ಕಳೆದ ವಾರ ಮಂಗಳೂರಿನಲ್ಲಿ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ವಚನ ಸಾಹಿತ್ಯ ಸಮ್ಮೇಳನ ನಡೆಯಿತು. ಈಗಾಗಲೇ RSS ಬೆಲ್ಟ್ ಎಂದು ಗುರುತಿಸಿಕೊಂಡಿರುವ ಕರಾವಳಿ ಭಾಗದಲ್ಲಿ ಲಿಂಗಾಯತರ ವಚನ ಸಾಹಿತ್ಯ ಸಮ್ಮೇಳನ ನಡೆಸುವುದೇ? ಅಡ್ಡಿಯಿಲ್ಲ, ಬಸವಣ್ಣನವರ ವಚನ ಸಾಹಿತ್ಯ ಎಲ್ಲೆಡೆ ಪಸರಿಸುವ ಒಳ್ಳೆಯ ಕೆಲಸ ಎಂದು ಖುಷಿಯಿಂದ ಯಾರು ಮಾಡ್ತಿರೋದು ಅಂತ ನೋಡಿದರೆ ಈ ಸಮ್ಮೇಳನ, ಪ್ಲೆಕ್ಸ್ ಬ್ಯಾನರ್‌ಗಳೆಲ್ಲೆ ಸುತ್ತೂರು ಶ್ರೀಗಳೇ ಕಾಣಿಸಿಕೊಂಡಿದ್ದರು.
ಸುತ್ತೂರು ಶ್ರೀಗಳು ಈ ಹಿಂದೆ ಮೋದಿಯವರನ್ನುಮತ್ತು ಬಿಜಾಪುರದ ಸಿದ್ದೇಶ್ವರ ಶ್ರೀಗಳನ್ನು ಒಂದೇ ವೇದಿಕೆಗೆ ಹತ್ತಿಸಿದ್ದು ಮತ್ತು ಆ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳ ಮಾನ ಹರಾಜಿಗಿಟ್ಟಿದ್ದು ಎಲ್ಲವೂ ನೆನಪಾದವು. ಈ ಸಲ ಯಾರನ್ನು ಹರಾಜಿಗಿಡ್ತಾರೋ ಅನ್ನೋ ಅನುಮಾನ ಸಹಜವಾಗಿ ಕಾಡತೊಡಗಿತ್ತು. ನಂತರ ಈ ಕಾರ್ಯಕ್ರಮಲ್ಲಿ ಪೇಜಾವರ ಶ್ರೀಗಳ ಭಾಷಣ ಕೇಳಿಸಿಕೊಂಡ ಮೇಲೆ ನನ್ನ ಅನುಮಾನ ನಿಜವೇ ಆಯಿತು. ಶ್ರೀ ಯತಿಗಳು ವೇದ ಆಗಮ, ಉಪನಿಷತ್ತುಗಳ ಶ್ಲೋಕಗಳನ್ನೇ ಬಳಸಿಕೊಂಡು ಕಾಪಿ ಮಾಡಿ ವಚನಗಳು ಸೃಷ್ಟಿಯಾಗಿವೆ ಅನ್ನುವ ರೀತಿಯಲ್ಲಿ ಮಾತನಾಡಿದರು. ಅಂದರೆ ಈ ಕಾರ್ಯಕ್ರಮದ ಮೂಲಕ ಸುತ್ತೂರು ಶ್ರೀಗಳು ಇಡೀ ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯದ ಮಾನವನ್ನೇ ಹರಾಜಿಗಿಟ್ಟಂತಾಯಿತು.
