Home ಅಂಕಣ ಬೊಗಸೆಗೆ ದಕ್ಕಿದ್ದು – 46 : ಜಿಮ್ ಕಾರ್ಬೆಟ್ ಸಮಗ್ರ ಬೇಟೆ ಸಾಹಿತ್ಯಕನ್ನಡದಲ್ಲಿ!

ಬೊಗಸೆಗೆ ದಕ್ಕಿದ್ದು – 46 : ಜಿಮ್ ಕಾರ್ಬೆಟ್ ಸಮಗ್ರ ಬೇಟೆ ಸಾಹಿತ್ಯಕನ್ನಡದಲ್ಲಿ!

0

“ಕನ್ನಡದಲ್ಲಿ ಆಧುನಿಕ ಬೇಟೆ ಸಾಹಿತ್ಯ ಹೊಸದೇನಲ್ಲ. ನಮ್ಮ ಕೆಲವು ಕಾವ್ಯಗಳಲ್ಲಿ ಬೇಟೆಯ ಚಿತ್ರಣಗಳು ಬರುತ್ತವೆಯಂತೆ; ನನಗವು ಪರಿಚಿತವಲ್ಲ. ಬಹಳ ಹಿಂದೆಯೇ ಎಂ.ಪಿ. ಮಂಜಪ್ಪ ಶೆಟ್ಟಿಯವರು ಮಲೆನಾಡಿನ ಶಿಕಾರಿಗಳು ಎಂಬ ಪುಸ್ತಕ ಬರೆದಿದ್ದಾರಂತೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಪೀಪಲ್ ಮೀಡಿಯಾದಲ್ಲಿ ಅಂಕಣ ಬರೆಯುತ್ತಿರುವ ಸಮುದ್ಯತಾ ಕಂಜರ್ಪಣೆಯವರು ಫೇಸ್ಬುಕ್‌ನಲ್ಲಿ ಭಾರೀ ಗಾತ್ರದ ಪುಸ್ತಕವೊಂದನ್ನು ಹಿಡಿದುಕೊಂಡು ಓದುವ ಪಟ ಕಣ್ಣಿಗೆ ಬಿತ್ತು. ಪಕ್ಕದಲ್ಲಿ ಪುಸ್ತಕದ ಮುಖಪುಟವೂ ಇತ್ತು. ಅದು ಸುಪ್ರಸಿದ್ಧ ಬೇಟೆಗಾರ, ಸಮಾಜಶಾಸ್ತ್ರೀಯ ಒಳನೋಟಗಳನ್ನು ನೀಡಿರುವ ಜಿಮ್ ಕಾರ್ಬೆಟ್ ಅವರ ಬೇಟೆ ಸಾಹಿತ್ಯದ ಸಮಗ್ರ ಅನುವಾದ ‘ಹಿಮಾಲಯದ ನರಭಕ್ಷಕರು’. ಅನುವಾದಿಸಿರುವವರು ಗೆಳೆಯ ಡಾ. ಟಿ.ಎಸ್. ವಿವೇಕಾನಂದ. ‘ವೀರಲೋಕ’ದ ಪ್ರಕಟಣೆ. ಇದನ್ನು ಕಂಡ ಕೂಡಲೇ ಒಂದು ಆನಂದಾನುಭೂತಿಯ ನೆನಪುಗಳ ಲೋಕದಲ್ಲಿ ತೇಲಿಹೋದೆ. ಆ ಲಹರಿಯನ್ನೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಹೆಚ್ಚುಕಡಿಮೆ ಎರಡು ದಶಕಗಳ ಹಿಂದೆ ವಿವೇಕಾನಂದ ಮತ್ತು ನಾನು ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ತರಬೇತಿ ಸಂಸ್ಥೆಯ ಕೆಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದೆವು. ಒಂದು ಸಲ ಧಾರವಾಡದಲ್ಲಿ ನಡೆದ ಕಾರ್ಯಾಗಾರಕ್ಕೆ ಬಂದಾಗ ವಿವೇಕಾನಂದರ ಕಾರಿನ ಡಿಕ್ಕಿಯ ತುಂಬಾ ಬೇರೆಬೇರೆ ಪುಸ್ತಕಗಳ ಕಟ್ಟುಗಳಿದ್ದವು. ಎಲ್ಲವೂ ಜಿಮ್ ಕಾರ್ಬೆಟ್ ಅವರ ಬೇಟೆಯ ಅನುಭವ ಕಥನಗಳು. ನನಗೀಗ ನೆನಪಿರುವಂತೆ, ರುದ್ರಪ್ರಯಾಗದ ನರಭಕ್ಷಕ ಚಿರತೆ, ಪಾನ್ನಾರಿನ ನರಭಕ್ಷಕ ಚಿರತೆ, ತಲ್ಲಾದೇಶದ ನರಭಕ್ಷಕ, ಚಂಪಾವತದ ನರಭಕ್ಷಕ, ಕಮಾವ್‌ನ ನರಭಕ್ಷಕ, ಮುಕ್ತೇಸರದ ನರಭಕ್ಷಕ, ಚೂಕಾ ನರಭಕ್ಷಕ, ಥಾಕಿನ ನರಭಕ್ಷಕ, ದೇವಾಲಯದ ಹುಲಿ…. ಹೀಗೆ ಬೇರೆಬೇರೆ ಪುಸ್ತಕಗಳು. ಜಿಮ್ ಕಾರ್ಬೆಟ್ ಅವರ ಕತೆಗಳಲ್ಲಿ Man Eater, ನರಭಕ್ಷಕ ಎಂಬುದು ಪ್ರಮುಖವಾಗಿ ಬರುತ್ತದೆ. ಯಾಕೆಂದರೆ, ಅವರು ನರಭಕ್ಷಕನಲ್ಲದ ಯಾವುದೇ ಹುಲಿ ಅಥವಾ ಚಿರತೆಯನ್ನು ತನ್ನ ಕೋವಿಯ ನಳಿಕೆಯ ಎದುರು ಇರುವಾಗಲೂ ಹೊಡೆದಿಲ್ಲ. ಕಾರ್ಬೆಟ್ ಅವರ ಕತೆಗಳನ್ನು ಇಂಗ್ಲೀಷಿನಲ್ಲಿ ಓದಿದ್ದುದರಿಂದ, ಕನ್ನಡದಲ್ಲಿ ಅವುಗಳನ್ನು ನೋಡಿ ಒಂಥರಾ ಹುಚ್ಚೇ ಹಿಡಿಯಿತು. ದಶಕಗಳಿಂದ ಅನುವಾದ ಮಾಡುತ್ತಾ ಬಂದಿರುವ ನನಗೆ, ಈ ಅಸಾಮಿ ಹೇಗೆ ಅನುವಾದ ಮಾಡಿದ್ದಾನೆ ಎಂದು ನೋಡುವ ಕುತೂಹಲ ಬೇರೆ. ಆದುದರಿಂದ ಎಲ್ಲಾ ಪುಸ್ತಕಗಳ ಪ್ರತಿಗಳನ್ನು ಎತ್ತಿಕೊಂಡು ಬಂದೆ.

