Home ದೇಶ ಕೋಮುವಾದದ ವಿರುದ್ಧದ ಹೋರಾಟಕ್ಕೆ ದಾರಿದೀಪ; ಜಿಮ್ ತರಬೇತುದಾರ ದೀಪಕ್ ಕುಮಾರ್‌ಗೆ ಜಾನ್ ಬ್ರಿಟ್ಟಾಸ್ ಅಭಿನಂದನೆ

ಕೋಮುವಾದದ ವಿರುದ್ಧದ ಹೋರಾಟಕ್ಕೆ ದಾರಿದೀಪ; ಜಿಮ್ ತರಬೇತುದಾರ ದೀಪಕ್ ಕುಮಾರ್‌ಗೆ ಜಾನ್ ಬ್ರಿಟ್ಟಾಸ್ ಅಭಿನಂದನೆ

0

ಉತ್ತರಾಖಂಡ ರಾಜ್ಯದ ಕೋಟ್‌ದ್ವಾರ್ ಪ್ರದೇಶದಲ್ಲಿ ಸಂಘ ಪರಿವಾರದ ಕಿರುಕುಳದಿಂದ ವಕೀಲ್ ಅಹ್ಮದ್ ಎಂಬುವವರನ್ನು ಕಾಪಾಡಿದ ಜಿಮ್ ಮಾಲೀಕ ದೀಪಕ್ ಕುಮಾರ್ ಅವರನ್ನು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಭಾನುವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

70 ವರ್ಷದ ವಕೀಲ್ ಅಹ್ಮದ್ ಎಂಬ ಮುಸ್ಲಿಂ ವೃದ್ಧರು ‘ಬಾಬಾ ಸ್ಕೂಲ್ ಗಾರ್ಮೆಂಟ್ಸ್’ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಆದರೆ, ಈ ಹೆಸರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಂಘ ಪರಿವಾರದ ಸಂಘಟನೆಗಳು ದಾಳಿ ನಡೆಸಿದ್ದವು. ‘ಬಾಬಾ’ ಎಂಬ ಪದವು ನಮ್ಮ ಧರ್ಮದ ಸಂಪ್ರದಾಯಕ್ಕೆ ಸಂಬಂಧಿಸಿದ್ದು, ಒಬ್ಬ ಮುಸ್ಲಿಂ ವ್ಯಾಪಾರಿ ಈ ಹೆಸರನ್ನು ಬಳಸಬಾರದು ಎಂದು ವಿವಾದ ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ದೀಪಕ್ ಕುಮಾರ್ ಅವರು ಮಧ್ಯಪ್ರವೇಶಿಸಿ, ಅವರನ್ನು ತಡೆದು ತಮ್ಮನ್ನು ತಾವು ‘ಮೊಹಮ್ಮದ್ ದೀಪಕ್’ ಎಂದು ಪರಿಚಯಿಸಿಕೊಳ್ಳುವ ಮೂಲಕ ಅಹ್ಮದ್ ಅವರನ್ನು ರಕ್ಷಿಸಿದ್ದರು.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇವರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಜಾನ್ ಬ್ರಿಟ್ಟಾಸ್, “ನಾವು ಬದುಕುತ್ತಿರುವ ಇಂತಹ ವಿಭಜನೆಯ ಕಾಲದಲ್ಲಿ, ಇಂತಹ ವ್ಯಕ್ತಿಗಳನ್ನು ರಕ್ಷಿಸುವುದು ಮತ್ತು ಪ್ರೋತ್ಸಾಹಿಸುವುದು ಬಹಳ ಮುಖ್ಯ. ನಮ್ಮ ದೇಶದ ಜಾತ್ಯತೀತ ಸಂಸ್ಕೃತಿಯ ಸಂಕೇತವಾಗಿರುವ ದೀಪಕ್ ಕುಮಾರ್ ಅವರನ್ನು ನಾವು ಒಂಟಿಯಾಗಿ ಬಿಡುವುದಿಲ್ಲ” ಎಂದು ಹೇಳಿದರು.

ಅಲ್ಲದೆ, ಬ್ರಿಟ್ಟಾಸ್ ಅವರು ದೀಪಕ್ ಕುಮಾರ್ ಅವರ ಜಿಮ್‌ನಲ್ಲಿ ವಾರ್ಷಿಕ ಸದಸ್ಯತ್ವವನ್ನು ಪಡೆದುಕೊಂಡರು ಮತ್ತು ಅಹ್ಮದ್ ಅವರ ಅಂಗಡಿಯಿಂದ ಬಟ್ಟೆಗಳನ್ನು ಖರೀದಿಸಿದರು. ಈ ಘಟನೆ ನಡೆದ ದಿನದಿಂದ ಇಬ್ಬರೂ ಅನಧಿಕೃತ ಆರ್ಥಿಕ ಬಹಿಷ್ಕಾರವನ್ನು ಎದುರಿಸುತ್ತಿದ್ದಾರೆ ಎಂದು ಬ್ರಿಟ್ಟಾಸ್ ತಿಳಿಸಿದರು. ದೀಪಕ್ ಕುಮಾರ್ ಅವರ ಜಿಮ್ ಬಹುತೇಕ ಖಾಲಿಯಾಗಿದ್ದು, ಅಹ್ಮದ್ ಅವರ ಅಂಗಡಿಯೂ ಸಹ ಗ್ರಾಹಕರಿಲ್ಲದೆ ಭಣಗುಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

You cannot copy content of this page

Exit mobile version