(ಈ ಬರಹದ ಕುರಿತು ವಿಡಿಯೋ ಲಿಂಕ್ ಇಲ್ಲಿದೆ https://www.youtube.com/watch?v=h5Ks-E1hssk)
ಪೇಜಾವರ ಶ್ರೀಗಳು ಈ ಹಿಂದೆ ತಮ್ಮ ಯಾವ ಭಾಷಣದಲ್ಲೂ ವಚನಕಾರರ ವಚನಗಳನ್ನು ಕೋಟ್ ಮಾಡಿದವರೇ ಅಲ್ಲ, ಒಟ್ಟಿನಲ್ಲಿ ಅವರ ಶ್ರೀ ನಾಲಿಗೆಯು ವಚನಗಳನ್ನು ನುಡಿಯಿತಲ್ಲ, ಅಂತ ಒಂದಡೆ ಸಮಾಧಾನ ಅನಕೊಂಡರೆ, ಈ ವಚನಗಳೆಲ್ಲವಕ್ಕೂ ಸನಾತನ ಶಾಸ್ತ್ರಗಳೇ ಮೂಲ. ಅಲ್ಲಿಂದಲೇ ವಚನಕಾರರು ತುಗೊಂಡು ಸರಳವಾಗಿ ಕನ್ನಡಕ್ಕೆ ತಂದಿದ್ದಾರೆ ಎಂಬ ಹೇಳಿಕೆ ಅಚ್ಚರಿಯನ್ನುಂಟು ಮಾಡಿತು.
ನಮಗೆಲ್ಲ ಗೊತ್ತಿರುವಂತೆ ಬ್ರಾಹ್ಮಣ ಧರ್ಮದ ಮೌಡ್ಯಾಚಾರಗಳಿಂದ ಬೇಸತ್ತು ಮತ್ತು ಮೌಡ್ಯಾಚಾರಗಳಿಂದಲೇ ಪುರೋಹಿತವರ್ಗ ಜನ ಸಾಮಾನ್ಯರನ್ನು ಗೋಳು ಹೋಯ್ದುಕೊಳ್ಳುವುದನ್ನು ಕಂಡು ರೋಸಿ ಹೋಗಿ ಬಸವಣ್ಣಾದಿ ಶರಣರು ಬೇರೆ ದಾರಿಯನ್ನು ಕಂಡು ಕೊಂಡವರು. ಗುಡಿ ಗುಂಡಾರಗಳಲ್ಲಿ ಬಂಧಿಯಾಗಿದ್ದ ದೇವರನ್ನು ಜನ ಸಾಮಾನ್ಯರ ಅಂಗೈಯಲ್ಲಿಟ್ಟು ಇಷ್ಟಲಿಂಗ ತತ್ವವನ್ನು ಭೋದಿಸಿದರು. ಶರಣರ ನಂತರ ಬಂದ ದಾಸವರಣ್ಯರು ಕೂಡ ಬ್ರಾಹ್ಮಣ್ಯದ ಮಡಿ ಮೌಡ್ಯಗಳ ಕಡು ವಿರೋಧಿಗಳಾಗಿದ್ದರು. ಇದೇ ಉಡುಪಿ ಮಠದಲ್ಲಿ ದಾಸಶ್ರೇಷ್ಠ ಕನಕದಾಸರು ಶ್ರೀಕೃಷ್ಣದ ದರ್ಶನಕ್ಕೆ ಬಂದಾಗ ಈ ಬ್ರಾಹ್ಮಣ ಯತಿಗಳು ದೇವಸ್ಥಾನದ ಬಾಗಿಲನ್ನೇ ತೆರೆದಿರಲಿಲ್ಲ. ಈಗ ನೋಡಿದರೆ ಶರಣರು, ದಾಸರು ಬ್ರಾಹ್ಮಣರ ಶ್ಲೋಕಗಳಲ್ಲಿದ್ದುದನ್ನೇ ಕಾಪಿ ಮಾಡಿದ್ದಾರೆ ಅನ್ನೋ ಅರ್ಥದಲ್ಲಿ ಶ್ರೀಗಳು ಈ ಸಮ್ಮೇಳನದಲ್ಲಿ ಮಾತಾಡಿದ್ದಾರೆ.ಈ ವಚನಗಳಲ್ಲಿರುವ ಸಾರ ಮೊದಲೇ ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಇತ್ತು. ಅದನ್ನು ಕಾಲಾನಂತರದಲ್ಲಿ ವಚನಕಾರರು, ಶರಣರು ಸರಳ ಕನ್ನಡಕ್ಕೆ ತಂದು ಅಥವಾ ಅನುವಾದ ಮಾಡಿ ಅದನ್ನು ಮನೆಗೆ ಮನೆಗೆ ಮುಟ್ಟಿಸಿದರು ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.
