಲವಾರು ಅಮಾನವೀಯ ಆಚರಣೆಗಳ ಹೆಸರುಗಳನ್ನು ಉಲ್ಲೇಖಿಸಿದ್ದೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ಚುಟುಕಾಗಿ ವಿವರಿಸಿದ್ದೇನೆ. ಈ ಬಾರಿ ದೇವದಾಸಿ ಪದ್ಧತಿ, ಅರೆಬೆತ್ತಲೆ ಸೇವೆ ಮತ್ತು ಬೇವಿನುಡುಗೆಯ ಕುರಿತೂ ನೋಡೋಣ. ಇವೆಲ್ಲವೂ ಶ್ರೇಣೀಕೃತ ಸಮಾಜವು ದಮನಿತ ವರ್ಗಗಳ ಜನರನ್ನು ಲೈಂಗಿಕವಾಗಿ ಶೋಷಿಸಲು ದೇವರು, ಧರ್ಮಗಳ ಹೆಸರಿನಲ್ಲಿ ಕಂಡುಕೊಂಡ ವಿಧಾನಗಳು. ಇವುಗಳ ಆಚರಣೆ ಮತ್ತು ನಂಬಿಕೆಗಳ ಹಿನ್ನೆಲೆ ಏನೇ ಇರಲಿ, ಇವು ಒಂದು ಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವವಾದಿ ದೇಶದಲ್ಲಿ ನಡೆಯಲು ಅರ್ಹವಲ್ಲ. ಹಾಗೆಂದು ನಂಬಿಕೆಯ ಹೆಸರಿನಲ್ಲಿ ಅಜ್ಞಾನದ ಮಡುವಿನಲ್ಲಿ ಮುಳುಗಿರುವ, ಶೋಷಿತರು ಶೋಷಕರನ್ನೇ, ಕುರಿಗಳು ಕಟುಕರನ್ನೇ ನಂಬಿ ಅನುಸರಿಸುವ ಸಮಾಜದಲ್ಲಿ ಇವುಗಳನ್ನು ವಿರೋಧಿಸುವುದು ಮತ್ತು ನಿವಾರಿಸುವುದು ಸುಲಭವೇನಲ್ಲ. ಹೀಗಿದ್ದರೂ ಇಲ್ಲಿ ಕೆಲವು ಆಚರಣೆಗಳನ್ನು ಅವು ಇದ್ದ ರೀತಿಯಲ್ಲಿ ಇಲ್ಲಿ ವಿವರಿಸುತ್ತೇನೆ.

ದೇವದಾಸಿ ಪದ್ದತಿ
ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ, ವಿವಿಧ ಹೆಸರುಗಳಲ್ಲಿ ಮತ್ತು ವಿವಿಧ ದೇವರುಗಳ ನಂಬಿಕೆಯ ನೆಪದಲ್ಲಿ ಮಹಿಳೆಯರ ಲೈಂಗಿಕ ಪೋಷಣೆ ನಡೆಯುತ್ತಲೇ ಇದೆ. ಮೌಢ್ಯ, ಆರ್ಥಿಕ ಮತ್ತು ಸಾಮಾಜಿಕ ಕಡೆಗಣಿಸುವಿಕೆಯ ಜೊತೆಗೆ ಮಾನವರ ವ್ಯಾಪಾರೀಕರಣದ ಲಾಲಸೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಮ್ಮನಂತಾ ಹೆಣ್ಣು ಗ್ರಾಮೀಣ ದೇವತೆಗಳು, ಹನುಮಂತ ಮುಂತಾದ ಗಂಡು ದೇವತೆಗಳ ಹೆಸರಿನಲ್ಲಿ, ಜಮದಗ್ನಿ ಋಷಿಯ ಪತ್ನಿ ಹಾಗೂ ಪರಶುರಾಮನ ತಾಯಿ ರೇಣುಕಾದೇವಿಯ ಪೌರಾಣಿಕ ಕತೆಯನ್ನೂ ಅದು ಹೇಗೋ ಈ ಆಚರಣೆಗೆ ತಳಕುಹಾಕಿ ಗಟ್ಟಿಗೊಳಿಸಿ, ಧಾರ್ಮಿಕ ಆಚರಣೆಯ ಸೋಗು ನೀಡಲಾಗಿದೆ. ದೇವದಾಸಿ ಪದ್ಧತಿ, ಬಸವಿ ಬಿಡುವುದು, ಜೋಗತಿ ಬಿಡುವುದು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಈ ಅಮಾನವೀಯ ಆಚರಣೆಗಳು ಎರಡು ದಶಕಗಳ ಹಿಂದೆ ನಡೆದ ಅಮಾನವೀಯ ಪದ್ಧತಿಗಳ ದಾಖಲಾತಿಯ ವೇಳೆಯಲ್ಲಿ ಸರಕಾರದ ನಿಷೇಧದ ಹೊರತಾಗಿಯೂ ರಾಜ್ಯದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ವ್ಯಾಪವಾಗಿ ನಡೆಯುತ್ತಿದ್ದವು.

ಸಾಮಾಜಿಕವಾಗಿ ಕೆಟ್ಟ ಅರ್ಥ ಹೊಂದಿರುವ ಪದಗಳಿಂದ ಕರೆಯಲ್ಪಡುವ ಬಡಜನರ ನಂಬಿಕೆಯನ್ನೇ ಲೈಂಗಿಕ ಶೋಷಣೆಗೆ ದುರುಪಯೋಗ ಮಾಡಿಕೊಳ್ಳುವ ಈ ಪದ್ಧತಿಯಲ್ಲಿ ಮಹಿಳೆಯರು ಹೆಸರಿಗೆ ದೇವರ, ವಾಸ್ತವಿಕವಾಗಿ ಉಳ್ಳವರ ಲೈಂಗಿಕ ತೃಷೆಗೆ ದಾಸಿಯರಾಗುತ್ತಾರೆ. ಇವರಲ್ಲಿ ನಟುವರು ಅಥವಾ ಪಾತರದವರು, ಬಸವಿಯರು, ಜೋಗತಿಯರು ಮುಂತಾದವರು ದೈವ ಕೇಂದ್ರಿತ ಲೈಂಗಿಕ ದಾಸಿಯರು ಮತ್ತು ಕಸುಬೆಯವರು (sex workers) ಮುಂತಾಗಿ ಕರೆಯಲಾಗುವವರು ಸಮಾಜಕೇಂದ್ರಿತ ಲೈಂಗಿಕ ದಾಸಿಯರು ಇದ್ದಾರೆ. ಇವರೆಲ್ಲರನ್ನೂ ಸೇರಿಸಿ ದೇವದಾಸಿ ಎಂಬ ಮೆರುಗಿನ ಹೆಸರು ನೀಡಲಾಗಿದೆಯಾದರೂ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಆಚರಣೆ, ವಿಧಿ ವಿಧಾನಗಳು ಇತ್ಯಾದಿಗಳಲ್ಲಿ ಇವು ಒಂದೇ ಸ್ವರೂಪದವುಗಳಾಗಿದ್ದರೂ ಬೇರೆಯಾಗಿವೆ.

