Friday, June 14, 2024

ಸತ್ಯ | ನ್ಯಾಯ |ಧರ್ಮ

ಪತ್ರಿಕಾರಂಗ ಭಯೋತ್ಪಾದನೆಯಲ್ಲ: ಮಾಧ್ಯಮ ಸಂಸ್ಥೆಗಳಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಬೆಂಗಳೂರು,ಅಕ್ಟೋಬರ್.‌5: “ಪತ್ರಿಕೋದ್ಯಮವನ್ನು ‘ಭಯೋತ್ಪಾದನೆ’ಯೆಂಬಂತೆ ಪರಿಗಣಿಸಲು ಸಾಧ್ಯವೇ ಇಲ್ಲ. ಪರಿಸ್ಥಿತಿ ಕೈಮೀರುವ ಮೊದಲು ಎಚ್ಚೆತ್ತುಕೊಂಡು ಮಧ್ಯಸ್ಥಿಕೆ ವಹಿಸಿ,” ಎಂದು ಭಾರತದ ಹದಿನಾರು ಮಾಧ್ಯಮ ಸಂಸ್ಥೆಗಳು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ರವರಿಗೆ ಬುಧವಾರ ಪತ್ರ ಬರೆದಿವೆ.

ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್‌ಗೆ ಸಂಬಂಧಪಟ್ಟ ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸರು ದಾಳಿ ಇಟ್ಟು ಅವರ  ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು, ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನಲೆಯನ್ನು ಸಿಜೆಐ ಅವರಿಗೆ ಬರೆದಿರುವ ಪತ್ರದಲ್ಲಿ ಪತ್ರಕರ್ತರನ್ನು ಪ್ರಶ್ನಿಸುವ ಮಾನದಂಡವನ್ನು ರೂಪಿಸಲು ಮತ್ತು ಮಧ್ಯಸ್ಥಿಕೆ ವಹಿಸಲು ಕೇಳಿಕೊಳ್ಳಲಾಗಿದೆ. ಮಾತ್ರವಲ್ಲ, ವಶಪಡಿಸಿಕೊಂಡಿರುವ ಮೊಬೈಲ್ ಸೇರಿದಂತೆ ಇಲೆಕ್ಟ್ರಾನಿಕ್‌ ಉಪಕರಣಗಳಿಂದ ಈ ಪ್ರಕರಣಕ್ಕೆ ಸಂಬಂಧಿಸದೆ, ಯಾವುದೇ ಬೇರೆ ರೀತಿಯ ಉದ್ದೇಶಗಳಿಗೆ ಬಳಕೆಯಾಗದಂತೆ ಖಚಿತಪಡಿಸಲು ಮಾರ್ಗಸೂಚಿಯನ್ನು ರೂಪಿಸುವಂತೆ ವಿನಂತಿಸಲಾಗಿದೆ.

ಪತ್ರದಲ್ಲಿ “ಕಾನೂನನ್ನು ಮೀರಿ ಅಥವಾ ಉದ್ದೇಶಪೂರ್ವಕವಾಗಿ ತಮ್ಮ  ಪತ್ರಿಕಾರಂಗದ ವೃತ್ತಿಗಾಗಿ ಪತ್ರಕರ್ತರ ವಿರುದ್ಧ ಅಸಮರ್ಪಕ ತನಿಖೆ ಮಾಡುವ ಮೂಲಕ ನ್ಯಾಯಾಲಯವನ್ನು ದಾರಿತಪ್ಪಿಸುವ ಸರ್ಕಾರಿ ಏಜೆನ್ಸಿಗಳು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸಲು ಮಾರ್ಗಗಳನ್ನು ಕಂಡುಕೊಳ್ಳುವಂತೆ,” ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.  

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌ ಕಳವಳ

“ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ  ದಮನಕಾರಿ ನಡೆಯನ್ನು ಕೊನೆಗೊಳಿಸಲು ನ್ಯಾಯಾಂಗವು ಮಧ್ಯಪ್ರವೇಶಿಸಬೇಕು,” ಎರಡು ವರ್ಷಗಳ ಜೈಲು ವಾಸದ ನಂತರ ಜಾಮೀನು ಮೂಲಕ ಹೊರಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್, ಹಾಗೆಯೇ ಯುಎಪಿಎ ಪ್ರಕರಣದಲ್ಲಿ ಕಸ್ಟಡಿಯಲ್ಲಿದ್ದ ಫಾದರ್ ಸ್ಟಾನ್ ಸ್ವಾಮಿಯ ಸಾವಿನ ಪ್ರಕರಣವನ್ನು ಕೂಡ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 3 ರಂದು ಮುಂಜಾನೆಯಿಂದ ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ 46 ಪತ್ರಕರ್ತರು, ಸಂಪಾದಕರು, ಬರಹಗಾರರು ಮನೆಗಳ ಮೇಲೆ ದಾಳಿ ನಡೆಸಿ ಅವರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ನ್ಯೂಸ್‌ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿಯವರನ್ನು ಬಂಧಿಸಿ ಪೋರ್ಟಲ್‌ ಮೇಲೆ ಕರಾಳ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (Unlawful Activities (Prevention) Act -UAPA)  ಅಡಿಯಲ್ಲಿ ಮಂಗಳವಾರ ಹೊಸ ಕೇಸ್‌ ದಾಖಲಿಸಿದ್ದಾರೆ.  

“ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳು ಇನ್ನು ಅಧಿಕೃತ ವ್ಯವಹಾರವನ್ನು ಮಾತ್ರ ನಡೆಸಲು ಇರುವ  ಸಾಧನಗಳಲ್ಲ. ಇವು ನಮ್ಮ ಜೀವನದ ಭಾಗವಾಗಿವೆ.  ಪ್ರಮುಖ ವೈಯಕ್ತಿಕ ಮಾಹಿತಿಯನ್ನು ಇವು ಒಳಗೊಂಡಿರುತ್ತವೆ. ಅವುಗಳಲ್ಲಿ ಮಾತುಕತೆಯಿಂದ ಹಿಡಿದು ಛಾಯಾಚಿತ್ರಗಳವರೆಗೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭಾಷಣೆಗಳು ಎಲ್ಲಾ ಇರುತ್ತವೆ. ಹೀಗಾಗಿ ಇವುಗಳಿಗೆ ತನಿಖಾ ಸಂಸ್ಥೆಗಳಿಗೆ ಆಕ್ಸೆಸ್‌ ಸಿಗಬೇಕು ಎಂಬುದು ಸಮರ್ಥನೀಯವಲ್ಲ. ಡೇಟಾದ ಸಂರಕ್ಷಣೆ ಖಚಿತವಾಗಬೇಕು,” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ತನಿಖೆಯ ಸಂದರ್ಭದಲ್ಲಿ ರೈತ ಹೋರಾಟ, ಕೋವಿಡ್ ಸಾಂಕ್ರಾಮಿಕವನ್ನು ಸರ್ಕಾರ ನಿರ್ವಹಿಸಿದ ಬಗ್ಗೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ಬಗ್ಗೆ ಮಾಡಿದ ವರದಿಗಳ ಬಗ್ಗೆ ಪ್ರಶ್ನಿಸಲಾಗಿದೆ.

ಮಾಧ್ಯಮಗಳಿಗೆ ಒಡ್ಡುವ ಬೆದರಿಕೆ “ಪ್ರಜಾಪ್ರಭುತ್ವದ ಸಂರಚನೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಈ ಪತ್ರದಲ್ಲಿ ಪ್ರತಿಪಾದಿಲಾಗಿದೆ. ಪತ್ರಕರ್ತರನ್ನು ಕೇಂದ್ರೀಕೃತ ಕ್ರಿಮಿನಲ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಪ್ರಸಾರವನ್ನು ಸರ್ಕಾರವು ನಿರಾಕರಿಸುವುದು, ಪ್ರತೀಕಾರ ಹಾಗೂ ಬೆದರಿಕೆಯ ಮೂಲಕ ಮಾಧ್ಯಮಗಳನ್ನು ತಣ್ಣಗಾಗಿಸುವ ಪ್ರಯತ್ನವಾಗಿದೆ ಎಂದು, ಸಿಜೆಐಯವರ ಮಧ್ಯೆ ಪ್ರವೇಶಿಸಿ ಈ ಬಿಕ್ಕಟ್ಟನ್ನು ನಿವಾರಿಸುವಂತೆ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ

ಪತ್ರಕ್ಕೆ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್, ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ (ಇಂಡಿಯಾ), ಚಂಡೀಗಢ ಪ್ರೆಸ್ ಕ್ಲಬ್, ನ್ಯಾಷನಲ್ ಅಲೈಯನ್ಸ್ ಆಫ್ ಜರ್ನಲಿಸ್ಟ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್‌, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಬೃಹನ್ಮುಂಬೈ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಫ್ರೀ ಸ್ಪೀಚ್ ಕಲೆಕ್ಟಿವ್ ಮುಂಬೈ, ಮುಂಬೈ ಪ್ರೆಸ್ ಕ್ಲಬ್, ಅರುಣಾಚಲ ಪ್ರದೇಶ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಪ್ರೆಸ್ ಅಸೋಸಿಯೇಷನ್, ಗುವಾಹಟಿ ಪ್ರೆಸ್ ಕ್ಲಬ್, ಮತ್ತು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಸಹಿ ಹಾಕಿವೆ.

Related Articles

ಇತ್ತೀಚಿನ ಸುದ್ದಿಗಳು