ಬಂದವನೇ ಓದಲು ಆರಂಭಿಸಿದೆ. ಈ ಕತೆಗಳು ಎಷ್ಟೊಂದು ರೋಚಕವಾಗಿವೆ ಮತ್ತು ಕ್ರೌರ್ಯದ ಎಳ್ಳಷ್ಟೂ ಸುಳಿವಿರದೆ, ಎಷ್ಟೊಂದು ಮಾನವೀಯವಾಗಿವೆ ಎಂದರೆ, ನಾನಿವುಗಳನ್ನು ಮೂರುಮೂರು ಸಲ ಓದಿ ಆನಂದಿಸಿದ್ದೇನೆ. ಇವುಗಳ ಅನುವಾದ ಹೇಗಿದೆ ಎಂದರೆ, ಜಿಮ್ ಕಾರ್ಬೆಟ್ ಮತ್ತು ಅವರು ವಾಸಿಸುತ್ತಿದ್ದ ಹಿಮಾಲಯದ ತಪ್ಪಲಿನ ಭಾಷೆ ಕನ್ನಡವೇ ಎಂಬ ಭ್ರಮೆಗೆ ಒಳಗಾಗುವಂತೆ. ಒಂದು ದಿನ ಆಗಿನ್ನೂ ಶಾಲೆಗೆ ಹೋಗದಿರದ ನನ್ನ ಕಿರಿಯ ಮಗನಿಗೆ ಒಂದು ಕತೆಯನ್ನು ಸ್ವಲ್ಪ ಸಂಕ್ಷಿಪ್ತವಾಗಿ, ಮಕ್ಕಳಿಗೆ ಹೇಳುವಂತೆ ಸ್ವಲ್ಪ ನಾಟಕೀಯವಾಗಿ ತುಳುವಿಗೆ ಅನುವಾದಿಸಿ ಹೇಳಿದೆ. ಬೆರಗುಗಣ್ಣುಗಳಿಂದ ಕೇಳಿದ. ಅವನಿಗೆ ಅದು ಇಷ್ಟವಾಗಿ, ಯಾರು ಬರೆದದ್ದು ಎಂದೆಲ್ಲಾ ಕೇಳಿದ. ಅವನು ವಿವೇಕಾನಂದರೇ ಹುಲಿಬೇಟೆಗಾರ ಆಗಿರಬೇಕು ಎಂದು ತಿಳಿದು, ಅವರಿಗೆ ‘ಪಿಲಿಮಾಮ’ ಎಂದೇ ಹೆಸರಿಟ್ಟ. ನಂತರ ಶುರುವಾಯ್ತು ನೋಡಿ, ಪ್ರತೀದಿನವೂ ಒಂದೇ ರಾಗ, “ಪಿಲಿಮಾಮನ ಕತೆ ಪನ್ಲೆ, ಪಿಲಿಮಾಮನ ಕತೆಪನ್ಲೆ” (ಹುಲಿಮಾವನ ಕತೆ ಹೇಳಿ). ಆಗ ಮಗುವಿನ ಬೆರಗು ನೋಡಿ ಅನುಭವಿಸಿದ ಕುಶಿ ಒಂದು ಬೋನಸ್.

