ಮಾಧ್ಯಮವು ಎಂದಿಗೂ ಪ್ರಜಾಪ್ರಭುತ್ವದ ಕಾವಲುನಾಯಿಯಂತೆ ಇರಬೇಕು ಮತ್ತು ಆಳುವ ವರ್ಗದ ಶಾಶ್ವತ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎನ್ನುವುದು ಯಾವ ಕಾಲಕ್ಕೂ ಸಲ್ಲುವ ಮಾಧ್ಯಮ ಸಿದ್ಧಾಂತ.
ಆದರೆ ಕಾಲ ಉರುಳಿದಂತೆ ಆ ನಂಬಿಕೆ ಕರಗಿ ಹೋಗುತ್ತಿದೆ. ಬದಲಿಗೆ ಕೆಲವು ಮಾಧ್ಯಮ ಸಂಸ್ಥೆಗಳು, ಪತ್ರಿಕೆಗಳು, ಟಿವಿ ವಾಹಿನಿಗಳು ಮತ್ತು ಅಲ್ಲಿನ ಕೆಲವು ಪತ್ರಕರ್ತರು ರಾಜಕೀಯ ಪಕ್ಷಗಳ, ರಾಜಕಾರಣಿಗಳ ವಕ್ತಾರರಾಗುವ, ದಲ್ಲಾಳಿಗಳಾಗುವ ದುರಂತವೂ ನಮ್ಮ ಮುಂದಿದೆ.
ಹಲವು ಬಗೆಯ ಸವಾಲುಗಳ ನಡುವೆಯೇ ಪತ್ರಕರ್ತರು ಕೆಲಸ ಮಾಡಬೇಕೆನ್ನುವುದು ನಿಜ. ಅದರಲ್ಲಿ ಆಳುವ ವರ್ಗ ಮುಂದಿಡುವ ಆಮಿಷಗಳಿಗೆ ಬಲಿಯಾಗದೆ ಮತ್ತು ಅದನ್ನು ತಮಗೆ ಬೇಕಾದ್ದಕ್ಕೆ ಬಳಸಿಕೊಳ್ಳದೆ – ವೃತ್ತಿನಿಷ್ಠೆಯನ್ನು ಕಾಪಾಡಿಕೊಳ್ಳುವುದು ಅವರ ಮುಂದಿರುವ ಬಹಳ ದೊಡ್ಡ ಸವಾಲು.
ದೇಶದ ಎಲ್ಲ ಪತ್ರಕರ್ತರೂ ಹೀಗೇನಿಲ್ಲ, ಬಹಳ ಮಂದಿ ಸಾಮಾಜಿಕ ಬದ್ಧತೆ ಉಳಿಸಿಕೊಂಡಿದ್ದಾರೆ ಎನ್ನುವುದು ಕೇವಲ ಸಣ್ಣ ಸಮಾಧಾನವಷ್ಟೆ. ಏಕೆಂದರೆ ‘ಮಾಧ್ಯಮದಲ್ಲಿ ಭ್ರಷ್ಟಾಚಾರ’ ಅಥವಾ ‘ನ್ಯಾಯಾಂಗದಲ್ಲಿ ಪಕ್ಷಪಾತ’ ಎನ್ನುವುದು ‘ಕುಡಿಯುವ ನೀರಿಗೆ ತೊಟ್ಟು ವಿಷ’ ಎನ್ನುವ ಮಾತಿಗೆ ಸಮ.
ಮಾಧ್ಯಮಕ್ಕೆ ಅಂಟಿಕೊಂಡ ಈ ಕಳಂಕವನ್ನು ಪತ್ರಕರ್ತರೇ ಸ್ವತಃ ನಿರ್ಧರಿಸಿ ಕಳೆದುಕೊಳ್ಳಬೇಕು. ಅವರೇ ಬರೆದುಕೊಂಡ ‘ಅನೀತಿ ಸಂಹಿತೆ’ ಯನ್ನು ಅವರೇ ಅಳಿಸಿಹಾಕಬೇಕು.
( ಹಿರಿಯ ಪತ್ರಕರ್ತರಾದ ಆರ್ ಪೂರ್ಣಿಮಾ ಅವರು ಪತ್ರಕರ್ತೆಯಾಗಿ ನಾಲ್ಕು ದಶಕಗಳ ಅನುಭವ ಹೊಂದಿದ್ದಾರೆ. ಉದಯವಾಣಿ ಸಂಪಾದಕಿ, ಪ್ರಜಾವಾಣಿ ಸಹಾಯಕ ಸಂಪಾದಕಿಯಾಗಿ ನಿವೃತ್ತಿಯಾಗಿದ್ದಾರೆ. ಈಗ ಹಿತೈಷಿಣಿ ಅಂತರಜಾಲ ಪತ್ರಿಕೆಯ ಸಂಪಾದಕಿ.)