ದೇವಸ್ಥಾನಗಳಲ್ಲಿ ನರ್ತನ, ಸಂಗೀತ ಇತ್ಯಾದಿ ‘ಸೇವೆ’ ಮಾಡುವವಳು ಪಾತರದವಳು. ಋತುಮತಿಯಾದ ನಂತರ ಹೆಣ್ಣಿಗೆ ‘ಗಂಡಾ ಕಟ್ಟಿದರೆ’ ನಂತರ ಅವಳು ಪಾತರದವಳಾಗುತ್ತಾಳೆ. ಆಕೆಗೆ ಸಾಂಕೇತಿಕವಾಗಿ ಹಿರಿಯ ಪಾತರದವಳ ಜೊತೆಗೆ ಮದುವೆಯಾಗುತ್ತದೆ. ಅವಳೊಂದಿಗೆ ವಿವಾಹಬಾಹಿರವಾಗಿ ಕೂಡಲು ಬಯಸುವವನೇ ಸಮಾರಂಭದ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಾನೆ. ಚೊಣ್ಣದ ಕಾರ್ಯ, ಹಲ್ಲಿಟ್ಟಿನ ಕಾರ್ಯ ಇತ್ಯಾದಿ ಸೋಗಿನೊಂದಿಗೆ, ಮದುವೆಯಂತ ಶೃಂಗಾರ, ಗೌಜಿಯಿಂದ ಮದುವೆ ನಡೆಯುವುದು ಮಾತ್ರ ರುಮಾಲು ಸುತ್ತಿದ ತಬಲಾದ ಜೊತೆಗೆ. ಪಕ್ಕದಲ್ಲಿ ಹಾರ್ಮೋನಿಯಂ ಕೂಡಾ ಇರುತ್ತದೆ. ಸಂಗೀತ ಮತ್ತು ಧಾರ್ಮಿಕತೆಯ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಮಾನ್ಯತೆ ನೀಡುವ ಪದ್ಧತಿಯಿದು. ನಿಷೇಧಕ್ಕೆ ಮೊದಲು ಢಾಣಾಡಂಗುರವಾಗಿ ನಡೆಯುತ್ತಿದ್ದುದು, ನಿಷೇಧದ ನಂತರ ದಾಖಲಾತಿ ವೇಳೆಯಲ್ಲಿ ಗುಟ್ಟಾಗಿ ನಡೆಯುತ್ತಿತ್ತು. ಸಿಂಧಗಿಯ ನೀಲಗಂಗಮ್ಮ, ಬಾಗಲಕೋಟೆಯ ತೇರದಾಳು ಪ್ರಭುದೇವರು, ಬೆಳಗಾವಿಯ ಅಕ್ಕಿವಾಟದ ಮಲ್ಲಿಕಾರ್ಜುನ ದೇವಸ್ಥಾನಗಳಲ್ಲಿ ಈ ಆಚರಣೆಯ ವಿವರಗಳನ್ನು ದಾಖಲಿಸಲಾಗಿತ್ತು. (ಡಾ. ಶೈಲಜಾ ಹಿರೇಮಠ ಅವರು ಈ ದಾಖಲಾತಿಯ ಸಂಪನ್ಮೂಲ ವ್ಯಕ್ತಿಯಾಗಿದ್ದರು.)