ನಂತರ ಇದೇ ಕುಶಿಯನ್ನು ಬೇರೆ ಮಕ್ಕಳೂ ಅನುಭವಿಸಲಿ ಎಂದು ಎಲ್ಲಾ ಪುಸ್ತಕಗಳನ್ನು ನಮ್ಮೂರಿನ ಸರಕಾರಿ ಶಾಲೆಗೆ ಕೊಟ್ಟೆ. ಅಲ್ಲಿ ಒಂದು ಪುಸ್ತಕದ ಓಪನ್ ಶೆಲ್ಫು ಮಾಡಿದ್ದೆವು. ಅದರಲ್ಲಿ ಇಟ್ಟ ಪುಸ್ತಕಗಳನ್ನು ಮಕ್ಕಳು ಓದಿ ಇಡಬಹುದಿತ್ತು, ಮನೆಗೆ ಕೊಂಡೊಯ್ದು ಓದಿ ತಂದಿಡಬಹುದಿತ್ತು. ಈ ಪುಸ್ತಕಗಳನ್ನು ಅಲ್ಲಿಟ್ಟ ತಕ್ಷಣವೇ ಭಾರೀ ಡಿಮಾಂಡು ಉಂಟಾಯಿತು. ನಂತರದ ವರ್ಷಗಳಲ್ಲಿ, ಈ ಪುಸ್ತಕಗಳು ಹರಿದುಹೋಗುವ ತನಕವೂ ನೂರಾರು ಮಕ್ಕಳು ಇವುಗಳನ್ನು ಓದಿ ಕುಶಿ ಪಡುವುದನ್ನು ನೋಡಿ, ನಾನು ಮತ್ತೆಮತ್ತೆ ಸಂತಸಪಟ್ಟಿದ್ದೇನೆ. ಇದೀಗ ಈ ಕತೆಗಳು ಸಮಗ್ರವಾಗಿ, ಒಂದೇ ಸಂಪುಟದಲ್ಲಿ ಬಂದಿವೆ ಎಂದು ಕೇಳಿ ನನಗೆ ಉಂಟಾಗಿರುವ ಉತ್ಸಾಹಕ್ಕೆ ಕಾರಣಗಳು ಇವು.

