ಯಾವುದೇ ಕಾರಣಕ್ಕೂ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಕೆಲಸವನ್ನು ಜೆಡಿಎಸ್ ಮಾಡುವುದಿಲ್ಲ. ಮುಂದಿನ 3 ವರ್ಷ ವಿಪಕ್ಷದಲ್ಲಿಯೇ ಕುಳಿತುಕೊಳ್ಳಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಶಿಡ್ಲಘಟ್ಟದಲ್ಲಿ ರವಿವಾರ ʼಜನರೊಂದಿಗೆ ಜನತಾದಳ’ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 55 ಶಾಸಕರನ್ನು ಬಿಜೆಪಿ ಪಟ್ಟಿ ಮಾಡಿದೆ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ನಾವು ಸದ್ಯ ವಿಪಕ್ಷದಲ್ಲಿದ್ದು, ಅಲ್ಲಿಯೇ ಮುಂದುವರಿಯತ್ತೇವೆ ಎಂದರು.
2028ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಬಹುಮತದೊಂದಿಗೆ ಅಧಿಕಾರಕ್ಕೇರುವುದು ಖಚಿತ. ನಮಗೆ ಕಾಂಗ್ರೆಸ್‌ನ 55 ಅಲ್ಲ, ಒಬ್ಬ ಶಾಸಕನೂ ಬೇಡ. ಜತೆಗೆ ನಮ್ಮ ಪಕ್ಷದ ಶಾಸಕರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಹಣ ಅಥವಾ ಅಧಿಕಾರಕ್ಕಾಗಿ ಆಸೆಪಡುವವರು ನಮ್ಮವರಲ್ಲ ಎಂದರು.