Home ಜನ-ಗಣ-ಮನ ಹೆಣ್ಣೋಟ “ನಾನು ಇನ್ಮುಂದುಕ್ಕೆ ಹಿಂಗೆ ಇರೋಳು”

“ನಾನು ಇನ್ಮುಂದುಕ್ಕೆ ಹಿಂಗೆ ಇರೋಳು”

0

ಚುರುಗುಟ್ಟಿದ ಪಾದವನ್ನು ಭಯದಿಂದ ಜೋರಾಗಿಯೇ ಜಾಡಿಸಿ ಕಣ್ಣು ಬಿಟ್ಟ ಗಂಗೆ, ಇನ್ನೇನು ತನ್ನ ಮೇಲೆಯೇ ಏರಿ ಬರುವಂತಿದ್ದ ಎಮ್ಮೆಯಿಂದ ತಪ್ಪಿಸಿಕೊಳ್ಳಲು  ಪಕ್ಕಕ್ಕೆ ಉರುಳಿಕೊಂಡಳು. ಸೊಂಟಕ್ಕೆ ಕೈ ಕೊಟ್ಟು ಭಾರದಿಂದ ಕೆಳಕ್ಕೆ ಜಗ್ಗುತ್ತಿದ್ದ ಹೊಟ್ಟೆಯನ್ನು ಮೆಲ್ಲನೆ ಮೇಲಕ್ಕೆತ್ತಿ “ದರ್ವೇಸಿ ನನ್ ಮಗ್ನೆ ನೀನೆನ್ ಮನುಷ್ಯನೋ ದಯ್ಯನೆನ್ಲಾ. ಎಮ್ಮೆಗೊಳ್ನ ಹಿಂಗೆ ಮೈಮೇಲೆ ಹೊಡ್ಕೊಂಡು ಬತ್ತಿದ್ಯಲ್ಲ. ನನ್ ಹೊಟ್ಟೆ ಗಿಟ್ಟೆ ಮೇಲೆ ಕಾಲಿಕ್ಕಿದಿದ್ರೆ ‌ಏನ್ ಆಗ್ಬೇಕಿತ್ತು ನನ್ಗತಿ” ಎನ್ನುತ್ತಾ ಎದ್ದು ನಿಂತವಳೆ ಅವನ ರಟ್ಟೆಯನ್ನು ಜಗ್ಗಿ ಕೆನ್ನೆಗೊಂದು ಸರಿಯಾಗಿಯೇ ಬಾರಿಸಿದಳು. ಅನಿರೀಕ್ಷಿತವಾದ ಅವಳ ಹೊಡೆತದಿಂದ ತತ್ತರಿಸಿದ ಪರಮೇಶ ಅವಮಾನವಾದವನಂತೆ ಕಂಪಿಸುತ್ತಾ “ಮನಿಗ್ ಬಾ ಮುಂಡೆ ನಿನ್ಗೊಂದು ಗತಿ ಕಾಣುಸ್ತೀವಿ” ಎಂದು ಕೈಯಲ್ಲಿ ಹಿಡಿದಿದ್ದ ಎಮ್ಮೆಯ ಹಗ್ಗವನ್ನು ರಪ್ಪನೆ ಝಾಡಿಸಿ ದುಮುಗುಡುತ್ತಾ ಮನೆಯ ಕಡೆ ನಡೆದ.

ಏನಾಗುತ್ತದೋ ಆಗಿಯೇ ಬಿಡಲಿ ಎಂದು ನಿರ್ಧರಿಸಿದ್ದ ಗಂಗೆ ಹಸಿವಿನಿಂದ ಚುರುಗುಟ್ಟುತ್ತಿದ್ದ ಹೊಟ್ಟೆಯೊತ್ತು ಎಮ್ಮೆಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದಳು. ಪ್ರತಿದಿನ ಅತ್ತ ಇತ್ತ ತಲೆ ಎತ್ತಿಯೂ ನೋಡದೆ ಎಮ್ಮೆಯ ಅಂಡುಗಳೆಡೆ ಮಂಕರಿ ಹಿಡಿದೆ ಮನೆ ಸೇರುತ್ತಿದ್ದ ಗಂಗೆ, ಅವತ್ತು ಉಕ್ಕಿ ಬರುತ್ತಿದ್ದ ಕೋಪಕ್ಕೆ ಮಂಕರಿಯನ್ನು ಹೊಲದಲ್ಲಿ ಒಗೆದು ಬಂದಿದ್ದಳು. ಅದಾಗಲೇ ಪರಮೇಶ ಬಂದು ಅವ್ವನ ಕಿವಿಯನ್ನು ಸರಿಯಾಗಿ ಚುಚ್ಚಿ  ಕೆರಳಿಸಿ ಕೂರಿಸಿದ್ದ.

