ದೆಹಲಿ: ಜಾತಿಯ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶ ಸ್ಪಷ್ಟವಾಗಿ ಇಲ್ಲದಿದ್ದರೆ, ಕೇವಲ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ವ್ಯಕ್ತಿಯನ್ನು ನಿಂದಿಸಿದ ಮಾತ್ರಕ್ಕೆ ಅದು ತಾನಾಗಿಯೇ ಎಸ್ಸಿ/ಎಸ್ಟಿ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಬಿಹಾರದ ಅಂಗನವಾಡಿ ಕೇಂದ್ರವೊಂದರ ಬಳಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ನಿಂದಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಕೇಶವ್ ಮಹತೋ ಎಂಬುವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುತ್ತಾ, ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಜಾತಿ ಆಧಾರದ ಮೇಲೆ ದೂರುದಾರರನ್ನು ಮಹತೋ ನಿಂದಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಾಗಲೀ ಅಥವಾ ಚಾರ್ಜ್‌ಶೀಟ್‌ನಲ್ಲಾಗಲೀ ಉಲ್ಲೇಖಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(1)(ಆರ್) ಅನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಈ ನಿಯಮದಡಿ ವ್ಯಕ್ತಿಯನ್ನು ಶಿಕ್ಷಿಸಲು ಎರಡು ನಿರ್ದಿಷ್ಟ ಷರತ್ತುಗಳು ಮುಖ್ಯ ಎಂದು ತಿಳಿಸಿದೆ. ಮೊದಲನೆಯದಾಗಿ ದೂರುದಾರರು ಎಸ್ಸಿ ಅಥವಾ ಎಸ್ಟಿ ಆಗಿರಬೇಕು ಮತ್ತು ಎರಡನೆಯದಾಗಿ ದೂರುದಾರರ ಜಾತಿಯ ಆಧಾರದ ಮೇಲೆಯೇ ನಿಂದಿಸಲಾಗಿದೆ ಅಥವಾ ಅವಮಾನಿಸಲಾಗಿದೆ ಎಂಬುದು ನಿರ್ದಿಷ್ಟವಾಗಿರಬೇಕು ಎಂದು ಕೋರ್ಟ್ ವಿವರಿಸಿದೆ.
ಅಪರಾಧ ಸಾಬೀತಾಗಬೇಕಾದರೆ, ಸಂತ್ರಸ್ತರು ಎಸ್ಸಿ ಅಥವಾ ಎಸ್ಟಿಗೆ ಸೇರಿದವರು ಎಂಬ ಕಾರಣಕ್ಕಾಗಿಯೇ ಆರೋಪಿಯು ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾನೆ ಅಥವಾ ಬೆದರಿಸಿದ್ದಾನೆ ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ಹೇಳಿದೆ.