ಬಸವಿಯರೆಂದರೆ, “ಮುದ್ರೆ ಹಾಕಿಸಿಕೊಂಡವರು”. ಹೆಣ್ಣು ಋತುಮತಿಯಾದ ನಂತರ ಈ ಮುದ್ರೆ ಕಾರ್ಯ ನಡೆಯುತ್ತದೆ. ಆ ನಂತರ ಆಕೆ ಮುದುವೆಯಾಗುವಂತಿಲ್ಲ. ಇದು ಒಂದು ರೀತಿಯಲ್ಲಿ ಹಸುಗಳಿಗೆ ಹಾಕುವ ಬ್ರಾಂಡಿಂಗ್ ತರ; ಜೀವನಪೂರ್ತಿ ಉಳಿಯುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಗಟ್ಟಿ ಮುದ್ರೆ ಮತ್ತು ಹೂ ಮುದ್ರೆ. ಗಟ್ಟಿ ಮುದ್ರೆ ಹಾಕಿಸಿಕೊಳ್ಳುವ ಆಚರಣೆ ತಂದೆ, ತಾಯಿ, ಸಂಬಂಧಿಕರೆಲ್ಲರೂ ಇದ್ದು, ಮದುವೆ ರೀತಿಯ ಗೌಜಿಯಲ್ಲೇ ನಡೆಯುತ್ತದೆ. ಹನುಮಂತ ದೇವಸ್ಥಾನದ ನಾಯಕ ಮತ್ತು ಕೆಲವು “ಕೆಳ ಜಾತಿ”ಗಳ ಪೂಜಾರಿ ಇದರ ವ್ಯವಸ್ಥೆ ಮಾಡುತ್ತಾನೆ. ಈ ಆಚರಣೆಗ, ವಿಧಿವಿಧಾನಗಳೆಲ್ಲವನ್ನು ಸಂಶೋಧಕರಿಗೆ ಬಿಟ್ಟುಬಿಡೋಣ. ಇಲ್ಲಿ ಮುಖ್ಯವಾದುದೆಂದರೆ, ಹೆಣ್ಣಿನ ರವಿಕೆ ಬಿಚ್ಚಿಸಿ, ಎದೆಯ ಬಲ ಭಾಗ ಮತ್ತು ಬಲ ಭುಜಕ್ಕೆ ನಿಗಿನಿಗಿ ಕೆಂಡದಲ್ಲಿ ಕಾಯಿಸಿದ ಲೋಹದ ಶಂಖ, ಚಕ್ರ, ಗದಾ, ಪದ್ಮ ಮುದ್ರೆಗಳನ್ನು ಒತ್ತಲಾಗುತ್ತದೆ. ಆಗ ಆಕೆ ಚೀರಬಾರದು. ಚೀರಿದರೆ, ಆಕೆ ಮೊದಲೇ “ಶೀಲ” ಕಳೆದುಕೊಂಡವಳು ಎಂದು ತೀರ್ಮಾನಿಸಲಾಗುತ್ತದೆ. ಪೂಜಾರಿಯೇ ಅವಳ ಕೊರಳಿಗೆ ತಾಳಿ ಕಟ್ಟುತ್ತಾನೆ. ಆ ರಾತ್ರಿ ಅವಳನ್ನು ಪೂಜಾರಿಯೊಂದಿಗೆ ದೇವಸ್ಥಾನದಲ್ಲಿಯೇ ಬಿಟ್ಟುಹೋಗಲಾಗುತ್ತದೆ. ಅಂದಿನಿಂದಲೇ ಆಕೆಯ ದೈಹಿಕ ಶೋಷಣೆಯ ಸರಣಿ ಆರಂಭವಾಗುತ್ತದೆ. ಹೂ ಮುದ್ರೆಯಲ್ಲಿ ಲೋಹದ ಬದಲು ಹೂ ಇರುತ್ತದೆ ಅಷ್ಟೇ. ಗಟ್ಟಿ ಮುದ್ರೆಯವರು ತಾವು ಹೂಮುದ್ರೆಯವರಿಗಿಂತ ಶೇಷ್ಟರೆಂದು ಭ್ರಮಿಸುತ್ತಾರೆ! ಇಷ್ಟರ ಮಟ್ಟಿಗೆ ನಮ್ಮ ಜನರಲ್ಲಿ ಮೌಢ್ಯದ ಕುರಿತನ ಇದೆ

ಚೌರಿ ಬಸವಿಯರು ಎಂದರೆ ಸ್ವಲ್ಪ ಬೇರೆ, ಮೈಲಾರದ ಮೈಲಾರಪ್ಪನಿಗೆ, ಕೂಲಹಳ್ಳಿಯ ಗೋಣಿಬಸವಣ್ಣನಿಗೆ… ಹೀಗೆ ಚೌರಿ ಬಸವಿಯರನ್ನು ಬಿಡಲಾಗುತ್ತದೆ. ಇಲ್ಲಿಯೂ ಪೂಜಾರಿ ಕುರುಬ, ನಾಯಕ ಮುಂತಾದ ಜಾತಿಯವರಾಗಿರುತ್ತಾರೆ. ಉಳಿದಂತೆ ಕೆಲವು ವಿಧಿವಿಧಾನಗಳ ಸೋಗುಗಳು ಬದಲಾಗುತ್ತವೆ, ಕೊನೆಗೆ ಇರುವ ಲೈಂಗಿಕ ಶೋಷಣೆ ಮಾತ್ರ ಅದೇ!

