ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಜನವರಿ 20ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಔಪಚಾರಿಕ ಚುನಾವಣೆ ನಡೆಯಲಿದೆ ಎಂದು ಪಕ್ಷದ ಸಾಂಸ್ಥಿಕ ಚುನಾವಣಾ ಉಸ್ತುವಾರಿ ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಚುನಾವಣೆ ವೇಳಾಪಟ್ಟಿಯಂತೆ, ಜನವರಿ 19ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಅದೇ ದಿನ ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರ ನಾಮಪತ್ರಕ್ಕೆ ಪಕ್ಷದ ಹಿರಿಯ ನಾಯಕರು ಪ್ರಸ್ತಾವಕರಾಗಿರುತ್ತಾರೆ.
ಹಲವಾರು ತಿಂಗಳ ಭಿನ್ನಾಭಿಪ್ರಾಯಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಬ್ಬರೂ ಒಪ್ಪಿದ ಹೆಸರೇ ನಿತಿನ್ ನಬಿನ್ ಎನ್ನಲಾಗಿದೆ. ಈ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮನಿರ್ದೇಶನವಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಜನವರಿ 20ರಂದು ನಡೆಯುವ ಚುನಾವಣೆಯ ಮೂಲಕ 2020ರ ಜನವರಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಸ್ಥಾನವನ್ನು ನಿತಿನ್ ನಬಿನ್ ವಹಿಸಿಕೊಳ್ಳಲಿದ್ದಾರೆ.
45 ವರ್ಷ ವಯಸ್ಸಿನ ನಿತಿನ್ ನಬಿನ್ ಅವರು ಬಿಜೆಪಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದು, 1980ರಲ್ಲಿ ಪಕ್ಷ ಸ್ಥಾಪನೆಯಾದ ಬಳಿಕ ಜನಿಸಿದ ಮೊದಲ ಬಿಜೆಪಿ ಮುಖ್ಯಸ್ಥರಾಗುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ನಬಿನ್ ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಆರಂಭವಾಗುವ ಸಾಧ್ಯತೆ ಇದ್ದು, ಅದರ ಜೊತೆಗೆ ಕೇಂದ್ರ ಸಂಪುಟ ಪುನರ್ರಚನೆಯ ಕುರಿತ ಚರ್ಚೆಯೂ ಮುನ್ನಡೆಸುವ ಸಾಧ್ಯತೆ ಇದೆ.