ಹಾಗಾದರೆ ಶ್ರೀಗಳಿಗೆ ಕೆಲವು ಪ್ರಶ್ನೆಗಳು. ಆಯ್ತು ನೀವು ಹೇಳಿದಂತೆ ವಚನಗಳ ಸಾರ ವೇದ, ಆಗಮ ಉಪನಿಷತ್ತು ಶಾಸ್ತ್ರಗಳಲ್ಲಿ ಇತ್ತು ಅಂತಲೇ ಬಾವಿಸೋಣ. ಆದರೆ, ಅವುಗಳನ್ಯಾಕೆ ನೀವು ಸಂಸ್ಕೃತದಲ್ಲಿ ಬರೆದಿಟ್ಟು ಜನ ಸಾಮಾನ್ಯರಿಂದ ದೂರ ಇಟ್ಟಿರಿ? ಅಲ್ಲದೇ ಈ ವೇದ ಉಪನಿಷತ್ತುಗಳನ್ನು ಕೇಳಿಸಿಕೊಂಡ ಶೂದ್ರನ ಕಿವಿಗೆ ಕಬ್ಬಿಣದ ಸೀಸವನ್ನು ಹುಯ್ಯಬೇಕು ಅಂತ ಕಾನೂನು ಮಾಡಿದ್ರಿ ಯತಿಗಳೇ?
ಇದೆಲ್ಲ ಇರಲಿ, ಈಗಲೂ ನಿಮಗೆ ನಿಜವಾಗಿಯೂ ವಚನಗಳ ಮೇಲೆ ಪ್ರೀತಿ ಇದ್ದರೆ, ಯಾಕೆ ವಚನಗಳಲ್ಲಿರುವ ಸಾರವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ನಿವೇ ಮಾಡಬಾರದು. ಇವತ್ತಿನ ಈ ಲಿಂಗಾಯತರ ಕಾರ್ಯಕ್ರಮ ಹೊರತುಪಡಿಸಿ ಬೇರೆ ಯಾವುದಾದರೂ ಕಾರ್ಯಕ್ರಮದಲ್ಲಿ ನೀವು ವಚನಗಳನ್ನು ಕೋಟ್ ಮಾಡಿ ಮಾತಾಡಿದ್ದಿರಾ ಯತಿಗಳೇ? ಬರಿ ನೀವು ಅರ್ಥವಾಗದ ಕಬ್ಬಿಣದ ಕಡಲೇಯಿಂತಿರುವ, ನೀವು ಮಾತ್ರ ಉಚ್ಚರಿಸಬಹುದಾದ ಸಂಸ್ಕೃತ ಶ್ಲೋಕಗಳನ್ನೇ ಯಾಕೆ ಹೇಳುತ್ತಿರಿ? ಹೋಗಲಿ, ಈ ಕನ್ನಡದ ನೆಲದಲ್ಲಿ ನಿಮ್ಮೀ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡದಲ್ಲೇ ಹೇಳಬೇಕೆಂದು ನಿಮಗೆ ಯಾವತ್ತು ಅನ್ನಿಸಿಲ್ಲವೇ?
ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಶ್ರೀಗಳು ಏನು ಜಾಣತನ ಮಾಡಿದರು ಎಂದರೆ, ತಮಗೆ ಬೇಕಾದ ಒಂದೆರಡು ವಚನಗಳನ್ನು ಓದಿಕೊಂಡು ಬಂದು ಪದೇ ಪದೇ ಅವುಗಳನ್ನೇ ಈ ಕಾರ್ಯಕ್ರಮದಲ್ಲಿ ಕೋಟ್ ಮಾಡಿದರು. ಹಿಂದೂ ಧರ್ಮದ ಮೌಡ್ಯಗಳನ್ನು, ಕಂದಾಚಾರಗಳನ್ನು ವಿರೋಧಿಸುವ, ದೇವರು, ದೇವಸ್ತಾನ, ಧರ್ಮದ ಹೆಸರಲ್ಲಿ ಬ್ರಾಹ್ಮಣರು ನಡೆಸುತ್ತಿದ್ದ ಶೋಷಣೆಗಳನ್ನು ವಿರೋಧಿಸಿ ಬರೆದಿರುವ ಎಷ್ಟೊಂದು ವಚನಗಳಿವೆ, ಅವುಗಳನ್ನು ಅವರು ಕೋಟ್ ಮಾಡಲು ಹೋಗಲಿಲ್ಲ. ಶ್ರೀಗಳು ಶರಣರ ವಚನಗಳನ್ನು ನೀವು ಪೂರ್ತಿಯಾಗಿ ಅಧ್ಯಯನ, ಅದರಲ್ಲಿ ಸಾರವನ್ನು ಅಳವಡಿಸಿಕೊಂಡಿದ್ದರೆ.ಲಿಂಗಾಯತರ ಕಾರ್ಯಕ್ರಮದಲ್ಲಿ ಮನುಷ್ಯ ದೇವರ ಅನುಗ್ರಹವನ್ನು ಪಡೆಯಲೇಬೇಕು, ಮನುಷ್ಯ ದೇವರ ಆರಾಧನೆಯನ್ನು ಮಾಡಲೇಬೇಕು ಅಂತ ಹೇಳುತ್ತಿರಲಿಲ್ಲ. ಬಸವಣ್ಣ ಗುಡಿ ಸಂಸ್ಕೃತಿಯ ಇಂಥವರಿಗೆ ಏನು ಹೇಳಿದ್ದಾ ಗೊತ್ತಾ?, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದಿದ್ದಾರೆ.
ದೇವರ ಆರಾಧನೆಯಲ್ಲಿ ಸಮಯ ಕಳೆಯುವುದಕ್ಕಿಂತ ʼಕಾಯಕ ಕೈಲಾಸ, ಎಲ್ಲರೂ ದುಡಿದು ಉಣ್ಣುವ ಮೂಲಕ ನಿಮ್ಮ ಕಾಯಕಗಳಲ್ಲಿಯೇ ದೇವರನ್ನು ಕಾಣಿ ಎಂದಿದ್ದರು ಬಸವಣ್ಣ.
ಮಾದಾರ ಧೂಳಯ್ಯ, ನುಲಿಯ ಚಂದಯ್ಯನವರಂಥ ಶೂದ್ರ ಶರಣರಂತೂ ಬಸವಣ್ಣನವರ ಇಷ್ಟಲಿಂಗ ತಾತ್ವಿಕತೆಯನ್ನು ಮೀರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದರು. ಮಾದಾರ ಧೂಳಯ್ಯನಿಗೆ ಒಮ್ಮೆ ಇಷ್ಟ ಲಿಂಗ ದೇವರೇ ಪ್ರತ್ಯಕ್ಷವಾಗಿ ವರ ನೀಡುತ್ತೇನೆ ಎಂದಿದ್ದಾಗ ನಾನು. ಕಾಯಕ ಮಾಡುತ್ತಿದ್ದೇನೆ. ನೀನು ಡಿಸ್ಟರ್ಬ ಮಾಡಬೇಡ, ವರ ನೀಡುವುದಾದರೆ ಬೇರೆಯವರಿಗೆ ನೀಡು ಎಂದಿದ್ದ. ಇನ್ನು ನುಲಿಯ ಚಂದಯ್ಯ ಕಾಡಿನಲ್ಲಿ ಕೆಲಸ ಮಾಡುವಾಗ, ಆತನ ಕೊರಳಲ್ಲಿದ್ದ ಇಷ್ಟಲಿಂಗ್ ಕೆಳಗೆ ಜಾರಿ ಬಿದ್ದಾಗ ನೀನು ಬಿದ್ದರೆ ಬೀಳು ನನಗೆ ನಿನಗಿಂತಲೂ ಕಾಯಕ ಮುಖ್ಯ ಎಂದಿದ್ದ.
