ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಯ ಮೇಲೆ ಅಲ್ಲಿನ ಪೊಲೀಸರು ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೇಂದ್ರ ತನಿಖಾ ಸಂಸ್ಥೆಯ ಕಚೇರಿಯ ಮೇಲೆಯೇ ಸ್ಥಳೀಯ ಪೊಲೀಸರು ದಾಳಿ ನಡೆಸಿರುವುದು ಭಾರೀ ಸಂಚಲನ ಮೂಡಿಸಿದೆ.
23 ಕೋಟಿ ರೂ. ಮೌಲ್ಯದ ನೀರು ಸರಬರಾಜು ಹಗರಣದ ತನಿಖೆಯ ವೇಳೆ ಇಡಿ ಅಧಿಕಾರಿಗಳು ತಮಗೆ ಥಳಿಸಿದ್ದಾರೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಉದ್ಯೋಗಿ ಸಂತೋಷ್ ಕುಮಾರ್ ಆರೋಪಿಸಿದ್ದರು. ಅವರು ಜನವರಿ 12ರಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾಕ್ಷ್ಯ ಸಂಗ್ರಹಕ್ಕಾಗಿ ಡಿಎಸ್‌ಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಇಡಿ ಕಚೇರಿಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದರು.
ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಇಡಿ ಅಧಿಕಾರಿಗಳು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಸಂತೋಷ್ ಕುಮಾರ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದ ಪೊಲೀಸರ ತನಿಖೆಗೆ ತಡೆಯಾಜ್ಞೆ (Stay) ನೀಡಿದೆ. ಅಲ್ಲದೆ, ಇಡಿ ಕಚೇರಿಯಲ್ಲಿ ಯಾವುದೇ ಭದ್ರತಾ ಲೋಪವಾದರೆ ರಾಂಚಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ರಾಕೇಶ್ ರಂಜನ್ ಅವರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದೆ.
ಇಡಿ ಕಚೇರಿ ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಸಿಆರ್‌ಪಿಎಫ್ (CRPF) ಅಥವಾ ಬಿಎಸ್‌ಎಫ್‌ನಂತಹ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ಕೇಂದ್ರ ಗೃಹ ಇಲಾಖಾ ಕಾರ್ಯದರ್ಶಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಇಡಿ ಕಚೇರಿಯ ಹೊರಗೆ ಸಿಆರ್‌ಪಿಎಫ್ ತುಕಡಿಯನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದಂತೆಯೇ ಜಾರ್ಖಂಡ್‌ನಲ್ಲೂ ಇಡಿ ಮತ್ತು ಸ್ಥಳೀಯ ಪೊಲೀಸರ ನಡುವಿನ ಈ ಸಂಘರ್ಷ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