ಗಂಗೆಯ ದಾರಿಯನ್ನೇ ನೋಡುತ್ತಾ ಕೂತಿದ್ದ  ಚಿಕ್ಕತಾಯಮ್ಮ ಅವಳು  ಎಮ್ಮೆ ಕಟ್ಟಿ ಒಳ ಬಂದದ್ದೆ ತಡ  ” ನಿನ್ ವಂಸ್ ಹಾಳಾಗ ಬೇಕು ಅಂತ್ಲೆಯ ಕಷ್ಟಪಟ್ಟು ಬೆಳುದ್ ಬೆಳೆನೆಲ್ಲ ಎಮ್ಮೆ ಬುಟ್ಟು ಮೇಸ್ಕೊಂಡು ಬಂದಿದಿಯೇನೆ ಬಿಕನಾಸಿ” ಎಂದು ಕೂಗಾಡುತ್ತಾ ಗಂಗೆಯ ಕೂದಲಿಗೆ ಕೈ ಹಾಕಿ  ಬಗ್ಗಿಸಿಕೊಂಡಳು. ಇದಕ್ಕಾಗಿಯೇ ಕಾಯುತ್ತಿದ್ದವನಂತೆ ಪರಮೇಶ ಓಡಿ ಬಂದವನೆ ಅವ್ವನೊಂದಿಗೆ ಸೇರಿ ಗಂಗೆ ಸುಧಾರಿಸಿ ಕೊಳ್ಳಲು ಅವಕಾಶವನ್ನೇ ಕೊಡದಂತೆ ಬೆನ್ನೆಲ್ಲಾ ಚುರುಗುಟ್ಟುವಂತೆ  ಬಡಿದರು. ಹಸಿವು, ನೀರಡಿಕೆ, ಕೋಪದಿಂದ ಕಂಗಾಲಾಗಿದ್ದ ಗಂಗೆ ಲಬಲಬನೆ ಬಾಯಿ ಬಡಿದು ಕೊಳ್ಳುತ್ತಾ  ಸೀದಾ ಬೀದಿಗೆ ಓಡಿ ಬಂದು ನಿಂತಳು.” ಇವ್ರೆಲ್ಲಾ ಸೇರಿ ನನ್ನ ಜೀವ ತಗಿತರೆ ಬನ್ರಪ್ಪೋ…” ಅವಳ ಚೀರಾಟ ಕೇಳಿ ಓಡಿ ಬಂದ ಅಕ್ಕಪಕ್ಕದವರು ” ನಾವು ನೋಡ್ತಾನೆ ಇದ್ದೀವಿ.. ದಿನ ತುಂಬಿದ್ ಭೀಮನ್ಸೆ ಅನ್ನದುನ್ನು ಕಾಣ್ದಂಗೆ ಈ ಪಾಪುದ್ ಹುಡ್ಗಿಗಿನ ಅದೇನರಿ ಗೋಳುಯ್ಕೊತಿದ್ದೀರಿ. ನೋಡು ಚಿಕ್ಕಕ್ಕ ನಿನ್ನ ಕೈಲಾದ್ರೆ ಬಾಳ್ಸು ಇಲ್ದಿದ್ರೆ ಇವ್ರಪ್ಪನ ಮನೆಗ್ ಕಳುಸ್ಬುಡು. ಇಲ್ಲ ಇದು ಹಿಂಗೇ ಮುಂದುವರುದ್ರೆ ನಾವೇ ಹೋಗಿ ಪೋಲಿಸ್ನೋರಿಗೆ ಕಂಪ್ಲೇಂಟ್ ಕೊಟ್ಟು ಬತ್ತಿವಿ ಆಟೆಯ” ಹೀಗೆ ಒಬ್ಬರಾದ ಮೇಲೆ ಒಬ್ಬರು ಚಿಕ್ಕತಾಯಮ್ಮನ ನೀರಿಳಿಸಲಾಗಿ ಗಂಟಲು ಹರಿದು ಹೋಗುವಂತೆ ಕೂಗಾಡುತ್ತಿದ್ದವಳು ಗಪ್ಚುಪ್ಪಾಗಿ ಅಡುಗೆ ಕೋಣೆ ಸೇರಿಕೊಂಡಳು.