ಇನ್ನು ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಹೋಗುವವರನ್ನು ಕುರಿತು,
`ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಹೊಟ್ಟೆಯಡಿಯಾಗಿ ಬೀಳುವ
ಲೊಟ್ಟೆ ಮೂಗನ ಕಂಡರೆ
ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು
ಲಟಲಟನೆ ಹೊಡೆ ಎಂದ ಅಭಿಗರ ಚೌಡಯ್ಯ
` ಹಿಂದೆಲ್ಲಾ ವೃತ್ತಿಯಿಂದಲೇ ಅವರ ಜಾತಿಯನ್ನು ಗುರುತಿಸಿ ಕೀಳಾಗಿ ಕಾಣುವ ಪ್ರವೃತ್ತಿ ಇತ್ತು. ಶರಣರು ಅದಕ್ಕೆ `ಕಾಯಕ’ವೆಂದು ಕರೆದು `ಕಾಯಕವೇ ಕೈಲಾಸ’ವೆಂದು ಗೌರವಿಸಿ ಜಾತಿಯನ್ನು ತೊಳೆದು ಸ್ವಚ್ಚಗೊಳಿಸಿದ್ದರು. ಅಲ್ಲಮನನ್ನು ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಕೂರಿಸಿದ ಬಸವಣ್ಣ ಹಾಗೂ ಇತರ ಶರಣರು ಅಸ್ಪೃಶ್ಯನೊಬ್ಬನನ್ನು ಗೌರವಿಸಿ ಮೇಲುಜಾತಿ ಡಾಂಭಿಕರನ್ನು ಕೆಣಕಿ ಅಣಕಿಸಿದ್ದಾರಲ್ಲವೆ? `ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ. ಕುಲವೊಂದೇ ತನ್ನತಾನರಿದವಂಗೆ’ ಎನ್ನುವ ಬಸವಣ್ಣನಿಗೆಲ್ಲಿಯ ಬ್ರಾಹ್ಮಣ್ಯದ ದಾಕ್ಷಿಣ್ಯ ಇತ್ತು ಹೇಳಿ?
`ಕಾಸಿ ಕಮ್ಮೋರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ವೇದವನೋದಿ ಬ್ರಾಹ್ಮಣನಾದ, ಲಿಂಗಸ್ಥಲನರಿದವನೇ ಕುಲಜನೆಂಬೋ’ ಎಂಬ ಬಸವಣ್ಣನ ವಿಚಾರವಾದದೆದುರು ಬ್ರಾಹ್ಮಣ್ಯ ಅರ್ಥ ಕಳೆದುಕೊಂಡು ಕಳಾಹೀನವಾಗತೊಡಗಿತ್ತು. ಇಂಥವರೆಲ್ಲರ ಬದುಕನ್ನು, ವಚನಗಳನ್ನು ಈ ಶ್ರೀಗಳು ಅರ್ಥ ಮಾಡಿಕೊಂಡಿದ್ದರೆ ದೇವರ ಅನುಗ್ರಹಕ್ಕಾಗಿ ಯಾವಾಗಲೂ ಆರಾಧನೆ ಮಾಡಬೇಕು ಎಂಬ ಹುಸಿಯ ಮಾತುಗಳನ್ನು ಹೇಳುತ್ತಿರಲಿಲ್ಲ ಅಲ್ಲವೇ ಶ್ರೀಗಳೇ?
