ಜಂತರ್ ಮಂತರ್ ಕಡೆ ಪ್ರೊಟೆಸ್ಟ್‌ ಮಾಡೋದಕ್ಕೆ ಹೋಗಬೇಡಿ, ಓದಿನ ಕಡೆ ಗಮನಕೊಡಿ: ಅಡ್ವೈಸರಿ ನೋಟ್‌ ಬಿಡುಗಡೆ ಮಾಡಿದ ಜೆಎನ್‌ಯು

ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ತನ್ನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಮನವಿ ಮಾಡಿದೆ. ಈ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅಡ್ವೈಸರಿ ನೋಟ್ ಬಿಡುಗಡೆ ಮಾಡಿದೆ.

ಸಾರ್ವಜನಿಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳಿಗೆ ಬದ್ಧವಾಗಿರಬೇಕು ಎಂದು ಸೂಚಿಸಿರುವ ವಿಶ್ವವಿದ್ಯಾಲಯ, ದೆಹಲಿಯ ಜಂತರ್ ಮಂತರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಅಥವಾ ಅಲ್ಲಿಗೆ ಭೇಟಿ ನೀಡುವುದರಿಂದ ದೂರವಿರಿ ಎಂದು ವಿನಂತಿಸಿದೆ. ಶೈಕ್ಷಣಿಕ ಸಮುದಾಯದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ತಮ್ಮ ವೈಯಕ್ತಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ಸೋಷಿಯಲ್ ಮೀಡಿಯಾ ಬಳಕೆಯಲ್ಲೂ ಜಾಗ್ರತೆ ವಹಿಸುವಂತೆ ಆಡಳಿತ ಮಂಡಳಿ ಸೂಚಿಸಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಜಾರಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ವಿಶ್ವವಿದ್ಯಾಲಯದ ನಡಾವಳಿ ನಿಯಮಾವಳಿಗಳ (ಕೋಡ್ ಆಫ್ ಕಂಡಕ್ಟ್) ಅಡಿಯಲ್ಲಿಯೂ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಶೈಕ್ಷಣಿಕ ಜವಾಬ್ದಾರಿ ಮತ್ತು ಜವಾಬ್ದಾರಿಯುತ ಪೌರತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಗೆ ಬರುವ ಎಲ್ಲರಿಗೂ ಕರೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು