ಕೋಲ್ಕತ್ತಾ: ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಹತ್ಯೆಯ ವಿರುದ್ಧದ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಕಿರಿಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ತಮ್ಮದು ಜನಾಂದೋಲನ ಇದನ್ನು ಸರಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಮರೆಯಬಾರದು ಎಂದು ವೈದ್ಯರ ಗುಂಪು ಹೇಳಿದೆ. ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಧರಣಿ ನಿರತ ವೈದ್ಯರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠ ಸೋಮವಾರ ಎಚ್ಚರಿಸಿದೆ.
ಯಾವುದೇ ಪ್ರತಿಭಟನೆ, ಆಂದೋಲನ ಕರ್ತವ್ಯ ನಿರ್ಲಕ್ಷಿಸುವುದು ಸರಿಯಲ್ಲ. ಕೂಡಲೇ ಕರ್ತವ್ಯಕ್ಕೆ ಸೇರಿ ರೋಗಿಗಳ ಸೇವೆ ಮಾಡಿ.ಸ್ಥಳದಲ್ಲಿ ಏನಾಯಿತು ಎಂಬುದು ನಮಗೆ ತಿಳಿದಿದೆ. ನಿಮ್ಮ ಸುರಕ್ಷತೆಗೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳು ಜವಾಬ್ದಾರರು. ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವವರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸುವುದಿಲ್ಲ. ಇದು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿರಿಯ ವೈದ್ಯರು, ಸುಪ್ರೀಂ ಕೋರ್ಟ್‌ನ ತೀರ್ಪು ನಿರಾಸೆ ಮೂಡಿಸಿದೆ. ಪ್ರಕರಣವನ್ನು ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲಾಯಿತು ಆದರೆ, ಇನ್ನೂ ನ್ಯಾಯ ಸಿಕ್ಕಿಲ್ಲ. ರಾಜ್ಯ ಸರಕಾರ ದೇಶದ ಸರ್ವೋಚ್ಚ ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಆಂದೋಲನಗಳಿಂದ ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 6 ಲಕ್ಷ ರೋಗಿಗಳು ಚಿಕಿತ್ಸೆ ದೊರೆಯದೆ ನರಳುತ್ತಿದ್ದಾರೆ ಎಂಬ ಮಾತು ಸಂಪೂರ್ಣ ಸುಳ್ಳು ಎಂದರು. ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.