ಜೋಗತಿಯರು ಎಂದರೆ, ಸವದತ್ತಿ ಎಲ್ಲಮ್ಮ, ಕೊಟಕನೂರು ಎಲ್ಲಮ್ಮ, ಚಿಂಚಲಿಯ ಮಾಯವ್ವ, ಹುಲಗಿಯ ಹುಲಗವ್ವ, ಉಚ್ಚಂಗಿ ದುರ್ಗದ ಉಚ್ಚಂಗೆವ್ವ… ಹೀಗೆ  ಎಲ್ಲೆಲ್ಲಾ ಪ್ರಾಚೀನ ಕಾಲದ ಹೆಣ್ಣು ದೇವತೆಗಳಿರುತ್ತಾರೋ ಅಲ್ಲೆಲ್ಲಾ ಜೋಗತಿಯರನ್ನು ಬಿಡುವ ಆಚರಣೆ  ಕದ್ದುಮುಚ್ಚಿ ನಡೆಯುತ್ತಿತ್ತು. ಇದರಲ್ಲಿಯೂ ಹಲವು ಧಾರ್ಮಿಕ ಸೋಗಿನ ಶಾಸ್ತ್ರಗಳಿದ್ದು ಕೆಂಪು, ಬಿಳಿ ಮುತ್ತನ್ನು ಕೊರಳಿಗೆ ಕಟ್ಟಲಾಗುತ್ತದೆ. ನಂತರ ಆಕೆ ಕೆಲಸಮಯ “ಊರಾಡಬೇಕು”, ಎಂದರೆ ಊರು ತಿರುಗಿ ಭಿಕ್ಷೆ ಬೇಡಬೇಕು. ನಂತರ ಸಂಬಂಧಿಕರನ್ನು ಸೇರಿಸಿ, ಔತಣ ಮತ್ತು ಪ್ರಸ್ತ ಸಮಾರಂಭ ನಡೆಯುತ್ತದೆ.

ಈ ಆಚರಣೆಗಳ ಹಿಂದೆ ಸಂಘಟಿತ ವೇಶ್ಯಾವಾಟಿಕೆಯ ವಾಸನೆ ಹೊಡೆಯುತ್ತದೆ. ಸಾಮಾನ್ಯವಾಗಿ ಇವರೆಲ್ಲಾ ಆರಂಭದಲ್ಲಿ ಊರ ಗೌಡರು, ಕುಲಕರ್ಣಿಗಳು, ಪಟೇಲರು ಮುಂತಾಗಿ ಶ್ರೀಮಂತರ ಸಂಗ ಮಾಡಿದರೆ, ನಂತರ ವ್ಯಾವಹಾರಿಕ ವೇಶ್ಯಾವೃತ್ತಿಗೆ ಇಳಿದು, ಮುಂಬಯಿ ಮತ್ತಿತರ ಪಟ್ಟಣಗಳ ವೇಶ್ಯಾವಾಟಿಕೆಗಳನ್ನು ಸೇರುತ್ತಾರೆ. ನಂತರ ಹಲವು ರೋಗಗಳನ್ನು ಅಂಟಿಸಿಕೊಂಡು, ಕೊನೆಗಾಲದಲ್ಲಿ ಭಿಕ್ಷೆ ಬೇಡುವ ದಯನೀಯ ಪರಿಸ್ಥಿತಿ ಉಂಟಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸರಕಾರದ ನಿರಂತರ ಕ್ರಮಗಳು ಮತ್ತು ಪುನರ್ವಸತಿಯಂತಾ ಕ್ರಮಗಳಿಂದ ಈ ಅಮಾನವೀಯ ಪದ್ಧತಿಗಳು ಕಡಿಮೆಯಾಗಿವೆ ಎಂದು ಕೇಳಿದ್ದೇನೆ. ಆಧುನಿಕ ವ್ಯವಸ್ಥಿತ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಯ ಯುಗದಲ್ಲಿ ಇವೆಲ್ಲವೂ ಸಂಪೂರ್ಣವಾಗಿ ನಿಂತಿವೆ ಎಂದು ನನಗೆ ನಂಬಿಕೆ ಬರುತ್ತಿಲ್ಲ.

