ದೆಹಲಿ: 25ರ ಹರೆಯದಲ್ಲಿ ಯಾವುದಾದರೂ ಉದ್ಯೋಗಕ್ಕೆ ಸೇರುವ ವ್ಯಕ್ತಿಯು, 40ರ ಹೊಸ್ತಿಲಿಗೆ ಬರುವಷ್ಟರಲ್ಲಿ ಆ ಕ್ಷೇತ್ರದಲ್ಲಿ ವಿಶೇಷ ಅನುಭವವನ್ನು ಗಳಿಸಿರುತ್ತಾರೆ.
ಅವರು ನಾಯಕತ್ವದ ಸ್ಥಾನಕ್ಕೆ ಏರಿ, ಒಂದು ತಂಡವನ್ನು ಮುನ್ನಡೆಸುವ ಹಂತಕ್ಕೆ ತಲುಪಿರುತ್ತಾರೆ. ವೃತ್ತಿಜೀವನದ ಉತ್ತುಂಗದಲ್ಲಿರುವ ಈ ಸಮಯದಲ್ಲಿ, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತರರನ್ನು ಪ್ರಭಾವಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಇಂದಿನ ಆಧುನಿಕ ಕಾರ್ಪೊರೇಟ್ ವಲಯದಲ್ಲಿ ಈ ಮಧ್ಯವಯಸ್ಸಿವರಿಗೆ ಕ್ರಮೇಣ ಬೇಡಿಕೆ ಕಡಿಮೆಯಾಗುತ್ತಿದೆ.
ವಾಸ್ತವವಾಗಿ ಅನೇಕ ಸಂಸ್ಥೆಗಳು ಇವರನ್ನು ಕೆಲಸದಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದರೆ, ಹೀಗೆ ಕೆಲಸ ಕಳೆದುಕೊಂಡವರನ್ನು ಸೇರಿಸಿಕೊಳ್ಳಲು ಇತರ ಸಂಸ್ಥೆಗಳು ನಿರಾಕರಿಸುತ್ತಿವೆ. ಇವರ ಅನುಭವ ಮತ್ತು ಕೌಶಲ್ಯವನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯವರೆಗೂ ಬಾಗಿಲು ತೆರೆದಿದ್ದ ಸಂಸ್ಥೆಗಳು, ಈಗ ಇವರು ಕಾಣಿಸಿಕೊಳ್ಳುತ್ತಿದ್ದಂತೆಯೇ ಬಾಗಿಲು ಮುಚ್ಚುತ್ತಿವೆ.
ಅವರ ಅನುಭವ ಮತ್ತು ಕೌಶಲ್ಯವು ತಮಗೆ ದುಬಾರಿ ಎಂದು ಸಂಸ್ಥೆಗಳು ಭಾವಿಸುತ್ತಿವೆ. ವೇಗ, ಸೃಜನಶೀಲತೆ ಮತ್ತು ಯುವ ರಕ್ತಕ್ಕೆ ಆದ್ಯತೆ ನೀಡುತ್ತಿರುವ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ, 40 ವರ್ಷದವರನ್ನು ಹೊರೆಯಾಗಿ ನೋಡಲಾಗುತ್ತಿದೆ. ಒಂದೆಡೆ ಅನುಭವಿಗಳನ್ನು ಹೊಗಳುತ್ತಲೇ, ಮತ್ತೊಂದೆಡೆ ಅವರನ್ನು ಪ್ರೋತ್ಸಾಹಿಸಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ 40 ವರ್ಷ ದಾಟಿದವರು ಉದ್ಯೋಗವಿಲ್ಲದೆ ಬೀದಿಗೆ ಬೀಳುವಂತಾಗಿದೆ.
ಉದ್ಯೋಗದ ಹುಡುಕಾಟದಲ್ಲಿ ಮಧ್ಯವಯಸ್ಕರು
ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಿತರಾದ ಮಧ್ಯವಯಸ್ಕರು ತಾವು ಕೆಲಸ ಮಾಡುತ್ತಿರುವ ಸಂಸ್ಥೆಗಳಿಂದ ಕಾರಣವಿಲ್ಲದೆ ಉದ್ವಾಸನೆಗೆ (ವಜಾ) ಒಳಗಾಗುತ್ತಿದ್ದಾರೆ; ಹಾಗೂ ಅವರಿಗೆ ಅವಕಾಶ ನೀಡಲು ಇತರ ಸಂಸ್ಥೆಗಳು ಬಾಗಿಲು ಮುಚ್ಚುತ್ತಿವೆ. ಬಹಳ ಸೂಕ್ಷ್ಮವಾಗಿ ಅವರನ್ನು ನಿರಾಕರಿಸಲಾಗುತ್ತಿದೆ.
ಇವರು ಉದ್ಯೋಗ ಕೇಳಿದಾಗ.. ‘ನಾವು ಇನ್ನಷ್ಟು ಚುರುಕಾದವರಿಗಾಗಿ ಹುಡುಕುತ್ತಿದ್ದೇವೆ’, ‘ಈ ಹುದ್ದೆಗೆ ಯುವ ರಕ್ತದ ಅಗತ್ಯವಿದೆ’, ‘ನಿಮ್ಮ ಅರ್ಹತೆ ಇದಕ್ಕೆ ಸ್ವಲ್ಪ ಹೆಚ್ಚೇ ಇದೆ (ಓವರ್ ಕ್ವಾಲಿಫೈಡ್)’ ಎಂಬಂತಹ ಉತ್ತರಗಳು ಕೇಳಿಬರುತ್ತಿವೆ ಎಂದು ಉದ್ಯೋಗ ಅರಸುತ್ತಿರುವ ಮಧ್ಯವಯಸ್ಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
