Thursday, June 13, 2024

ಸತ್ಯ | ನ್ಯಾಯ |ಧರ್ಮ

ಮನೆಗೆ ನುಗ್ಗಿ ಪತ್ರಕರ್ತನ ಗುಂಡಿಟ್ಟು ಕೊಂದ ಪಾತಕಿಗಳು

ದೇಶದಲ್ಲಿ ಪತ್ರಕರ್ತರ ಮೇಲಿನ ದಾಳಿ ಮುಂದುವರೆದಿದ್ದು. ಇಂದು ಬೆಳಗಿನ ಯುವ ಪತ್ರಕರ್ತರೊಬ್ಬರನ್ನು ಗುಂಡಿಟ್ಟು ಕೊಂದಿರುವುದು ವರದಿಯಾಗಿದೆ

ಬಿಹಾರದಲ್ಲಿ ಈ ಅಮಾನುಷ ನಡೆದಿದ್ದು, ಆಗಸ್ಟ್ 18, 2023ರಂದು, ಅರಾರಿಯಾ ಜಿಲ್ಲೆಯಲ್ಲಿ ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಪತ್ರಕರ್ತರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಕೊಲೆಯಾದ ಪತ್ರಕರ್ತನನ್ನು ವಿಮಲ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ವಿಮಲ್ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ನಾಲ್ವರು ದುಷ್ಕರ್ಮಿಗಳು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ಮಲಗಿದ್ದ ವಿಮಲ್‌ ಕುಮಾರ್‌ ಅವರನ್ನು ತಟ್ಟಿ ಎಬ್ಬಿಸಿ ನಂತರ ಗುಂಡು ಹಾರಿಸಲಾಗಿದೆ.

ಈ ಘಟನೆಯು ಸ್ಥಳದಲ್ಲಿ ಕೋಲಾಹಲ ಸೃಷ್ಟಿಸಿತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಮಲ್ ಸಿಂಗ್ ಯಾದವ್ ಕಳೆದ ಕೆಲವು ವರ್ಷಗಳಿಂದ ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಬ್ಲಾಕ್ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಗುಂಡಿನ ದಾಳಿಯ ನಂತರ ತಕ್ಷಣವೇ ವಿಮಲ್ ಸಿಂಗ್ ಯಾದವ್ ಅವರನ್ನು ರಾಣಿಗಂಜ್ ರೆಫರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿನ ವೈದ್ಯರು ತಪಾಸಣೆ ನಡೆಸಿದ ಬಳಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಘಟನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರಿಂದ ಪತ್ರಕರ್ತರಲ್ಲಿ ಅಭದ್ರತೆಯ ಭಾವ ಮೂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲ ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಮೃತ ಪತ್ರಕರ್ತನ ಸಹೋದರನನ್ನೂ ಕ್ರಿಮಿನಲ್‌ಗಳು ಗುಂಡಿಕ್ಕಿ ಕೊಂದಿದ್ದರು ಎಂದು ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು