ಭೋಪಾಲ್: ಜನವರಿ 1ರಿಂದ ನಾಪತ್ತೆಯಾಗಿದ್ದ ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ ಅವರ ಶವ ಛತ್ತೀಸ್‌ಗಢದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ.
ಬಿಜಾಪುರದ ಚತನಪಾರ ಬಸ್ತಿಯಲ್ಲಿ ಪತ್ರಕರ್ತನ ಶವ ಪತ್ತೆಯಾಗಿದೆ. ಮುಖೇಶ್ ಚಂದ್ರಕರ್ ಎನ್‌ಡಿಟಿವಿಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಕಾಂಕ್ರೀಟ್ ಹಾಕಿ ಮುಚ್ಚಿದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವ ಪತ್ತೆಯಾಗಿದೆ ಎಂದು ಬಿಜಾಪುರ ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರ ದೇಹ ಊದಿಕೊಂಡಿತ್ತು. ತಲೆ ಮತ್ತು ಬೆನ್ನಿನ ಮೇಲೆ ಹಲವಾರು ಗಾಯಗಳಾಗಿದ್ದವು. ಅವರನ್ನು ಬಟ್ಟೆಯಿಂದ ಗುರುತಿಸಲಾಯಿತು. ಮುಖೇಶ್ ಅವರ ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ನಡೆಸಲಾಗಿತ್ತು. ಅವರು ಕೊನೆಯದಾಗಿ ಕಾಂಟ್ರಾಕ್ಟರ್ ಸುರೇಶ್ ಜೊತೆ ಮಾತನಾಡಿದ್ದರು. ಪ್ರಸ್ತುತ ಪೊಲೀಸರು ಸುರೇಶನ ವಿಚಾರಣೆ ಮುಂದುವರೆಸಿದ್ದಾರೆ.
ಮುಖೇಶ್ ಬರೆದಿರುವ ಲೇಖನಗಳಿಗೂ ಅವರ ಸಾವಿಗೆ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದು ಎಸ್ಪಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಮುಖೇಶ್ ಬಸ್ತಾರ್ ಜಂಕ್ಷನ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಇದು 1.59 ಲಕ್ಷ ಚಂದಾದಾರರನ್ನು ಹೊಂದಿದೆ. ಅವರು ಬಸ್ತಾರ್ ಪ್ರದೇಶವನ್ನು ಕೇಂದ್ರೀಕರಿಸಿ ವೀಡಿಯೊಗಳನ್ನು ಮಾಡುತ್ತಿದ್ದರು. 2021ರಲ್ಲಿ ಮಾವೋವಾದಿಗಳಿಂದ ಅಪಹರಣಕ್ಕೊಳಗಾಗಿದ್ದ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಮುಕ್ತಗೊಳಿಸುವಲ್ಲಿ ಮುಖೇಶ್ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೈದರಾಬಾದ್‌ನಲ್ಲಿ ಗುತ್ತಿಗೆದಾರನನ್ನು ಬಂಧಿಸಿದ್ದಾರೆ.