ಕನ್ನಡದಲ್ಲಿ ಬೇಟೆ ಸಾಹಿತ್ಯ

ನಾನು ಬಾಲ್ಯದಲ್ಲಿ ಬೇಟೆಯ ಹಳ್ಳಿ ಕತೆಗಳನ್ನು ಅಜ್ಜಿಯರಿಂದ ಕೇಳಿದ್ದೆನಾದರೂ, ಓದಲೇನೂ ಸಿಕ್ಕಿರಲಿಲ್ಲ. ನಂತರದ ವರ್ಷಗಳಲ್ಲಿ ಕೆದಂಬಾಡಿ ಜತ್ತಪ್ಪ ರೈಯವರ ಬೇಟೆಯ ನೆನಪುಗಳು, ಈಡೊಂದು ಹುಲಿಯೆರಡು (1978-79ರ ಹೊತ್ತಿಗೆ) ನಂತರ, ಬೇಟೆಯ ಉರುಳು ಓದಿದ್ದೇನೆ. ನಂತರ ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಮತ್ತು 2014ರಲ್ಲಿ ಬೇಟೆಗಾರನ ಹುಲಿ ಹೆಜ್ಜೆ ಎಂಬ ಪುಸ್ತಕಗಳು ಬಂದಿವೆ ಎಂದು ಕೇಳಿದ್ದೇನಾದರೂ, ಓದಲಾಗಿಲ್ಲ. ಕೆದಂಬಾಡಿಯವರು ಕನ್ನಡದಲ್ಲಿ ಬೇಟೆ ಸಾಹಿತ್ಯಕ್ಕೆ ಒಂದು ಪ್ರತ್ಯೇಕ ಗಮನವನ್ನು ತಂದುಕೊಟ್ಟವರು. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಕೆನ್ನೆತ್ ಆಂಡರ್ಸನ್ ಅವರ ಜಾಲಹಳ್ಳಿ ಕುರ್ಕ, ಮಾಗಡಿಯ ಚಿರತೆ, ಬೆಳ್ಳಂದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ ಇತ್ಯಾದಿ ಕತೆಗಳನ್ನು ಪೂರ್ಣಚಂದ್ರ ತೇಜಸ್ವಿಯವರು ಅನುವಾದ ಮಾಡಿದ್ದಾರೆ. ಓದಿದ ನೆನಪು ಮಸುಕಾಗಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಮಲೆನಾಡಿನ ಚಿತ್ರಗಳು ಕೃತಿಗಳಲ್ಲಿಯೂ ಹುಲಿ ಬೇಟೆಯ ಚಿತ್ರಣ, ಉಲ್ಲೇಖಗಳಿವೆ.

ಹಾಗೆಂದು ಕನ್ನಡದಲ್ಲಿ ಆಧುನಿಕ ಬೇಟೆ ಸಾಹಿತ್ಯ ಹೊಸದೇನಲ್ಲ. ನಮ್ಮ ಕೆಲವು ಕಾವ್ಯಗಳಲ್ಲಿ ಬೇಟೆಯ ಚಿತ್ರಣಗಳು ಬರುತ್ತವೆಯಂತೆ; ನನಗವು ಪರಿಚಿತವಲ್ಲ. ಬಹಳ ಹಿಂದೆಯೇ ಎಂ.ಪಿ. ಮಂಜಪ್ಪ ಶೆಟ್ಟಿಯವರು ಮಲೆನಾಡಿನ ಶಿಕಾರಿಗಳು ಎಂಬ ಪುಸ್ತಕ ಬರೆದಿದ್ದಾರಂತೆ. 1962ರಲ್ಲಿ ಬಿ. ಈಶ್ವರ ಭಟ್ ಅವರು ಆಂಡರ್ಸನ್ ಅವರ ಶಿವನಿಪಳ್ಳಿಯ ಕಪ್ಪು ಚಿರತೆ, ಮಾಗಡಿಯ ಚಿರತೆ ಇತ್ಯಾದಿ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರಂತೆ. ಕಡಿದಾಳು ಕೆ. ಎಸ್. ರಾಮಪ್ಪ ಗೌಡ ಅವರ ಮಲೆನಾಡಿನ ಶಿಕಾರಿ ನೆನಪುಗಳು, ಕೊಡಗಿನ ಸಾಂಪ್ರದಾಯಿಕ ‘ಹುಲಿಮದುವೆ’ ಮಾಡಿಕೊಂಡಿದ್ದ, ಕಾಕೆಮಾನಿ ಹೆಸರಲ್ಲಿ ಬರೆಯುತ್ತಿದ್ದ ಬಿ.ಡಿ. ಸುಬ್ಬಯ್ಯ ಅವರ ಬೇಟೆ ಕತೆಗಳನ್ನು ನಿಯತಕಾಲಿಕಗಳಲ್ಲಿ ಓದಿದ್ದೆ. ಮೇಜರ್ ಎಸ್.ಸಿ. ವೇಣುಗೋಪಾಲ್, ತೋವಿನಕೆರೆ ಸೀತಾರಾಮ ಜೋಯಿಸ್, ಕೈಂತಜೆ ವಿಷ್ಣು ಭಟ್, ಶಶಿಧರ ವಿಶ್ವಾಮಿತ್ರ, ವೈ.ಎನ್. ಪುಟ್ಟಣ್ಣ, ಕೊಡಗಿನ ಡಿ.ಎನ್‌. ಕೃಷ್ಣಯ್ಯ ಮುಂತಾದವರೂ ಬೇರೆ ಬೇಟೆಗಾರರ ಅನುಭವಗಳನ್ನು ಬರೆದಿದ್ದಾರಂತೆ. ಪ್ರಭಾಕರ ಶಿಶಿಲ ಅವರು ಬಡ್ಡಡ್ಕ ಅಪ್ಪಯ್ಯ ಗೌಡ ಅವರ ಬೇಟೆಯ ಅನುಭವಗಳನ್ನು ಶಿಕಾರಿಯ ಸೀಳುನೋಟ ಎಂಬ ಹೆಸರಿನಲ್ಲಿ ಬರೆದಿದ್ದಾರೆ. ಅಕಾಡೆಮಿಕ್ ಕೃತಿಗಳಲ್ಲಿ ನರೇಂದ್ರ ರೈ ದೇರ್ಲ ಅವರ ಕನ್ನಡ ಬೇಟೆ ಸಾಹಿತ್ಯ ಕುರಿತ ಸಂಶೋಧನೆ, ಸ.ಚಿ. ರಮೇಶ್ ಸಂಪಾದಿಸಿರುವ ಬೇಟೆ: ಸಾಂಸ್ಕೃತಿಕ ಪದಕೋಶ ಎಂಬ ಕೃತಿಗಳು ಕೇಳಿಬರುತ್ತವೆ.

