Home ರಾಜಕೀಯ ತಮಿಳುನಾಡು | ಹೊಸ ಪಕ್ಷದ ವದಂತಿಗಳ ನಡುವೆ 2 ದಿನಗಳಲ್ಲಿ ನಿಲುವು ಪ್ರಕಟಿಸುವುದಾಗಿ ಹೇಳಿದ ಕೆ....

ತಮಿಳುನಾಡು | ಹೊಸ ಪಕ್ಷದ ವದಂತಿಗಳ ನಡುವೆ 2 ದಿನಗಳಲ್ಲಿ ನಿಲುವು ಪ್ರಕಟಿಸುವುದಾಗಿ ಹೇಳಿದ ಕೆ. ಅಣ್ಣಾಮಲೈ!

0

ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ (BJP) ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾದ ಮತ್ತು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಭಾರಿ ವದಂತಿಗಳ ನಡುವೆ, ಕೇಸರಿ ಪಡೆಯ ಪ್ರಭಾವಿ ನಾಯಕ ಕೆ. ಅಣ್ಣಾಮಲೈ (K Annamalai) ಅವರು ಸೋಮವಾರ ಮಾತನಾಡಿ, ಮುಂದಿನ 2 ದಿನಗಳಲ್ಲಿ ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.

ತಾವು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆಯೇ ಎಂಬ ವದಂತಿಗಳ ಬಗ್ಗೆ ನವದೆಹಲಿಗೆ ಹೊರಡುವ ಮುನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ಇನ್ನು ಎರಡು ದಿನಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ, ಕೊಯಮತ್ತೂರಿನಾದ್ಯಂತ ಅಣ್ಣಾಮಲೈ ಅವರ ಫೋಟೋ ಇರುವ ಭಾರಿ ಪೋಸ್ಟರ್‌ಗಳು ಪ್ರತ್ಯಕ್ಷಗೊಂಡಿದ್ದು, ಅವರು ಹೊಸ ಪಕ್ಷ ಸ್ಥಾಪನೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯ ಕೇಂದ್ರ ಸಮಿತಿ ಸಭೆ ನಡೆಯುತ್ತಿರುವ ದಿನವೇ ಅಣ್ಣಾಮಲೈ ಅವರ ಚಿತ್ರ ಹಾಗೂ “ಭಯವಿಲ್ಲದ ಮನಸ್ಸುಗಳಿಗೆ ಯಾವುದೇ ಮಿತಿಗಳಿಲ್ಲ” (Fearless minds gave no limits) ಎಂಬ ಘೋಷವಾಕ್ಯವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ನಡುವೆ ಅಣ್ಣಾಮಲೈ ಅವರ ಅಭಿಮಾನಿ ಸಂಘಟನೆಯಾದ ‘ಅಣ್ಣಾಮಲೈ ಅನ್ಬು ಕೂಟಂ’ ಹೊಸ ಸದಸ್ಯರು ಮತ್ತು ಪದಾಧಿಕಾರಿಗಳನ್ನು ನೋಂದಾಯಿಸಲು ಪ್ರಾರಂಭಿಸಿದೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

ಅಣ್ಣಾಮಲೈ ಅವರು ಬಿಜೆಪಿಯ ಸತತ ಎರಡು ರಾಜ್ಯ ಕೇಂದ್ರ ಸಮಿತಿ ಸಭೆಗಳಿಗೆ ಗೈರುಹಾಜರಾಗಿರುವುದು ಅವರ ರಾಜಕೀಯ ಭವಿಷ್ಯದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಾಮಾಜಿಕ ಮಾಧ್ಯಮದಲ್ಲಿ “ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯಿಸಲು ಸಿದ್ಧವಾಗುತ್ತಿದೆ” ಎಂದು ಪೋಸ್ಟ್ ಮಾಡಿದ ನಂತರ ಈ ಚರ್ಚೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ. ಪ್ರಸ್ತುತ ಉದ್ಭವಿಸಿರುವ ರಾಜಕೀಯ ಬೆಳವಣಿಗೆಗಳ ನಡುವೆ ಅಣ್ಣಾಮಲೈ ಅವರು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದೊಂದಿಗೆ ಭಿನ್ನಾಭಿಪ್ರಾಯ ಮತ್ತು ಭಾಷಾ ನೀತಿ ವಿವಾದ: ಸಿಬಿಎಸ್‌ಇ (CBSE) ಶಾಲೆಗಳಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ವಿಷಯದಲ್ಲಿ ಅಣ್ಣಾಮಲೈ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಡ್ಡಾಯಗೊಳಿಸುವ ಗಡುವನ್ನು 2029-30ರ ಶೈಕ್ಷಣಿಕ ವರ್ಷದಿಂದ ಜುಲೈ 2026 ಕ್ಕೆ ಮುಂದೂಡಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯುವಂತೆ ಕಳೆದ ವಾರವಷ್ಟೇ ಅವರು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಒತ್ತಾಯಿಸಿದ್ದರು. ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗಲಿದೆ ಎಂದು ಅವರು ವಾದಿಸಿದ್ದರು.

ಇದರೊಂದಿಗೆ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಮಿತ್ರಪಕ್ಷವಾದ ಎಐಎಡಿಎಂಕೆ (AIADMK) ಜೊತೆಗಿನ ಅಣ್ಣಾಮಲೈ ಅವರ ಸಂಬಂಧದಲ್ಲೂ ಬಿರುಕು ಮೂಡಿದೆ ಎನ್ನಲಾಗಿದೆ. ವಿಶೇಷವಾಗಿ ತಮಿಳುನಾಡಿನ ಮಾಜಿ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರ ಕುರಿತು ಅಣ್ಣಾಮಲೈ ಮಾಡಿದ್ದ ಕೆಲವು ಪ್ರಸ್ತಾಪಗಳು ಮೈತ್ರಿಕೂಟದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಭಾಷಾ ನೀತಿಯಲ್ಲಿ ಕೇಂದ್ರದೊಂದಿಗಿನ ಭಿನ್ನಾಭಿಪ್ರಾಯ, ಎಐಎಡಿಎಂಕೆ ಜೊತೆಗಿನ ಉದ್ವಿಗ್ನತೆ ಮತ್ತು ಪ್ರಮುಖ ಬಿಜೆಪಿ ಸಭೆಗಳಿಂದ ದೂರ ಉಳಿದಿರುವುದು ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲವನ್ನು ತೀವ್ರಗೊಳಿಸಿದೆ. ಆದಾಗ್ಯೂ, ಈ ಪೋಸ್ಟರ್‌ಗಳು ಅಥವಾ ಹೊಸ ಪಕ್ಷದ ಕುರಿತಾದ ವದಂತಿಗಳ ಬಗ್ಗೆ ಅಣ್ಣಾಮಲೈ ಸಾರ್ವಜನಿಕವಾಗಿ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ‘ಅಣ್ಣಾಮಲೈ ಅನ್ಬು ಕೂಟಂ’ ನ ಚಟುವಟಿಕೆಗಳು ಹೊಸ ರಾಜಕೀಯ ಪಕ್ಷದ ಉದಯದ ಸಂಕೇತವೇ ಅಥವಾ ಕೇವಲ ಅವರ ಬೆಂಬಲಿಗರ ಒಗ್ಗಟ್ಟಿನ ಪ್ರದರ್ಶನವೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

You cannot copy content of this page

Exit mobile version