ಮಾಲೂರು: ಇತ್ತೀಚಿಗೆ ದಲಿತ ಕುಟುಂಬದ ಮೇಲೆ ಊರದೇವರ ಉತ್ಸವ ಮೂರ್ತಿಯನ್ನು ದಲಿತ ಬಾಲಕ ಚೇತನ್ ಎಂಬ ಹುಡುಗ ಮುಟ್ಟಿದ್ದು ಮೈಲಿಗೆ ಆಗಿದೆ ಎಂದು ಹೇಳಿ ಬಾಲಕನ ಮೇಲೆ ಅಸ್ಪೃಶ್ಯತಾ ಆಚರಣೆ ಹಾಗೂ ಅರವತ್ತು ಸಾವಿರ ಜುಲ್ಮಾನೆ ಹಾಕಿದ್ದ ಘಟನೆಯ ಸಂತ್ರಸ್ತ ಕುಟುಂಬಕ್ಕೆ ಸ್ವಾಂತಾನ ಹಾಗೂ ಸಹಾಯದ ಆಸರೆ ನೀಡುವ ಸಲುವಾಗಿ ಇಂದು ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಗ್ರಾ.ಪಂ ವ್ಯಾಪ್ತಿಯ ಉಳ್ಳೇರಹಳ್ಳಿ ಗ್ರಾಮಕ್ಕೆ ಶಾಸಕರಾದ ಶ್ರೀ ಕೆ.ವೈ. ನಂಜೇಗೌಡ ರವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದರು.
ಸ್ವತಂತ್ರ ಬಂದು ಎಪ್ಪತೈದು ವರ್ಷಗಳಾಗಿ ಸಂವಿಧಾನ ಜಾರಿಗೆ ಬಂದು ಎಪ್ಪತ್ತು ವರ್ಷಗಳಾದರೂ ಇಂತಹ ಅಸ್ಪೃಶ್ಯತೆಯ ಘಟನೆಗಳು ನಡೆಯುತ್ತಿರುವುದು ಖೇದಕರ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವ ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಜಾತಿ, ಬೇದ ಮರೆತು ಸಮಾನತೆಯ ಹಾದಿಯಲ್ಲಿ ನಡೆಯಬೇಕು, ಅಂತಹ ಹಾದಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಸಂವಿಧಾನದ ವಿರುದ್ಧ ನಡೆದುಕೊಳ್ಳುವ ಇಂತಹ ಘಟನೆಗಳಿಗೆ ಕಾರಣವಾಗಿರುವ ಕೆಲವು ಜನರ ವಿರುದ್ಧ ಕಾನೂನು ಸೂಕ್ತ ಕ್ರಮಗಳನ್ನು ವಹಿಸುತ್ತದೆ. ಅವರಿಗೆ ಶಿಕ್ಷೆ ಆಗಬೇಕಾಗುತ್ತದೆ ಎಂದು ಹೇಳಿದ ಅವರು, ಸಂತ್ರಸ್ತ ಕುಟುಂಬದ ಮನೆಯಲ್ಲಿ ಊಟವನ್ನು ಮಾಡುವ ಮೂಲಕ ಮನುಷ್ಯರಾದ ನಾವೆಲ್ಲ ಒಂದೇ ಎಂದು ಕರೆ ನೀಡಿ, ಆಹಾರ ಸಾಮಗ್ರಿಗಳು ಹಾಗೂ ವೈಯುಕ್ತಿಕ ಧನ ಸಹಾಯ ನೀಡಿದರು.
ಸಂತ್ರಸ್ತ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬುವ ಸಲುವಾಗಿ ಶಾಸಕರು ಮತ್ತು ತಾಲ್ಲೂಕು ಆಡಳಿತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಸಾಮಾಜಿಕ ಸುಧಾರಣೆ ಕಟಿಬದ್ಧರಾಗಲು ಕರೆ ನೀಡಿದರು.
ಇದೆ ಸಮಯದಲ್ಲಿ ಮಾತನಾಡಿ ಆದಷ್ಟು ಬೇಗ ಉದ್ಯೋಗ ಹಾಗೂ ಮನೆ ನಿರ್ಮಾಣ ಮಾಡಿಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಮಯದಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರು, ಮಾಸ್ತಿ ಪೋಲಿಸ್ ವೃತ್ತ ನಿರೀಕ್ಷ ವಸಂತ್ ಕುಮಾರ್, ಇತರೆ ತಾಲ್ಲೂಕು ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್.ಎಂ.ವಿಜಯನರಸಿಂಹ ಹಾಗೂ ಎಂ.ಜಿ.ಮಧುಸೂದನ್, ಆನೇಪುರ ಹನುಮಂತಪ್ಪ, ಎ.ಅಶ್ವತ್ಥರೆಡ್ಡಿ, ಕೆಂಪಸಂದ್ರ ಶ್ರೀನಿವಾಸ್, ನಾಗಾಪುರ ನವೀನ್, ಉಸರಳ್ಳಿ ಮಂಜುನಾಥಗೌಡ, ಜಯಮಂಗಲ ಅಂಜಿನಪ್ಪ, ಮಾಜಾರಳ್ಳಿ ಕಾಕಪ್ಪ, ಕೆ.ಜಿ.ಹಳ್ಳಿ ಮುರುಗೇಶ್, ಶಶಿಧರ್, ಸಿದಾರ್ಥ್ ಆನಂದ್, ಬ್ಯಾಲಹಳ್ಳಿ ರಮೇಶ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.