ದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಹಿರಿಯ ನಾಯಕರಿಗೆ ಸಂಬಂಧಿಸಿದ ದೆಹಲಿ ಅಬಕಾರಿ ನೀತಿ ಹಗರಣದ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಗುರುವಾರ ಹಿಂದೆ ಸರಿದಿದ್ದಾರೆ (Recused).
ನ್ಯಾಯಮೂರ್ತಿಗಳನ್ನು ಗುರಿಯಾಗಿಸಿಕೊಂಡು ಕೇಜ್ರಿವಾಲ್ ಮತ್ತು ಪಕ್ಷದ ಇತರ ನಾಲ್ವರು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭವಾಗಿರುವ ನಡುವೆಯೇ ನ್ಯಾಯಮೂರ್ತಿಗಳು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ತಾವು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು, “ವಿಚಾರಣೆಯ ವೇಳೆ ಪೂರ್ವಾಗ್ರಹ ಅಥವಾ ಪಕ್ಷಪಾತದ ಬಗ್ಗೆ ಯಾವುದೇ ರೀತಿಯ ಅನುಮಾನಗಳು ಮೂಡಬಾರದು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ,” ಎಂದು ತಿಳಿಸಿದ್ದಾರೆ. ನ್ಯಾಯಾಂಗದ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿಗಳ ಈ ನಿರ್ಧಾರವನ್ನು ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದು, ಇದನ್ನು “ಸತ್ಯಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಈ ನಿಲುವು ತಮ್ಮ ‘ಸತ್ಯಾಗ್ರಹ’ಕ್ಕೆ ಸಂದ ಜಯ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