ಈ ಹಿಂದೆ ಹಿರಿಯ ಪೇಜಾವರ ಶ್ರೀಗಳು ಲಿಂಗಾಯತರು ಕೂಡ ಹಿಂದೂಗಳೇ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅವರ ಹೇಳಿಕೆಯಿಂದ ಲಿಂಗಾಯತರೆಲ್ಲ ಒಗ್ಗಟ್ಟಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ಆಗ್ರಹಿಸಿ ದೊಡ್ಡ ಹೋರಾಟವನ್ನೆ ಮಾಡಿದ್ದು ಈಗ ಇತಿಹಾಸ. ಲಿಂಗಾಯತ ಧರ್ಮ ಹೇಗೆ ವೈದಿಕ ಧರ್ಮಕ್ಕಿಂತ ಭಿನ್ನ ಮತ್ತು ವೈದಿಕ ಧರ್ಮದಲ್ಲಿನ ಅಸಮಾನತೆಯನ್ನು ಪ್ರತಿರೋಧಿಸಿಯೇ ಹೇಗೆ ಲಿಂಗಾಯತ ಧರ್ಮ ಹುಟ್ಟಿಕೊಂಡಿತು ಎನ್ನುವುದಕ್ಕೆ ಗೂಗಲ್ ಮಾಡಿದರೆ ಸಾಕಷ್ಟು ಲೇಖನಗಳು, ವರದಿಗಳು ಸಿಗುತ್ತವೆ. ಈ ಶ್ರೀಗಳು ಎಟಲಿಸ್ಟ್ ಈ ವರದಿಗಳನ್ನು ಓದಿಕೊಂಡು ಬಂದಿದ್ದರೂ ಸಾಕಿತ್ತು. ವಚನಕಾರರು ವೈದಿಕರ ಶಾಸ್ತ್ರಗಳನ್ನೆ ಕಾಪಿ ಮಾಡಿದ್ದಾರೆ ಎಂಬಂಥ ಅಸಂಬದ್ಧ ಹೇಳಿಕೆಗಳನ್ನು ಹೇಳದೇ ಬಚಾವಾಗುತ್ತಿದ್ದರು.
ವೈದಿಕ ಧರ್ಮದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಮಾನವೀಯ ಮಡಿ ಮೈಲಿಗೆಗಳನ್ನು ವಿರೋಧಿಸಿ ನಮ್ಮ ದೇಶದಲ್ಲಿ ಮೊದಲು ಹುಟ್ಟಿದ್ದು ಬೌದ್ಧಧರ್ಮ. ನಂತರ ಹುಟ್ಟಿ ಬಂದ ಜೈನಧರ್ಮ, ಚಾರ್ವಾಕ ಧರ್ಮ. ವೀರಶೈವ ಧರ್ಮಗಳು ಕೂಡ ವೈದಿಕ ಧರ್ಮದಲ್ಲಿನ ಪೊಳ್ಳುತನ ಡಾಂಭಿಕತೆ, ಜಾತೀಯತೆಯನ್ನು ವಿರೋದಿಸುವ ನಿಲುವನ್ನೇ ಪ್ರದರ್ಶಿಸಿದ್ದವು. ಇದು ಸಕಲ ವಿದ್ಯಾಪಾರಂಗತರಾದ ಯತಿಗಳಿಗೆ ಗೊತ್ತಿರದ ವಿಷಯವೇನಲ್ಲ, ಆದರೂ ಸತ್ಯವನ್ನು ಮರೆಮಾಚಿ ಶರಣರ, ದಾಸರ ತತ್ವಗಳನ್ನು ಹಿಂದೂ ಶಾಸ್ತ್ರಗಳ ನಕಲು ಎಂದು ಕರೆಯುವ ಬುದ್ದಿವಂತಿಕೆ ಏಕೋ ತಿಳಿಯುತ್ತಿಲ್ಲ.
ಹುಟ್ಟಿನಿಂದ ಬ್ರಾಹ್ಮಣನಾದ ಬಸವಣ್ಣ ತನ್ನ ಜನರ ಜಾತೀಯತೆಯಿಂದ ಬೇಸತ್ತು, ಅಸ್ಪೃಶ್ಯ ಆಚರಣೆಗೆ ಅಸಹ್ಯಿಸಿ ಜನಿವಾರ ಕಿತ್ತೆಸೆಯುತ್ತಾನೆ. ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು `ಇಂವಾ ನಮ್ಮವ ಇಂವಾ ನಮ್ಮವ’ ಎಂದು ತಬ್ಬಿ ಮೈದಡವಿ ಮುಟ್ಟಿ ಸಂತೈಸಿದ ಸಂತನಾಗುತ್ತಾನೆ. `ಅನುಭವ ಮಂಟಪ’ವನ್ನೇ ಕಟ್ಟಿ ಅದರಲ್ಲಿ ದಲಿತರು ಶೂದ್ರರು ಮಹಿಳೆಯರನ್ನು ಒಗ್ಗೂಡಿಸಿ. ಇತರ ಶರಣ ಶರಣೆಯರಿಂದಲೂ ಖಡಕ್ಕಾದ ವಚನಗಳನ್ನು ಬರೆಸಿದ ಮಹಾನುಭಾವ ಈ ಬಸವಣ್ಣ.