ಊರಿನ ಜನವೆಲ್ಲ ಗಂಗೆಗೆ ಧೈರ್ಯ ತುಂಬಿ ಒಳಗೆ ಕಳುಹಿಸಿದರು. ಗಂಗೆಯ ಕೋಪವಿನ್ನು ಆರಿರಲಿಲ್ಲ. ಅಡುಗೆ ಕೋಣೆಗೆ ಬಂದವಳೇ, ಒಂದು ಒಲೆಯಲ್ಲಿ ದೊಡ್ಡ ತಪ್ಪಲಿಯಲ್ಲಿ ತುಂಬಾ ಬಿಸಿನೀರು ಕಾಯಲು ಇಟ್ಟು, ಇನ್ನೊಂದರಲ್ಲಿ ಅನ್ನಕ್ಕೆ ಎಸರಿಟ್ಟು “ನೀವ್ ಅವ್ವ ಮಕ್ಳು ಮಾತ್ರ ಮೂರ್ ಹೊತ್ತು ಅನ್ನ ಮಾಡ್ಕೊಂಡು ಬೆಣ್ಣೆ ತುಪ್ಪ ಹಾಕ್ಕೊಂಡು ತಿಂತೀರಿ, ನನಗೆ ತಂಗ್ಳಿಟ್ಟು, ನೀರ್ ಮಜ್ಜಿಗೆ ಉಣ್ಣಾಕ್ ಹಾಕ್ತಿರಿ. ನಾನೇನು ಬೀದಿಲ್ ಬಿದ್ದ್ ಬೇವಾರ್ಸಿ ಅನ್ಕೊಂಡ್ರಾ, ಒಂದಿನುಕ್ಕಾದ್ರು ಮೈ ತುಂಬಾ ಅಚ್ಕಾಟ್ಟಾಗಿ ಬಿಸ್ಬಿಸಿ ನೀರ್ ಹೊಯ್ಕೊಳಕ್ಬುಟ್ಟಿದಿರ. ಅದೇನ್ ಮಾಡ್ಕೊತಿರೋ ಮಾಡ್ಕ ಹೋಗಿ. ದಿನ ನಿಮ್ ಕೈಲಿ ಅನ್ನುಸ್ಕೊಂಡು ತಿವುಸ್ಕೊಂಡು  ನನ್ಗು ಸಾಕಾಗದೆ.  ನಾನು ಇನ್ಮುಂದುಕ್ಕೆ ಹಿಂಗೆ ಇರೋಳು ” ಎನ್ನುವ ತನ್ನ ಗಟ್ಟಿ ನಿರ್ಧಾರವನ್ನು ಅತ್ತೆಯ ಕಿವಿಗೆ ಅಪ್ಪಳಿಸುವಂತೆ ಹೇಳಿ, ಒಲೆ ಮೇಲೆ ಕೊತ ಕೊತನೆ ಕುದಿಯುತ್ತಿದ್ದ ಬಿಸಿನೀರಿನಲ್ಲಿ ಚೆನ್ನಾಗಿ ಮಿಂದು ಮೈಕೈಯನ್ನೆಲ್ಲಾ ಹಗುರವಾಗಿಸಿಕೊಂಡು ಬಂದಳು. ಮಾಡಿಟ್ಟು ಕೊಂಡಿದ್ದ ಬಿಸಿ ಬಿಸಿ ಅನ್ನಕ್ಕೆ  ಎರಡು ನಿಂಬೆ ಗಾತ್ರದ ಬೆಣ್ಣೆ ಹಾಕಿ ಉಪ್ಪು ಮೆಣಸಿನ ಪುಡಿಯೊಂದಿಗೆ ಚೆನ್ನಾಗಿ ಮಿದ್ದಿ ಎಷ್ಟೋ ದಿನಗಳ ಮೇಲೆ ಸಂತೃಪ್ತಿಯಾಗಿ ಹೊಟ್ಟೆ ತುಂಬಾ ಉಂಡು ಮಲಗಿದಳು. 

ಹಿಂದಿನ ಕಂತು- ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು” https://peepalmedia.com/kettu-appana-manege-matra-hogabardu/

You cannot copy content of this page

Exit mobile version