ಬೆಂಗಳೂರಿನಲ್ಲಿ ವಾಸವಿದ್ದ ಕೆನ್ನೆತ್ ಆಂಡರ್ಸನ್ ಕತೆಗಳ ಕುರಿತು ಸ್ವಲ್ಪ ಗಮನಹರಿಸುವುದಾದಲ್ಲಿ ತೇಜಸ್ವಿಯವರು ಅನುವಾದಿಸಿರುವುದನ್ನು ಬಿಟ್ಟು, ಅವರ ಇತರ ಕೆಲವು ಕತೆಗಳನ್ನು ಹೆಸರಿಸಬಹುದು: ಮೈಸೂರಿನ ಸೋಮಾರಿ ಕರಡಿ, ಗುಮ್ಮಲಾಪುರದ ಚಿರತೆ, ಪಾನಪಟ್ಟಿಯ ರಾಕ್ಷಸ ಆನೆ, ಯೆಲ್ಲಗಿರಿ ಬೆಟ್ಟಗಳ ಚಿರತೆ, ಜೊವಳಗಿರಿಯ ಹುಲಿ, ಸೇಗೂರಿನ ಹುಲಿ, ಮಂಡಚಿಪಳ್ಳಂನ ಹುಲಿ. ಅವರ ಕೆಲವು ಕತೆಗಳನ್ನು ಹೊಳಲ್ಕೆರೆ ನರಭಕ್ಷಕ ಮತ್ತು ಇತರ ಕತೆಗಳು ಹೆಸರಿನಲ್ಲಿ ಸಾಕ್ಷಿ, ಜೇಡರಕಣಿವೆ ಮತ್ತು ಇತರ ಕತೆಗಳು ಹೆಸರಿನಲ್ಲಿ ನಡಹಳ್ಳಿ ವಸಂತ ಅವರು ಅನುವಾದಿಸಿದ್ದಾರೆ. ಅವರ ಇತರ ಕೆಲವು ಪುಸ್ತಕಗಳೂ ಕನ್ನಡದಲ್ಲಿ ಬಂದಿವೆ.