`ವೇದಕ್ಕೆ ಬರೆಯ ಕಟ್ಟುವೆ / ಶಾಸ್ತ್ರಕ್ಕೆ ನಿಗಳವನಿಕ್ಕುವೆ / ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ’ ಎಂದಿದ್ದಾನೆ ಬಸವಣ್ಣ. ಅಣ್ಣನ ಈ ಒಂದೇ ಒಂದು ವಚನ ಓದಿದ್ದರೆ ಶ್ರೀಗಳು ವಚನಗಳಿಗೆ ಶಾಸ್ತ್ರಗಳೇ ಮೂಲ ಎನ್ನುವ ಅಪದ್ಧ ಹೇಳಿಕೆಯನ್ನು ಹೇಳುತ್ತಿರಲಿಲ್ಲ. ಅಷ್ಟೇಕೆ ` ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ’ ಎಂದಿರುವ ಅಕ್ಕಮಹಾದೇವಿಯ ವಚನವನ್ನುಈ ಶ್ರೀಗಳು ಓದಿದ್ದರೂ ಸಾಕಿತ್ತು.
ಇನ್ನು ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ, ಪೇಜಾವರ ಶ್ರೀಗಳ ಈ ವಚನ ವಿರೋಧಿ ಹೇಳಿಕೆಯನ್ನು ರಾಜ್ಯದಲ್ಲಿ ಯಾರೂ ಅಷ್ಟಾಗಿ ವಿರೋದಿಸಿದ್ದು ಕಂಡಬರಲಿಲ್ಲ.ಕಲ್ಬುರ್ಗಿಯ ಶರಣರಾದ ಈ ವಿಶ್ವಾರಾಧ್ಯ ಸತ್ಯಂಪೇಟೆಯವರನ್ನು ಹೊರತುಪಡಿಸಿದರೆ ಬೇರೆ ಯಾವ ಲಿಂಗಾಯತರು ಯತಿಗಳ ಹೇಳಿಕೆಯನ್ನು ಖಂಡಿಸಿದ್ದು ನನಗೆ ಬೇರೆಲ್ಲೂ ಕಾಣಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಅಷ್ಟೊಂದೆಲ್ಲ ದೊಡ್ಡ ಹೋರಾಟವನ್ನು ಮಾಡಿದ್ದ ಲಿಂಗಾಯತರು, ವಚನಗಳಿಗೆ ಸನಾತನದ ಧರ್ಮದ ಶಾಸ್ತ್ರಗಳೇ ಮೂಲ ಎಂದ ಪೇಜಾವರ ಶ್ರೀಗಳ ಹೇಳಿಕೆಗೆ ಯಾಕೆ ವಿರೋಧ ಕಂಡು ಬಂದಿಲ್ಲವೋ ಗೊತ್ತಿಲ್ಲ. ಇನ್ನು ಮೇಲಾದರೂ ಲಿಂಗಾಯತರು ಪಕ್ಷಬೇದವನ್ನು ಮರೆತು ಯತಿಗಳಿಗೆ ಮತ್ತು ಸುತ್ತೂರು ಶ್ರೀಗಳಿಗೆ ಸರಿಯಾದ ಅರ್ಥ ಮಾಡಿಸುವ ಕೆಲಸ ಮಾಡಿಸಬೇಕಿದೆ.
ಈ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ, ಜಾತ್ಯತೀತತೆ ಸ್ತ್ರೀಸಮಾನತೆಯನ್ನು ನಿಜ ಅರ್ಥದಲ್ಲಿ ತರಬೇಕೆಂದರೆ ಅದಕ್ಕೆ ಶರಣರ ತತ್ವಗಳೆ ಪಾಲನೆ ಒಂದೇ ದಾರಿ ಎನ್ನುವುದನ್ನು ನಾವು ಈಗಲಾದರೂ ಅರ್ಥ ಮಾಡಿಕೊಳ್ಳಬೇಕಿದೆ.
- ಹನಮಂತ ಹಾಲಿಗೇರಿ