Monday, June 17, 2024

ಸತ್ಯ | ನ್ಯಾಯ |ಧರ್ಮ

ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಹೆಜ್ಜೆಗಳ ಘಲ್‌ ಘಲ್‌ ಸದ್ದು!

ಕಾಡಿನ ಒಳಗೆ ಹೋಗಲು ನೀವು ನಮ್ಮ ಪರ್ಮಿಷನ್‌ ತಗೊಂಡು ಹೋಗಬೇಕು ಎನ್ನುತ್ತಾನೆ ಅರಣ್ಯಾಧಿಕಾರಿ. ನಿಮ್ಮ ಪರ್ಮಿಷನ್‌ ನಮಗೇಕೆ ಬೇಕು? ನಾವು ನಿಮ್ಮ ಸರ್ಕಾರ ಬರುವುದಕ್ಕೆ ಮುಂಚಿನಿಂದಲೂ ಇಲ್ಲಿದ್ದೇವೆ. ಪರ್ಮಿಷನ್‌ ತಗೊಳ್ಳಬೇಕಾದವರು ನಾವಲ್ಲ, ನೀವು ಎನ್ನುತ್ತಾನೆ ಕಥಾನಾಯಕ ದಲಿತ ಯುವಕ.

ʻಕಾಂತಾರʼ ಸಂಘರ್ಷಗಳ ಕಥನ. ಮನುಷ್ಯ ಮತ್ತು ಪ್ರಕೃತಿ, ಮೇಲ್ಜಾತಿ ಮತ್ತು ಕೆಳಜಾತಿ, ಆದಿವಾಸಿಗಳು-ಸರ್ಕಾರ ನಡುವಿನ ಸಂಘರ್ಷಗಳು ಬಿಡಿಬಿಡಿಯಾಗಿ ಒಮ್ಮೊಮ್ಮೆ ಒತ್ತೊತ್ತಾಗಿ ಕಾಣಸಿಗುತ್ತವೆ. ಈ ಸಂಘರ್ಷಗಳ ನಡುವೆ ಪಂಜುರ್ಲಿ ದೈವ ಎದ್ದುನಿಲ್ಲುತ್ತವೆ, ಭೂಮಿ-ಆಕಾಶಗಳನ್ನು ವ್ಯಾಪಿಸುತ್ತ ಆವರಿಸಿಕೊಳ್ಳುತ್ತ ಹೋಗುತ್ತದೆ.

ಕನ್ನಡ ಸಿನಿಮಾ ಲೋಕ ಪ್ರಯೋಗಶೀಲತೆಗಳಿಗೆ ಒಡ್ಡಿಕೊಂಡಿದೆ ಎಂಬುದಕ್ಕೆ ಕಾಂತಾರ ಇನ್ನೊಂದು ಸಾಕ್ಷಿ. ಸಿನಿಮಾದ ನಾಯಕಪಾತ್ರಧಾರಿಯೂ ಆಗಿರುವ ರಿಷಬ್‌ ಶೆಟ್ಟಿ ಹಳೆಯ ಕಟ್ಟುಪಾಡುಗಳನ್ನು ಒಡೆದು ಮುನ್ನುಗ್ಗುವ ಧಾವಂತ ತೋರಿದ್ದಾರೆ. ತಳಸಮುದಾಯದ ಯುವಕನೊಬ್ಬ ನಾಯಕನಾಗುವುದು, ಮೇಲ್ಜಾತಿಯ ಧನಿಕ ಖಳನಾಯಕನಾಗುವುದನ್ನು ಸಿನಿಮಾಗಳಲ್ಲಿ ನೋಡುವುದು ಕಷ್ಟ. ರಿಷಬ್‌ ಈ ಸವಾಲನ್ನು ಮೇಲೆ ಎಳೆದುಕೊಂಡಿದ್ದಾರೆ ಮತ್ತು ಅದೇ ಮೇಲ್ಜಾತಿಯ ಪ್ರೇಕ್ಷಕರಿಂದ ಚಪ್ಪಾಳೆಯನ್ನೂ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ದಲಿತನೊಬ್ಬ ಮನೆ ಪ್ರವೇಶಿಸಿದ ಕಾರಣಕ್ಕೆ ʻಪಂಚಗವ್ಯ ಹಾಕಿದ್ರೇನೋ?ʼ ಎಂದು ತನ್ನ ಕೆಲಸಗಾರರಿಗೆ ಅರಚುವ ಖಳನಾಯಕ ಬ್ರಾಹ್ಮಣ್ಯವನ್ನೇ ಹೊದ್ದವನು. ಅವನ ಕುಟಿಲತೆ, ಲಂಪಟತನ, ಕ್ರೌರ್ಯಗಳೆದುರು ಸೆಣೆಸಲು ಕಥಾನಾಯಕನಿಗೆ ದೈವದ ರಕ್ಷಣೆಯೇ ಸಿಗಬೇಕು. ಅದೇ ಕಥಾವಸ್ತು.