ಬೇಟೆಗೂ ಮನುಷ್ಯನಿಗೂ ಆದಿಕಾಲದ ಸಂಬಂಧ. ಆಹಾರಕ್ಕಾಗಿ, ರಕ್ಷಣೆಗಾಗಿ, ಒಟ್ಟಿನಲ್ಲಿ ಉಳಿವಿಗಾಗಿ ಬೇಟೆಯಾಡುವುದು ಮನುಷ್ಯರಿಗೆ ಅನಿವಾರ್ಯವಾಗಿತ್ತು. ಬೇರೆ ಮೃಗಗಳ ಎದುರು ತೀರಾ ದುರ್ಬಲರಾದ ಮನುಷ್ಯರು ಆಹಾರದ ಸರಪಳಿಯಲ್ಲೂ ತೀರಾ ಕೆಳಗಿದ್ದರು. ಯೋಚಿಸಿ ನೋಡಿ: ಈಗ ನಮಗೆ ಅಡಿಯಾಳಾಗಿರುವ ನಾಯಿ, ಬೆಕ್ಕುಗಳು ಕೂಡಾ ಒಂದುವೇಳೆ ಎದುರು ನಿಂತು, ಮೇಲೆರಗಿದರೆ ಬಹುತೇಕ ಮನುಷ್ಯರು ಸೋಲುತ್ತಾರೆ. ಹೀಗಾಗಿ, ಒಂಟಿಯಾಗಿ ಬೇಟೆಯಾಡುವ ಸಾಮರ್ಥ್ಯವಿಲ್ಲದ ಕಾರಣದಿಂದ, ಬೇಟೆಗಾಗಿಯೇ ಮನುಷ್ಯರು ಸಾಮೂಹಿಕವಾಗಿ ಇರಬೇಕಾಗಿತ್ತು. ಇದುವೇ ಸಮಾಜದ ಸೃಷ್ಟಿ ಮಾತ್ರ ವಿಕಾಸಕ್ಕೂ ಕಾರಣವಾಯಿತು. ಬೇರೆ ಮಾಂಸಹಾರಿ ಪ್ರಾಣಿಗಳಂತೆ ಹರಿತವಾದ ಹಲ್ಲುಗಳು, ಚೂಪಾದ ಉಗುರುಗಳು ಇಲ್ಲದ ಮನುಷ್ಯರು ಬೇಟೆಗೆಂದೇ ಆಯುಧಗಳನ್ನು ತಯಾರಿಸಬೇಕಾಯಿತು. ಇದುವೇ ಮನುಷ್ಯ ಬುದ್ಧಿ ಬೆಳೆಯುವುದಕ್ಕೂ ಕಾರಣವಾಯಿತು. ಇಂದು ಮನುಷ್ಯರು ಎಷ್ಟು ಪ್ರಬಲರಾಗಿದ್ದಾರೆ ಎಂದರೆ, ಸ್ವಯಂವಿನಾಶದ ಅಸ್ತ್ರಗಳನ್ನೂ ತಯಾರಿಸಿದ್ದಾರೆ. ಇಡೀ ಭೂಮಿಗೆ ತಾವು ಒಡೆಯರು ಎಂಬ ಮದದಲ್ಲಿ ಸಹ ಜೀವಿಗಳನ್ನು, ಪ್ರಕೃತಿಯನ್ನು ವಿವೇಕವಿಲ್ಲದೇ ನಾಶಮಾಡುತ್ತಿದ್ದಾರೆ. ಇಂದು ಹುಲಿ, ಆನೆ, ಚಿರತೆ ಮುಂತಾದ ಕಾಡುಪ್ರಾಣಿಗಳು ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ದೂರುವ ಮನುಷ್ಯರು, ನಾವು ಅವುಗಳ ವಾಸಸ್ಥಾನವಾದ ಕಾಡುಗಳಿಗೆ ಹೋಗಿ, ನಾಶ ಮಾಡಿದ ಕಾರಣವೇ ಅವು ಅನಿವಾರ್ಯವಾಗಿ ನಾಡಿಗೆ ಬರುತ್ತಿವೆ ಎಂದು ಮರೆಯುತ್ತಾರೆ. ಆದುದರಿಂದಲೇ, ಬೇಟೆ ಎಂಬುದಿಂದು ಕ್ರೌರ್ಯದ ಸಂಕೇತವಾಗಿ ಕಾಣುತ್ತಿದೆ. ಆದರಿದು ಎಲ್ಲಾ ಕಾಲಕ್ಕೂ ಹಾಗಿರಲಿಲ್ಲ.

