Friday, August 16, 2024

ಸತ್ಯ | ನ್ಯಾಯ |ಧರ್ಮ

ಜೆಡಿಎಸ್‌ ಯೂಟರ್ನ್:‌ ಮೈಸೂರು ಚಲೋ ಹೋರಾಟದಲ್ಲಿ ಪಾಲ್ಗೊಳ್ಳಲಿರುವ ಕುಮಾರಸ್ವಾಮಿ?

ಬೆಂಗಳೂರು: ಗೊಂದಲದ ಗೂಡಾಗಿರುವ, ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾಗಿರುವ ಬಿಜೆಪಿ ಯೋಜಿತ ಮೈಸೂರು ಚಲೋ ಹೋರಾಟಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಮೊನ್ನೆಯಷ್ಟೇ ಹಾಸನದ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಪ್ರೀತಮ್‌ ಗೌಡ ಅವರ ವಿರುದ್ಧ ಕಿಡಿ ಕಾರಿದ್ದ ಎಚ್‌ ಡಿ ಕುಮಾರಸ್ವಾಮಿಯವರು “ನಾನು ಯಾವುದೇ ಕಾರಣಕ್ಕೂ ನಮ್ಮ ಕುಟುಂಬಕ್ಕೆ ವಿಷವಿಟ್ಟವನ ಜೊತೆ ಹೆಜ್ಜೆಯಿಡುವುದಿಲ್ಲ” ಎಂದು ಘೋಷಿಸಿದ್ದರು.

ಆದರೆ ಇಂದು ಜಾತ್ಯಾತೀತ ಜನತಾ ದಳ ಪಕ್ಷ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮೈಸೂರು ಚಲೋ ಹೋರಾಟದ ಪೋಸ್ಟರ್‌ ಹಂಚಿಕೊಂಡಿದೆ. ಇದುವರೆಗೂ ಮೈಸೂರು ಚಲೋ ಕುರಿತು ತಟಸ್ಥವಾಗಿಯೇ ಇದ್ದ ಜೆಡಿಎಸ್‌ ಈ ಮೂಲಕ ಹೋರಾಟಕ್ಕೆ ಬೆಂಬಲ ಸಾರಿದಂತಾಗಿದೆ.

ಪೋಸ್ಟರಿನಲ್ಲಿ ಕುಟುಂಬದ ಮೂರನೇ ತಲೆಮಾರಿನವರಾದ ನಿಖಿಲ್‌ ಕುಮಾರಸ್ವಾಮಿಯವರ ಫೋಟೊವನ್ನು ಕುಮಾರಸ್ವಾಮಿಯವರ ಫೋಟೊ ಗಾತ್ರದಲ್ಲೇ ಮುದ್ರಿಸಲಾಗಿದೆ. ಈ ಮೂಲಕ ಕುಮಾರಸ್ವಾಮಿ ತನ್ನ ಮಗನನ್ನು ರಾಜ್ಯ ರಾಜಕೀಯದಲ್ಲಿ ನೆಲೆಗೊಳಿಸಲು ಇನ್ನೊಂದು ಸುತ್ತಿನ ಪ್ರಯತ್ನ ನಡೆಸುತ್ತಿರುವಂತಿದೆ.

ಇದ್ದಕ್ಕಿದ್ದಂತೆ ಹೊರಬಿದ್ದಿರುವ ಈ ರಾಜಕೀಯ ನಿರ್ಧಾರದ ಹಿಂದೆ ಬಿಜೆಪಿ ಹೈಕಮಾಂಡ್‌ ಒತ್ತಡ ಇರಬಹುದು ಎನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ. ಏಕೆಂದರೆ ಈ ಯಾತ್ರೆಯಿಂದ ಜೆಡಿಎಸ್‌ಗಿಂತಲೂ ಹೆಚ್ಚು ಲಾಭವಿರುವುದು ಬಿಜೆಪಿಗೆ. ಬಿಜೆಪಿ ತಾನು ಜೆಡಿಎಸ್‌ ಜೊತೆ ಗುರುತಿಸಿಕೊಂಡು ಹಳೇ ಮೈಸೂರು ಭಾಗದಲ್ಲಿನ ಒಕ್ಕಲಿಗ ಮತಬುಟ್ಟಿಗೆ ಕೈಹಾಕುವ ಪ್ರಯತ್ನ ಮಾಡುತ್ತಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಂಬೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page