ʻಸಮಯವೂ ಕೂಡ ಈಗ ನಮ್ಮ ಕಡೆಯೇ ಇದೆʼ ಎನ್ನುವ ದಲಿತ ಹುಡುಗನ ಮಾತು ಇವತ್ತಿನ ಸಿನಿಮಾ ಜಗತ್ತಿಗೊಂದು ರೂಪಕ. ಅಸ್ಪೃಶ್ಯನನ್ನು ಮುಟ್ಟಿಸಿಕೊಳ್ಳದ, ಮುಟ್ಟಿಸಿಕೊಂಡರೂ ಕೈತೊಳೆದು ಶುದ್ಧ ಮಾಡಿಕೊಳ್ಳುವ ಧಣಿಯ ಮನೆಯ ಒಳಗೆ ಬಂದು, ಅವನೆದುರೇ, ಅವನ ಸಮಾನವಾಗಿ ಊಟ ಮಾಡಿ ಎದ್ದುಹೋಗುವ ನಾಯಕನ ಸೀಮೋಲ್ಲಂಘನ ಹೊಸಕಾಲದ ತವಕಗಳನ್ನು ಧ್ವನಿಸುತ್ತದೆ. ಮೇಲ್ಜಾತಿಗಳ, ಉಳ್ಳವರ ಕಥೆಗಳನ್ನು ಕೇಳಿಕೇಳಿ ಜನರೂ ಬೇಸತ್ತಿದ್ದಾರೆ. ಹೀಗಾಗಿ ತಳಸಮುದಾಯಗಳ ಕಥನಗಳು ಸಿನಿಮಾಗಳಾಗುತ್ತಿವೆ, ಗೆಲ್ಲುತ್ತಿವೆ. ಕಾಂತಾರ ಅಂಥದ್ದೇ ಒಂದು ಪ್ರಯತ್ನ.

ರಿಷಬ್‌ ಶೆಟ್ಟಿ ಸಿನಿಮಾದ ಆತ್ಮದಂತಿದ್ದಾರೆ. ನಿರ್ದೇಶನದಲ್ಲೂ, ನಾಯಕ ಪಾತ್ರಧಾರಿಯಾಗಿಯೂ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಿಷಬ್‌ ತಾವೊಬ್ಬ ಒಳ್ಳೆಯ ನಟ ಎಂಬುದನ್ನು ಬೆಲ್‌ ಬಾಟಮ್‌ ಸಿನಿಮಾದಲ್ಲೇ ಸಾಬೀತುಪಡಿಸಿದ್ದರು. ಈಗ ಅವರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಂಪೂರ್ಣ ಭಿನ್ನವಾದ ಜಾನರ್‌ ನಲ್ಲೂ ಅವರು ಸೈ ಎನಿಸಿಕೊಳ್ಳುವಂತೆ ನಟಿಸಿದ್ದಾರೆ. ಪಂಜುರ್ಲಿಯಾಗಿ ಅವರದು ಪರಕಾಯ ಪ್ರವೇಶ. ಅವರು ʻಓʼ ಎಂದು ಕೂಗಿದಾಗಲೆಲ್ಲ ಎದೆ ನಡುಗುತ್ತದೆ.

ಕರಾವಳಿಯವರಿಗೆ ಕಾಂತಾರ ತಮ್ಮದೇ ಕಥೆ ಎನಿಸಬಹುದು, ಸಿನಿಮಾದ ಲೋಪದೋಷಗಳೂ ಢಾಳಾಗಿ ಕಾಣಬಹುದು. ಆದರೆ ಹೊರಗಿನವರಿಗೆ ಕಾಂತಾರ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಕರಾವಳಿಯ ದೈವಗಳ ಬಗ್ಗೆ ಗೊತ್ತಿಲ್ಲದವರು, ನೋಡಿಲ್ಲದವರಿಗೆ ಇದೊಂದು ಅದ್ಭುತ ಲೋಕ.