ಬೇಟೆಯಲ್ಲಿ ಪ್ರಮುಖವಾಗಿ ಮೂರು ವಿಧ: ಆಹಾರಕ್ಕಾಗಿ, ಒಣ ಪ್ರತಿಷ್ಟೆಗಾಗಿ ಮತ್ತು ಆತ್ಮರಕ್ಷಣೆಗಾಗಿ ನಡೆಯುವ ಬೇಟೆ. ಮೊದಲನೇ ವರ್ಗದಲ್ಲಿ ಆದಿ ಮಾನವರಂತೆ ಬುಡಕಟ್ಟು ಜನರು ಬರುತ್ತಾರೆ. ಅಗತ್ಯಕ್ಕೆ ತಕ್ಕಷ್ಟೇ ಅವರ ಬೇಟೆ. ಉಳಿದಂತೆ, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಎರಡನೇ ವರ್ಗದಲ್ಲಿ ರಾಜರು, ಪಾಳೆಯಗಾರರು ಇತ್ಯಾದಿ ಜನರು ಬರುತ್ತಾರೆ. ಬ್ರಿಟಿಷ್ ಅಧಿಕಾರಿಗಳು, ರಾಜ ಮಹಾರಾಜರುಗಳು ಸಾವಿರಾರು ಸಂಖ್ಯೆಯಲ್ಲಿ ಹುಲಿಗಳನ್ನು, ಆನೆಗಳನ್ನು ಶೋಕಿಗಾಗಿಯೇ ಕ್ರೂರವಾಗಿ ಕೊಂದಿದ್ದಾರೆ. ಚರ್ಮ, ದಂತಗಳ ಲಾಲಸೆ ಬೇರೆ. ಬಂದೂಕು ಹಿಡಿದು ಅವುಗಳ ಶವಗಳ ಮೇಲೆ ಕಾಲಿಟ್ಟು ಪಟ ತೆಗೆಸಿದ್ದಾರೆ, ಚರ್ಮ ಸುಲಿದು ತಮ್ಮ ಪೌರುಷದ ಸಂಕೇತದಂತೆ ಪ್ರದರ್ಶಿಸಿದ್ದಾರೆ. ಮೂರನೆಯ ತರದ ಬೇಟೆಯು ಅನಿವಾರ್ಯವಾಗಿತ್ತು. ಪ್ರಾಣಿಯೊಂದು ನರಭಕ್ಷಕವಾದಾಗ, ನಿಷ್ಪಾಪಿ ಬಡಜನರ ರಕ್ಷಣೆಗಾಗಿ ಅವುಗಳನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ. ಆಗ ಬೇಟೆ ಕ್ರೌರ್ಯವಾಗದೆ, ಅನಿವಾರ್ಯ ಕಾಯಕವಾಗುತ್ತದೆ. ಆಂಡರ್ಸನ್ ಮತ್ತು ಕಾರ್ಬೆಟ್ ಇಂತವರು.

ಬೇಟೆ ಸಾಹಿತ್ಯಗಳಲ್ಲಿ ಸಾಮಾನ್ಯವಾಗಿ ಬೇಟೆಗಾರರು ತಮ್ಮನ್ನು ಮಹಾನ್ ಸಾಹಸಿಗಳಂತೆ ಉತ್ಪ್ರೇಕ್ಷಿಸಿ, ಪ್ರಾಣಿಗಳನ್ನು ಕ್ರೂರ ಎಂಬಂತೆ ಕಾಣಿಸುತ್ತಾರೆ. ಕಾರ್ಬೆಟ್ ಮತ್ತು ಆಂಡರ್ಸನ್ ಕತೆಗಳಲ್ಲಿ ಇದನ್ನು ನೀವು ಕಾಣಲು ಸಾಧ್ಯವಿಲ್ಲ. ಬದಲಾಗಿ ತಾವು ಕೊಂದ ಪ್ರಾಣಿಗಳ ಬಗ್ಗೆ ಅನುಕಂಪ, ಅವುಗಳ ಬುದ್ಧಿವಂತಿಕೆಯ ಬಗ್ಗೆ ಗೌರವವನ್ನು ನೀವು ಕಾಣುವಿರಿ. ಅವರು ಅವುಗಳ ಸಾವಿಗೆ ಸಂಭ್ರಮಿಸುವುದಿಲ್ಲ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹುಲಿ, ಚಿರತೆಗಳು ಸುಮ್ಮನೇ ನರಭಕ್ಷಕ ಆಗುವುದಿಲ್ಲ ಎಂದು ಕಾರ್ಬೆಟ್ ಮತ್ತೆಮತ್ತೆ ಹೇಳುತ್ತಾರೆ. ಪ್ರತೀಸಲ ಅವರು ನರಭಕ್ಷಕವು ಮನುಷ್ಯ ಹೊಡೆದ ಗುಂಡು, ಮುಳ್ಳುಹಂದಿಯ ಮುಳ್ಳು, ಬೇರೆ ಪ್ರಾಣಿಗಳ ಜೊತೆ ಹೋರಾಟದಲ್ಲಿ ಗಾಯಗೊಂಡು ತಮ್ಮ ಸಹಜ ಆಹಾರವನ್ನು ಬೇಟೆಯಾಡಲು ಅಸಮರ್ಥವಾಗಿದ್ದವು ಎಂಬುದನ್ನು ಎತ್ತಿತೋರಿಸುತ್ತಾರೆ. (ಕೆದಂಬಾಡಿಯವರೂ ವಿನಯಶೀಲತೆಯಿಂದಲೇ ಬರೆದಿದ್ದಾರೆ.)

