ನಾಗಪುರದಲ್ಲಿರುವ RSS ಒಡೆತನದ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಮ್ಮ ಅಸಮಾಧಾನ ಹೊರಹಾಕಿದ ಆಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆಯನ್ನೇ ಇಟ್ಟು ಈಗ ಕರ್ನಾಟಕ ಕಾಂಗ್ರೆಸ್ RSS ಸಂಘಟನೆಗೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಗೂಳಿಹಟ್ಟಿ ಶೇಖರ್ ಗೆ RSS ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಿದ ಕಾರಣಕ್ಕೆ ಅವರು ಬಿಎಲ್ ಸಂತೋಷ್ ಗೆ ಪ್ರಶ್ನಿಸಿದ್ದರು. ಈ ಇವರಿಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ನೈಜ ಹಿಂದೂ ಧರ್ಮ ಪರಿಪಾಲಕರೇ ಆಗಿದ್ದರೇ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆಗಳ ಸರಮಾಲೆಯನ್ನೇ ಮುಂದಿಟ್ಟಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ X ಮಾಡಿರೋ (ಟ್ವೀಟ್) ಕಾಂಗ್ರೆಸ್, ಬಿಜೆಪಿ ಹಾಗೂ RSSನವರು ನೈಜ ಹಿಂದೂ ಧರ್ಮ ಪರಿಪಾಲಕರೇ ಆಗಿದ್ದರೆ ಉತ್ತರಿಸಲಿ.. ಇದುವರೆಗೂ ದಲಿತ, ಹಿಂದುಳಿದವರು RSSನ ಸರಸಂಘಚಾಲಕರಾಗಿಲ್ಲವೇಕೆ? RSSನ ಪ್ರಮುಖ ಹುದ್ದೆಗಳಿಗೆ ದಲಿತರು ನೇಮಕವಾಗಿಲ್ಲವೇಕೆ? ಇದುವರೆಗೂ RSS ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಇಡುವುದಿಲ್ಲವೇಕೆ? ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲವೇಕೆ? RSS ಸಂವಿಧಾನ ಪ್ರತಿಯನ್ನು ಸುಟ್ಟಿದ್ದೇಕೆ? ದಲಿತರಿಗೆ ನೀಡಿದ್ದ ಮತದಾನದ ಹಕ್ಕನ್ನು ವಿರೋಧಿಸಿದ್ದೇಕೆ? ಮಹಿಳೆಯರಿಗೆ ಸಂಘದಲ್ಲಿ ಪ್ರವೇಶವಿಲ್ಲವೇಕೆ? ದಲಿತರಿಗೆ ಸಂಘದ ಕಚೇರಿಗಳಿಗೆ ಪ್ರವೇಶವಿಲ್ಲವೇಕೆ? ಬಿಜೆಪಿಯಲ್ಲಿ ಯಾವೊಬ್ಬ ದಲಿತರೂ ರಾಜ್ಯಾಧ್ಯಕ್ಷ ಆಗಿಲ್ಲವೇಕೆ? ಎಂದು ಕೇಳಿದೆ.
ಸರಣಿ ಟ್ವಿಟ್ಟನ್ನು ಮುಂದುವರೆಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ತಂಡ, “ಮನುವಾದ ವಿಧಿಸಿದ ಎಚ್ಚರಿಕೆ. ದಲಿತರಿಗೆ RSS ಕಛೇರಿಯೊಳಗೆ ಪ್ರವೇಶವಿಲ್ಲ. ಬಿಜೆಪಿ ಕಛೇರಿಯಲ್ಲಿ ಸ್ವಾತಂತ್ರವಿಲ್ಲ, ಸಮಾನತೆಯನ್ನು ಬಿಜೆಪಿ ಸಹಿಸುವುದಿಲ್ಲ” ಎಂದು ಮತ್ತೊಂದು ಟ್ವಿಟ್ ನಲ್ಲಿ ತಿಳಿಸಿದೆ.
RSS ಕಚೇರಿಗೆ ದಲಿತರು ಪ್ರವೇಶ, RSS ಮತ್ತು ಬಿಜೆಪಿಯಲ್ಲಿ ದಲಿತರಿಗೆ ಇರುವ ಸ್ಥಾನಮಾನದ ಬಗ್ಗೆ ಹಿಂದಿನಿಂದಲೂ ಇದ್ದ ಅಪವಾದಗಳನ್ನು ಎತ್ತಿ ಹಾಕಿರುವ ಕಾಂಗ್ರೆಸ್ ಪಕ್ಷ, “ವಿರೋಧ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿಗೆ ದಲಿತರು ಕಾಣಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರು ಕಾಣಲಿಲ್ಲ. ಬಿಜೆಪಿಯಲ್ಲಿ ದಲಿತರು ಸಿಎಂ ಹುದ್ದೆಯ ಬಗ್ಗೆ ಕನಸನ್ನೂ ಕಾಣುವ ಹಾಗಿಲ್ಲ. ಬಿಜೆಪಿ ಹಾಗೂ RSS ಹೇಳುವ ಹಿಂದುತ್ವದಲ್ಲಿ ಸಮಾನತೆ, ಸಹಬಾಳ್ವೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. RSS ಸಂವಿಧಾನ ವಿರೋಧಿ ಸಂಘಟನೆ ಎಂಬುದಕ್ಕೆ ಅವರು ಆಚರಿಸುವ ಅಸ್ಪೃಶ್ಯತೆಯೇ ಸಾಕ್ಷಿ ನುಡಿಯುತ್ತದೆ” ಎಂದು ತಿಳಿಸಿದೆ.
ಸಧ್ಯ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾಡಿರುವ ಆರೋಪದ ಹಿಂದೆ ಬಿದ್ದಿರುವ ಕಾಂಗ್ರೆಸ್ ಪಕ್ಷ, RSS ಸಮಾನತೆಯ ವಿರೋಧಿ ಎಂಬುದು ಈಗ ಬಿಜೆಪಿ ನಾಯಕರೇ ಹೇಳಿಕೊಂಡು ಬಂದಿದ್ದಾರೆ, ಇದು RSS ಮತ್ತು ಬಿಜೆಪಿ ಪಕ್ಷದ ನೈಜ ಮುಖ ಎಂಬಂತೆ ಸರಣಿ ಟ್ವೀಟ್ ಮಾಡಿ ಬಿಜೆಪಿ ಮತ್ತು RSS ಗೆ ಮುಜುಗರ ಹುಟ್ಟಿಸಿದೆ.