ಹಾಗೆ ನೋಡಿದರೆ ಕಾಂತಾರದಲ್ಲಿ ಲೋಪಗಳು ಇಲ್ಲವೆಂದೇನಿಲ್ಲ. ಸಿನಿಮಾದ ಎಲ್ಲ ಪಾತ್ರಗಳು ಕೂಗಾಡುತ್ತಲೇ ಮಾತಾಡುವುದು ಒಮ್ಮೊಮ್ಮೆ ಕಿರಿಕಿರಿ ಎನಿಸುತ್ತದೆ. ಕಥಾನಾಯಕನ ತಮ್ಮ ಗುರುವನೊಬ್ಬನನ್ನು ಬಿಟ್ಟರೆ ಮಿಕ್ಕವರೆಲ್ಲ ಅಬ್ಬರಿಸಿ ಬೊಬ್ಬಿರಿಯುವವರೇ. ಸಿನಿಮಾದ ಮೊದಲ ಅರ್ಧದಲ್ಲಿ ಕಥೆ ವೇಗವಾಗಿ ಸಾಗುವುದಿಲ್ಲ. ಕಂಬಳದ ಓಟದ ನಂತರದ ಒಂದು ಫೈಟ್‌ ಅನಗತ್ಯವಾಗಿತ್ತು. ಸಿನಿಮಾದ ಪಾತ್ರಗಳು, ಅದರಲ್ಲೂ ವಿಶೇಷವಾಗಿ ಆದಿವಾಸಿಗಳು ಹೊಟ್ಟೆಪಾಡಿಗಾಗಿ ಏನು ಮಾಡುತ್ತಾರೆ ಎಂಬುದನ್ನು ಇನ್ನಷ್ಟು ವಿವರವಾಗಿ ಹೇಳಬೇಕಿತ್ತು. ಬದಲಾಗಿ ನಾಯಕ ಮತ್ತವನ ತಂಡದ ಮರಗಳ್ಳತನ, ಹಂದಿಬೇಟೆಗಳನ್ನೇ ವಿಜೃಂಭಿಸಿರುವುದು ಗಂಭೀರ ಲೋಪ.

ಕಾಂತಾರದ ದ್ವಿತೀಯಾರ್ಧದಲ್ಲಿ ಕಥೆಯ ಒಳಸುಳಿಗಳೆಲ್ಲ ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಒಂದಷ್ಟನ್ನು ನೀವೇ ಊಹಿಸುವಷ್ಟು ಸಲೀಸಾಗಿ ಕಥೆ ಮುಂದುವರೆಯುತ್ತದೆ. ಕೊನೆಯ ಹದಿನೈದು ನಿಮಿಷಗಳ ಕ್ಲೈಮ್ಯಾಕ್ಸ್‌ ನಿಮ್ಮನ್ನು ನಿಸ್ಸಂದೇಹವಾಗಿ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಒಂದು ದೃಶ್ಯರೂಪಕಕ್ಕೆ ಬೇಕಾದ ಎಲ್ಲ ಸಾಧ್ಯತೆಗಳನ್ನು ದುಡಿಸಿಕೊಂಡು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ಸಶಕ್ತವಾಗಿದೆ ಕ್ಲೈಮ್ಯಾಕ್ಸ್.