ಅರೆಬೆತ್ತಲೆ ಸೇವೆ ಮತ್ತು ಬೇವಿನುಡುಗೆ
ಬೆತ್ತಲೆ ಸೇವೆಯಿಂದಾಗಿ ಆಗಿನ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಎಂಬ ಸಣ್ಣ ಊರು ಪ್ರಪಂಚದಾದ್ಯಂತ ಸುದ್ದಿಯಾಗಿತ್ತು. ದಲಿತ ಸಂಘರ್ಷ ಸಮಿತಿ ಮತ್ತಿತರರ ನೇತೃತ್ವದಲ್ಲಿ ಪ್ರಗತಿಪರರು ಇದನ್ನು ನಿಲ್ಲಿಸಲು ಹೊರಟಾಗ, ಪ್ರತಿಭಟಿಸಿದವರನ್ನೇ ಹಲ್ಲೆ ಮಾಡಿ, ಬೆತ್ತಲೆಗೊಳಿಸಲಾಗಿತ್ತು. 1986 ಮಾರ್ಚ್‌ನಲ್ಲಿ ದಲಿತ ನಾಯಕ ಪ್ರೊ.ಕೃಷ್ಣಪ್ಪ ಅವರು ಸಾಮಾಜಿಕ ಕಾರ್‍ಯಕರ್ತರೊಡಗೂಡಿ ಚಂದ್ರಗುತ್ತಿಗೆ ಆಗಮಿಸಿ ಬೆತ್ತಲಸೇವೆಯಲ್ಲಿ ತೊಡಗಿದ್ದವರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರು. ಆದರೆ ಪಟ್ಟಭದ್ರರು ಜೋಗತಿಯರನ್ನು ಪ್ರಚೋದಿಸಿದ ಪರಿಣಾಮವಾಗಿ ಕ್ಷಣಾರ್ಧದಲ್ಲೇ ಜಾತ್ರೆ ರಣರಂಗವಾಗಿತ್ತು. ಸಿಕ್ಕ ಸಿಕ್ಕವರನ್ನೆಲ್ಲಾ ಹೊಡೆಯಲಾಗಿತ್ತು. ತ್ರಿಶೂಲದಿಂದ ಚುಚ್ಚಿ ಹಿಂಸಿಸಲಾಗಿತ್ತು. ಜಾತ್ರೆ ಉಸ್ತುವಾರಿಗೆ ಬಂದ ಪೊಲೀಸರನ್ನೇ ಬೆತ್ತಲೆ ಮಾಡಿ, ಅವರ ಜೀಪಿನಲ್ಲೇ ಮೆರವಣಿಗೆ ನಡೆಸಲಾಗಿತ್ತು. ಈ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿತು. ನಂತರ ಚನ್ನವೀರಪ್ಪ ಆಯೋಗ ಬೆತ್ತಲೆ ಸೇವೆ ನಿಲ್ಲಿಸಬೇಕಾದರೆ, ಜಾತ್ರೆಯನ್ನೇ ನಿಲ್ಲಿಸಬೇಕೆಂದು ವರದಿ ನೀಡಿತು. ಪರಿಣಾಮವಾಗಿ ಜಾತ್ರೆಯನ್ನು ನಿಷೇಧಿಸಲಾಯಿತು.

ಹಲವಾರು ಕಡೆಗಳಲ್ಲಿ ಬೆತ್ತಲೆ ಸೇವೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಇದೇ ಮಾದರಿಯ ಅರೆಬೆತ್ತಲೆ ಮತ್ತು ಬೇವಿನುಡುಗೆ ಸೇವೆ ರಾಜಾರೋಷವಾಗಿ ಮುಂದುವರಿದಿತ್ತು. ಮಹಿಳೆಯರು ಬಟ್ಟೆಕಳಚಿ ಸ್ನಾನ ಮಾಡಿ, ಮರೆಗಾಗಿ ಬೇವಿನ ಎಲೆಗಳನ್ನು ಕಟ್ಟಿಕೊಂಡು ಡೊಳ್ಳು, ಬಾಜಾಬಜಂತ್ರಿಗಳ ಜೊತೆಗೆ ಮೆರವಣಿಗೆಯ ಮೂಲಕ ಹೆಣ್ಣು ದೇವರುಗಳ ದೇವಸ್ಥಾನಗಳಿಗೆ ಓಡಿ ಪೂಜೆ ಸಲ್ಲಿಸುವುದೇ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದ್ದ ಈ ಆಚರಣೆ. ಪರಿಶಿಷ್ಟ ಜಾತಿ ಮತ್ತು ಕೆಳಜಾತಿಗಳ ಮಹಿಳೆಯರೇ ಈ ಆಚರಣೆಯಲ್ಲಿ ಪಾಲುಗೊಳ್ಳುವವರು. ಇಲ್ಲಿಯ ಆಚರಣೆ ಮತ್ತು ಕೊಡ ಹೊರುವುದು, ಹುಟ್ಟಿಕೆ ಕಟ್ಟುವುದು, ಹುಟ್ಟಿಕೆ ಹೊರುವುದು, ಕೊಡದ ಪೂಜೆ, ತನಾರತಿ ಕುರಿ ಮಲಗಿಸುವುದು ಮುಂತಾದ ವಿಧಿವಿಧಾನಗಳನ್ನು ಕೂಡಾ ಪಂಡಿತರು ಮತ್ತು ಸಂಶೋಧಕರಿಗೆ ಬಿಟ್ಟುಬಿಡೋಣ. ಅವುಗಳನ್ನು ಇಲ್ಲಿ ತಿಳಿದು ಯಾವ ಪ್ರಯೋಜನವೂ ಇಲ್ಲ! ಧರ್ಮದ ನಂಬಿಕೆ ಮತ್ತು ಸೋಗಿನಲ್ಲಿ ನಡೆಯುವ ಈ ಶೋಷಣೆಯ ಆಚರಣೆಗಳಿಗೆ ಆಧುನಿಕ ಕಾಲದಲ್ಲಿ ಯಾವ ಸ್ಥಾನವೂ ಇಲ್ಲ!

