“ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇದೇ ರೀತಿ ನಡೆದುಕೊಂಡರೆ ಜೆಡಿಎಸ್ ಇನ್ನಷ್ಟು ಶಾಸಕರುಗಳನ್ನು ಕಳೆದುಕೊಳ್ಳಲಿದೆ. ನಮ್ಮ ನೊವು ಕುಮಾರಸ್ವಾಮಿ ಅವರಿಗೆ ಮುಂದೆ ಅರ್ಥವಾಗಲಿ” ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕುಮಾರಸ್ವಾಮಿ ಕೇಂದ್ರ ಸಚಿವ ಆಗುತ್ತಿದ್ದಂತೆಯೇ ಜೆಡಿಎಸ್ ಶಾಸಕರುಗಳನ್ನೇ ಕಡೆಗಣಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮುಂದುವರೆದರೆ ಇದರ ಪರಿಣಾಮ ಅವರೇ ಎದುರಿಸಬೇಕಾಗುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರುಗಳಿಗೆ ಗಾಳ ಹಾಕುತ್ತಿದೆ. ಇದರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.
ಕೋಲಾರದ JDS ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂದಿದ್ದ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಮೃದ್ಧಿ ಮಂಜುನಾಥ್, ಕಾಂಗ್ರೆಸ್ ಸೇರುವಂತೆ, ದೊಡ್ಡ ದೊಡ್ಡ ನಾಯಕರಿಂದಲೇ ಆಹ್ವಾನ ಬಂದಿದೆ. ಕಾಂಗ್ರೆಸ್ ಸೇರ್ಪಡೆಗೆ ನೇರ ಆಹ್ವಾನ ಬಂದಿದೆ. ನಾನು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿಲ್ಲ, ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.
ಆದರೆ ನೇರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಂಜುನಾಥ್ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರುಗಳನ್ನೆ ಕಡೆಗಣಿಸುತ್ತಿದ್ದಾರೆ. ಸೋತವರೇ ಅವರ ಹಿಂಬಾಲಕರಾಗಿದ್ದಾರೆ. ನಮ್ಮ ಸ್ವಂತ ಬಲದಿಂದ ಶಾಸಕರಾದರೂ ನಮ್ಮ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಇದೇ ಮುಂದುವರಿದರೆ ಜೆಡಿಎಸ್ ಇನ್ನಷ್ಟು ಶಾಸಕರುಗಳನ್ನು ಕಳೆದುಕೊಳ್ಳಲಿದೆ ಎಂದು ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