ಅಮೇರಿಕಾದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಅಚ್ಚರಿಯ ನಿರ್ಧಾರ ತಗೆದುಕೊಂಡಿದ್ದು, ಕೊನೆಯ ಕ್ಷಣದಲ್ಲಿ ತಾವು ಕಣದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಆ ಮೂಲಕ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಕಳೆದ ಹಲವು ದಿನಗಳಿಂದ ವಯೋಸಹಜ ಸಮಸ್ಯೆಗಳಿಗೆ ತುತ್ತಾಗಿರುವ 81 ವರ್ಷದ ಬೈಡೆನ್ ಅವರ ಸಾರ್ವಜನಿಕ ಸಮಾರಂಭಗಳಲ್ಲಿನ ಇತ್ತೀಚಿನ ವರ್ತನೆ ಭಾರಿ ಟೀಕೆಗೆ ಗುರಿಯಾಗಿತ್ತು. ಸ್ವತಃ ಬೈಡೆನ್ ಗೆ ಸ್ಪರ್ಧೆ ಬಗ್ಗೆ ಡೆಮಾಕ್ರಟಿಕ್ ಪಕ್ಷದ ಹಲವು ನಾಯಕರಿಂದ ವಿರೋಧ ಇದ್ದರೂ ಸ್ಪರ್ಧೆ ಮಾಡುವ ಬಗ್ಗೆಯೇ ಬೈಡೆನ್ ಉತ್ಸುಕತೆ ತೋರಿದ್ದರು.
ಅಲ್ಲದೇ, ಅವರ ಕುಟುಂಬ ಸದಸ್ಯರು, ಆಪ್ತರು ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೈಡೆನ್ ಘೋಷಿಸಿದ್ದಾರೆ. ಅವರ ಬದಲಾಗಿ ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ.