Home ಬ್ರೇಕಿಂಗ್ ಸುದ್ದಿ ಅಮೇರಿಕಾ ಶ್ವೇತ ಭವನದಲ್ಲೊಂದು ವಿಚಿತ್ರ ಘಟನೆ; ಮಚಾದೋ ಅವರ ನೋಬೆಲ್ ಪ್ರಶಸ್ತಿಯನ್ನು ತನ್ನ ಬಳಿಯೇ ಇರಿಸಿಕೊಂಡ...

ಅಮೇರಿಕಾ ಶ್ವೇತ ಭವನದಲ್ಲೊಂದು ವಿಚಿತ್ರ ಘಟನೆ; ಮಚಾದೋ ಅವರ ನೋಬೆಲ್ ಪ್ರಶಸ್ತಿಯನ್ನು ತನ್ನ ಬಳಿಯೇ ಇರಿಸಿಕೊಂಡ ಟ್ರಂಪ್!

0

ಅಮೆರಿಕಾದಲ್ಲಿ ಒಂದು ವಿಚಿತ್ರ ಹಾಗೂ ಕುತೂಹಲಕಾರಿ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಶ್ವೇತಭವನದಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದರಿಂದ, ಇರಾನ್‌ನಲ್ಲಿ ಮರಣದಂಡನೆ ಸ್ಥಗಿತಗೊಳಿಸಿದ ಹಿನ್ನೆಲೆ ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ದೊರೆತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದವು.

ಆದರೆ ವಾಸ್ತವಾಂಶವೇನೆಂದರೆ, ನೊಬೆಲ್ ಸಮಿತಿಯಿಂದ ಟ್ರಂಪ್ ಅವರಿಗೆ ಯಾವುದೇ ಪ್ರಶಸ್ತಿ ನೀಡಲಾಗಿಲ್ಲ ಎಂದು ಸಮಿತಿ ತಿಳಿಸಿದೆ.

ಗುರುವಾರ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿದರು. ಈ ವೇಳೆ ಅವರು ತಮ್ಮ ಬಳಿ ಇದ್ದ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಟ್ರಂಪ್ ಅವರಿಗೆ ಹಸ್ತಾಂತರಿಸಿದರು. ಈ ನಡೆ ಟ್ರಂಪ್ ಅವರನ್ನು ಅಧಿಕೃತ ನೊಬೆಲ್ ಪುರಸ್ಕೃತರನ್ನಾಗಿಸದಿದ್ದರೂ, ಈ ಘಟನೆಯನ್ನು ಟ್ರಂಪ್ ತಮ್ಮ ಗೌರವದ ಸಂಕೇತವಾಗಿ ಬಿಂಬಿಸಿದ್ದಾರೆ.

ಈ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ ಟ್ರಂಪ್, ಮಚಾದೊ ಅವರಿಗೆ ಧನ್ಯವಾದ ಸಲ್ಲಿಸಿ, ಈ ಪ್ರಶಸ್ತಿಯನ್ನು “ಪರಸ್ಪರ ಗೌರವದ ಅಪರೂಪದ ಸಂಕೇತ” ಎಂದು ಕರೆದರು. ಈ ಉನ್ನತ ಮಟ್ಟದ ಭೇಟಿ ವೆನೆಜುವೆಲಾದ ರಾಜಕೀಯ ಭವಿಷ್ಯಕ್ಕೆ ಮಹತ್ವದ್ದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಅಮೆರಿಕವು ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸಂದರ್ಭದಲ್ಲೇ ಈ ಸಭೆ ನಡೆದಿದೆ.

ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಟ್ರಂಪ್ ಅವರಿಗೆ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಟ್ರಂಪ್ ಅದನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಈ ವಿಷಯದ ಕುರಿತು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಪ್ರತಿಕ್ರಿಯಿಸಿ, “ಇಂದು ಮಾರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗುವುದು ನನಗೆ ಗೌರವದ ವಿಷಯ. ಅವರು ನನ್ನ ಕೆಲಸವನ್ನು ಗೌರವಿಸಿ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನನಗೆ ನೀಡಿದರು. ಇದು ಪರಸ್ಪರ ಗೌರವದ ಅತ್ಯುತ್ತಮ ಸೂಚಕ” ಎಂದು ಬರೆದುಕೊಂಡಿದ್ದಾರೆ.

ಸಿಎನ್‌ಎನ್ ವರದಿ ಪ್ರಕಾರ, ಮಚಾದೊ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ಶ್ವೇತಭವನದಲ್ಲಿಯೇ ಬಿಟ್ಟು ತೆರಳಿದ್ದಾರೆ. ಶ್ವೇತಭವನದ ಅಧಿಕಾರಿಗಳ ಮಾಹಿತಿ ಪ್ರಕಾರ, ಆ ಪದಕ ಸದ್ಯ ಅಧ್ಯಕ್ಷ ಟ್ರಂಪ್ ಅವರ ಬಳಿಯಲ್ಲಿದೆ. ಸಂಬಂಧಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗಮನಾರ್ಹವಾಗಿ, ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಆಸೆಯನ್ನು ಹಿಂದಿನಿಂದಲೂ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಹಲವು ಸಂಘರ್ಷಗಳಿಗೆ ಪರಿಹಾರ ಕಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ನೊಬೆಲ್ ಸಮಿತಿ ಸ್ಪಷ್ಟಪಡಿಸಿರುವಂತೆ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಳ್ಳಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ.

ಸಮಿತಿಯು ಸಾಮಾಜಿಕ ಜಾಲತಾಣ X ನಲ್ಲಿ, “ಪದಕದ ಮಾಲೀಕತ್ವ ಬದಲಾಗಬಹುದು, ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಸ್ಥಾನಮಾನ ಬದಲಾಗುವುದಿಲ್ಲ” ಎಂದು ಸ್ಪಷ್ಟನೆ ನೀಡಿದೆ.

You cannot copy content of this page

Exit mobile version