ಚಿತ್ರದ ಕ್ಲೈಮಾಕ್ಸ್’ನಲ್ಲೊಂದು ಸಣ್ಣ ಆದರೆ ಎಫೆಕ್ಟಿವ್ ಆದ ಪುಟ್ಟ ಸೀನ್ ಒಂದು ಇದೆ‌‌. ಪಂಚಗವ್ಯ ಕುಲದ ಭೂಮಾಲೀಕ ನಾಯಕ ಶಿವನಿದ್ದ ಹಾಡಿಯ ಮೇಲೆ ಭೀಕರ ಧಾಳಿಯೊಂದನ್ನು ಎಸಗುತ್ತಾನೆ. ಆ ಸಂದರ್ಭದಲ್ಲಿ ದೈವಾರಾಧನೆ ಉತ್ಸವಗಳಿಗೆ ಗರ್ನಲ್ ಮದ್ದು ಸಿಡಿಸಿ ಆ ಆರಾಧನೆಯನ್ನು ಕಲರ್’ಫುಲ್ ಮಾಡುವ ‘ಮುಸ್ಲಿಮ್’ ಸಾಬರ ಮೇಲೂ ದಾಳಿಯಾಗುತ್ರದೆ. ಆ ಸಂದರ್ಭದಲ್ಲಿ ಆತ ಗರ್ನಲ್ ಸಿಡಿಸಲೆಂದು ಮದ್ದು ಸಂಗ್ರಹ ಮಾಡಿದ್ದ ಮನೆಯೊಂದರೊಳಗೆ ಓಡುತ್ತಾನೆ. ಅಟ್ಟಿಸಿಕೊಂಡು ಬರುವ ಭೂಮಾಲೀಕನ ಪಡೆಯಲ್ಲೊಬ್ಬ ಸಾಬನಿದ್ದಾನೆ.. ಆತ ಗರ್ನಲ್ ಸಾಬನಿಗೆ ನೀನು ನಮ್ಮವನು ಕೋಲ ಕಟ್ಟುವರ ಜೊತೆಗೇಕಿದ್ದಿ ಎಂಬಂತೆ ‘ಸಲಾಂ ಆಲೇಕುಂ’ ಎನ್ನುತ್ತಾನೆ.. ಕೈನಲ್ಲಿ ಗರ್ನಲ್ ಮದ್ದು ಹಿಡಿದಿದ್ದ ಗರ್ನಲ್ ಸಾಬ ‘ವಾಲೇಕುಂ ಅಸ್ಸಲಾಂ’ ಎಂದು ಕೈಯಲ್ಲಿ ಹಿಡಿದಿದ್ದ ಮದ್ದಿಗೆ ಬೆಂಕಿ ತಾಕಿಸಿ ತನ್ನನ್ನೂ ಕೊಂದುಕೊಂಡು ಕೋಲ ಕಟ್ಟುವರ ಮೇಲೆ ಮುಗಿಬಿದ್ದಿದ್ದ ಭೂಮಾಲೀಕರ ಪಡೆಯವರನ್ನೂ ಕೊಲ್ಲುತ್ತಾನೆ..

ಕರಾವಳಿಯ ನೆಲಮೂಲದ ಭೂತಗಳಲ್ಲಿರುವ ಮುಸ್ಲಿಂ ಭೂತಗಳಲ್ಲೊಂದಾದ ಬೊಬ್ಬರಿಯ ದೈವದ ಪ್ರತೀಕದಂತೆ ಈ ಗರ್ನಲ್ ಸಾಬು ಕಾಣುತ್ತಾನೆ. ಈ ಗರ್ನಲ್ ಸಾಬ ಜೊತೆ ನಿಲ್ಲುವುದು ಪಂಚಗವ್ಯದ ಭೂಮಾಲೀಕನೊಡನೆ ಅಲ್ಲ.. ಕೋಲ ಕಟ್ಟುವ ಶ್ರಮಿಕರ ಜೊತೆ. ದೈವ ನರ್ತಕರ ಪರಂಪರೆಗೆ ಜೀವ ಕೊಡುವುದರ ಮೂಲಕ ಕರಾವಳಿಯ ಶ್ರಮಿಕರು ಮತ್ತು ಮುಸ್ಲಿಮರ ಪರಂಪರಾನುಗತ ಸಹಬಾಳ್ವೆಗೆ ಈ ಗರ್ನಲ್ ಸಾಬನ ಪಾತ್ರ ಮತ್ತದರ ಅಂತ್ಯ ಕನ್ನಡಿಯಂತೆ ನಿಲ್ಲುತ್ತದೆ..

ಕಾಂತಾರದಲ್ಲಿ ರಿಷಬ್‌ ಶೆಟ್ಟಿಯವರಲ್ಲದೆ ರಾಜ್‌ ಬಿ.ಶೆಟ್ಟಿಯವರ ಕೈಚಳಕವೂ ಅಲ್ಲಲ್ಲಿ ಇದೆ. ದೈವಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ರಾಜ್‌ ಬರೆದಿದ್ದಾರೆ. ಕೆಲವೊಂದು ಸಂಭಾಷಣೆಗಳನ್ನು ತುಳುವಿನಲ್ಲೇ ಉಳಿಸಿ, ಕನ್ನಡದಲ್ಲಿ ಸಬ್‌ ಟೈಟಲ್‌ ಹಾಕಲಾಗಿದೆ. ಸಿನಿಮ್ಯಾಟೋಗ್ರಾಫರ್‌ ಅರವಿಂದ ಕಶ್ಯಪ್‌ ಮತ್ತು ಸಂಗೀತ ನಿರ್ದೇಶಕ ಅಜನೀಷ್‌ ಲೋಕನಾಥ್‌ ಅವರಿಗೆ ಪೂರ್ಣ ಅಂಕಗಳು ಸಲ್ಲಬೇಕು. ವಿಕ್ರಮ್‌ ಮೋರೆಯ ಸಾಹಸ ನಿರ್ದೇಶನವೂ ಶಿಳ್ಳೆ ಗಿಟ್ಟಿಸುತ್ತದೆ. ನಟನೆಯಲ್ಲಿ ಅಚ್ಯುತ್‌ ಮತ್ತು ಕಿಶೋರ್‌ ಮನಗೆಲ್ಲುತ್ತಾರೆ.