ಸರಕಾರ ಇವುಗಳನ್ನು ಕೂಡಾ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದೆಯಾದರೂ, ಜನರು ಶಿಕ್ಷಿತರಾಗದೇ, ಬಡತನ ಮತ್ತು ದಮನಕಾರಿ ಜಾತಿ ವ್ಯವಸ್ಥೆಯಿಂದ ಮೇಲೆ ಬರದೇ ಇಂತಾ ಪ್ರವೃತ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗದು. ಇಂದಿಗೂ ಕೂಡಾ ಇಂತವು ನಡೆಯುವ ಕಡೆಗಳಲ್ಲೆಲ್ಲಾ ಜಿಲ್ಲಾಡಳಿತವು ಪ್ರತೀವರ್ಷ ಅವುಗಳನ್ನು ನಿಷೇಧಿಸುತ್ತಾ ಇರಬೇಕಾಗಿ ಬಂದಿದೆ.

ಈ ಎಲ್ಲಾ ಅಮಾನವೀಯ ಆಚರಣೆಗಳ ಹಿಂದಿರುವ ಜಾತ್ರೆಗಳಲ್ಲಿ ನಡೆಯುವ ಕೋಟಿಗಟ್ಟಲೆ ರೂಪಾಯಿಗಳ ಆರ್ಥಿಕ ವ್ಯವಹಾರಗಳೂ ಅವುಗಳ ಮುಂದುವರಿಕೆಗೆ ಉತ್ತೇಜನ ನೀಡುವಂತಿವೆ. ಇವೆಲ್ಲವೂ ಧರ್ಮ, ನಂಬಿಕೆಗಳ ಹೆಸರಿನಲ್ಲಿ ನಡೆದರೂ, ಕಳೆದ ಕಂತಿನಲ್ಲಿ ನೀವು ಓದಿದ ಕುಂಡೆ ಹಬ್ಬ ಲೈಂಗಿಕ ಬೈಗುಳಗಳನ್ನು ಹೊಂದಿರುವಂತೆ, ಇಲ್ಲಿ ಹೇಳಿರುವ ಆಚರಣೆಗಳು ನೇರಾನೇರಾ ದಲಿತ ಮತ್ತು ಹಿಂದುಳಿದ ಜಾತಿಗಳ ಹೆಣ್ಣುಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿವೆ. ಇವೆಲ್ಲವುಗಳ ವಿವರಗಳನ್ನು ಆಸಕ್ತರು ಲೇಖಕ ಚೆನ್ನಣ್ಣ ವಾಲೀಕಾರ ಅವರ “ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು” ಎಂಬ ಪುಸ್ತಕದಲ್ಲಿ ವಿವರವಾಗಿ ಓದಬಹುದು.

ಮುಂದಿನ ಕಂತಿನಲ್ಲಿ ಇನ್ನೂ ಕೆಲವು ಅಮಾನವೀಯ ಆಚರಣೆಗಳನ್ನು ಕಿರು ವಿವರಗಳೊಂದಿಗೆ ನೋಡೋಣ.

You cannot copy content of this page

Exit mobile version