ಸಾಗರದ ಉಪವಿಭಾಗಾಧಿಕಾರಿ ಕಛೇರಿ ಎದುರು ಪ್ರಚೋದನಕಾರಿ ಭಾಷಣೆ ಮಾಡಿದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ವಿರುದ್ಧ ಸಾಗರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಂತ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅರುಣ್ ಕುಗ್ವೆ ಭಾಷಣ ಮಾಡಿದ್ದರು.
ಈ ಭಾಷಣದಲ್ಲಿ ಅರುಣ್ ಕುಗ್ವೆ ನಿರ್ದಿಷ್ಟವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ, ಪ್ರಚೋದನಾತ್ಮಕ ಮಾತುಗಳನ್ನು ಆಡಿದ್ದಲ್ಲದೇ, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಈ ಹಿನ್ನಲೆಯಲ್ಲಿ ಇಂದು ಮುಸ್ಲೀಂ ಮುಖಂಡ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಅಜೀಂ ಎಂಬುವರು ಸಾಗರ ನಗರ ಠಾಣೆಗೆ ತೆರಳಿ, ಅರುಣ್ ಕುಗ್ವೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಸಾಗರ ನಗರ ಠಾಣೆಯಲ್ಲಿ ಬಿಎನ್ ಎಸ್ ಕಾಯ್ದೆಯ 192 ರಡಿ ಎಫ್‌ಐಆರ್ ದಾಖಲಾಗಿದೆ.