ಕಾಂತಾರದ ಮತ್ತೊಂದು ಮಹತ್ವದ ಅಂಶವೆಂದರೆ ಇಲ್ಲಿನ ಸ್ತ್ರೀ ಪಾತ್ರಗಳು. ಅವು ಗಂಡಸಿನಷ್ಟೇ ಶಕ್ತಿಶಾಲಿಗಳು. ನಾಯಕನ ತಾಯಿ ಮತ್ತು ನಾಯಕಿ ಇಬ್ಬರ ಪಾತ್ರಪೋಷಣೆಯೂ ಸಹಜವಾಗಿದೆ ಮತ್ತು ಗಮನ ಸೆಳೆಯುತ್ತದೆ.

ಕೆಜಿಎಫ್‌ಎರಡು ಅವತರಣಿಕೆಗಳ ನಂತರ ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಮತ್ತೊಂದು ಸಿಕ್ಸರ್‌ ಬಾರಿಸಿದ್ದಾರೆ. ಕಾಂತಾರ ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣಗಳೂ ಇವೆ.

ಕಾಂತಾರದ ಅತಿದೊಡ್ಡ ಯಶಸ್ಸು ಏನೆಂದರೆ, ಇಂಥ ಜನಸಂಸ್ಕೃತಿಯನ್ನು ತೆರೆದಿಡುವ, ಮುಖ್ಯವಾಹಿನಿ ಮಾಧ್ಯಮಗಳು ಮುಚ್ಚಿಟ್ಟ ನಿರ್ಲಕ್ಷಿತರ ಕಥೆಗಳನ್ನು ಸಿನಿಮಾ ಮಾಡಿ ಗೆಲ್ಲುವ ಧೈರ್ಯವನ್ನು ಕನ್ನಡದ ನಿರ್ದೇಶಕರೂ, ನಿರ್ಮಾಪಕರೂ ಮಾಡಬಹುದು. ಬರುವ ದಿನಗಳಲ್ಲಿ ಕಾಂತಾರದಂಥ ಹಲವು ಧೈರ್ಯಶಾಲಿ ಯತ್ನಗಳನ್ನು ನಾವು ನೋಡಬಹುದು.

ಕಾಂತಾರದ ಕೊನೆಯಲ್ಲಿ ಪಂಜುರ್ಲಿ ದೈವ ಎಲ್ಲರ ಒಳಗೊಳ್ಳುವಿಕೆ, ಪರಸ್ಪರ ಪ್ರೀತಿ ಸೋದರತ್ವವನ್ನು ಸಾರುತ್ತದೆ. ಈ ಆಶಯ ಕರ್ನಾಟಕದಲ್ಲಿ ಇತರೆಲ್ಲ ಭಾಗಗಳಿಗಿಂತಲೂ ಮೊದಲು ಕರಾವಳಿಯಲ್ಲೇ ಈಡೇರಬೇಕು. ಹಾಗೇ ಆಗಲಿ ಎಂದು ಆಶಿಸೋಣ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ದಿನೇಶ್‌ ಕುಮಾರ್‌ ಎಸ್.ಸಿ
ಪತ್ರಕರ್ತರು

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಕೆಲವು ದೇವಸ್ಥಾನಗಳಿಗೆ ಹೋಗುವಾಗ ಅಂಗಿ – ಬನಿಯನ್‌ ತೆಗೆದು ಅರೆ ಬೆತ್ತಲಾಗಿ ಹೋಗಬೇಕು ಎಂಬ ನಿಯಮ ಯಾಕೆ ಬಂತು? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಕುರಿತು ಪತ್ರಕರ್ತ, ಲೇಖಕ ದಿನೇಶ್‌ ಕುಮಾರ್‌ ಎಸ್‌ ಸಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

https://www.youtube.com/watch?v=1QoI-Wt6d6o&t=7s

Related Articles

ಇತ್ತೀಚಿನ ಸುದ್ದಿಗಳು