ಆಂಡರ್ಸನ್ ಮತ್ತು ಕಾರ್ಬೆಟ್ ವಿದೇಶಿ ಮೂಲದವರಾದರೂ, ಭಾರತೀಯರಾಗಿ ಹಾಗೂ ಸ್ಥಳೀಯರಾಗಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಜೊತೆ ಬದುಕಿದವರು. ಕಾರ್ಬೆಟ್ ಅವರ ಮೈ ಇಂಡಿಯಾ ಕೃತಿಯಲ್ಲಿ ತಾವಿದ್ದ ಘಡವಾಲ್, ನೈನಿತಾಲ್, ಅಲ್ಮೋಡ ಮತ್ತು ಈಗ ಜಿಮ್ ಕಾರ್ಬೆಟ್ ರಾಷ್ಟ್ರೀಯ ವನ್ಯಜೀವಿ ಉದ್ಯಾನವಿರುವ ಪ್ರದೇಶದ ಜನರ ಜೀವನದ ಆಪ್ತ, ಅನುಕಂಪ, ಅನುಭೂತಿಯ ಚಿತ್ರಣಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ಬೇಟೆಯ ಕತೆಗಳಲ್ಲೂ ಇಂತಾ ಚಿತ್ರಣಗಳು ದಟ್ಟವಾಗಿ ಹಾಸುಹೊಕ್ಕಾಗಿವೆ. ಅವರ ಬೇಟೆಯ ಕತೆಗಳು ಕ್ರೌರ್ಯದ ಕತೆಗಳಲ್ಲ; ಹುಲಿಯನ್ನು ಎಂದೂ ಮುಖಾಮುಖಿಯಾಗದ, ಚಿತ್ರ ಮತ್ತು ಮೃಗಾಲಯಗಳಲ್ಲಿ ಮಾತ್ರವೇ ನೋಡಿರುವ ನಮ್ಮ ಪೀಳಿಗೆಗೆ ಈ ಕತೆಗಳು ಬಹಳ ರೋಚಕವಾಗಿರುವ ಹೊತ್ತಿಗೇ, ಪರಿಸರ ಮತ್ತು ಸಮಾಜಶಾಸ್ತ್ರೀಯವಾಗಿಯೂ ಒಳನೋಟಗಳನ್ನು ನೀಡುವಂತವು. ಹಾಗಾಗಿಯೇ, ಅವು ಮಕ್ಕಳಿಗೂ ಇಷ್ಟವಾಗುತ್ತವೆ.

ನಾನು ಈ ಸಮಗ್ರ ಪುಸ್ತಕವನ್ನು ನೋಡಿಲ್ಲವಾದರೂ, ಹಿಂದಿನ ಪುಸ್ತಕಗಳನ್ನು ಮತ್ತೆಮತ್ತೆ ಓದಿರುವುದರಿಂದ ವಿವೇಕಾನಂದ ಅವರ ಅನುವಾದ ಈ ಕತೆಗಳು ಕನ್ನಡದವುಗಳೇ ಅನಿಸುವಷ್ಟು ಸಹಜವಾಗಿವೆ ಎಂದು ಹೇಳಬಲ್ಲೆ. ಅವರು ಈ ಪುಸ್ತಕದಲ್ಲಿ ಅವುಗಳನ್ನು ಇನ್ನಷ್ಟು ಪರಿಷ್ಕರಿಸಿರಬೇಕು ಎಂದು ನನ್ನ ಊಹೆ. ಮೇಲಾಗಿ ಅವರು ಪರಿಸರದ ಬಗ್ಗೆ ವಿಶಿಷ್ಟ ದೃಷ್ಟಿಕೋನ ಹೊಂದಿದ್ದು, ಅವರ ಭೂಮಿಗೀತ ಎಂಬ ಅಂಕಣ ಬರಹಗಳ ಸಂಗ್ರಹದಲ್ಲಿ ಇದನ್ನು ಸ್ಪಷ್ಟವಾಗಿ ಕಂಡಿದ್ದೇನೆ. ಇದರ ಪ್ರಭಾವವೂ ಅನುವಾದದಲ್ಲಿದೆ. ಇದು ಎಲ್ಲರಿಗೂ ಇಷ್ಟವಾಗಬಲ್ಲ ಮತ್ತು ಪರಿಸರದ ಬಗ್ಗೆಯೂ ಒಳನೋಟ ನೀಡಬಲ್ಲ ಪುಸ್ತಕ ಮತ್ತು ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಕೊಡುಗೆ ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ.

You cannot copy content of this page

Exit mobile version