ಬೆಂಗಳೂರು: ಗುರುವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶದಲ್ಲಿ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯು ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದಿದ್ದು, ಈ ವಿಚಾರವಾಗಿ ವಿರೋಧ ಪಕ್ಷವಾದ ಬಿಜೆಪಿ ಸಚಿವರನ್ನು ತೀವ್ರವಾಗಿ ಟೀಕಿಸಿದೆ.
ಕಲಬುರಗಿಯು ಶೇ. 85.06 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲೇ ಅತೀ ಕಡಿಮೆ ಫಲಿತಾಂಶ ಪಡೆದಿದೆ. ಆದರೆ, ಕಳೆದ ವರ್ಷದ ಶೇ. 56.89 ಕ್ಕೆ ಹೋಲಿಸಿದರೆ ಇದು ದೊಡ್ಡ ಜಿಗಿತ.
ಕಳಪೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಹಿನ್ನೆಲೆಯಲ್ಲಿ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಎಚ್ಚರಿಸಿದ್ದಾರೆ.
“ವೈಫಲ್ಯದಲ್ಲೂ ಒಂದು ನಿಷ್ಕಳಂಕ ದಾಖಲೆ! ಜಿಲ್ಲಾ ಉಸ್ತುವಾರಿ ಸಚಿವರ ‘ಶ್ರೇಷ್ಠ ಕೆಲಸ’ ಕೇವಲ ಪತ್ರಿಕಾಗೋಷ್ಠಿಗಳು ಮತ್ತು ಟ್ವಿಟರ್ ಥ್ರೆಡ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ತೋರುತ್ತಿದೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಜಗಳವಾಡುವ ಸಮಯದ ಅರ್ಧದಷ್ಟನ್ನು ಕಲಬುರಗಿ ಅಭಿವೃದ್ಧಿಗೆ ವ್ಯಯಿಸಿದ್ದರೆ, ಅವರ ಜಿಲ್ಲೆಯ ಮಕ್ಕಳು ಇಡೀ ರಾಜ್ಯಕ್ಕಿಂತ ಹಿಂದೆ ಬೀಳುತ್ತಿರಲಿಲ್ಲ,” ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ಒಬ್ಬರು ‘ಉಸ್ತುವಾರಿ’ಯಾಗಿರುವುದು ಎಂದರೆ ಜವಾಬ್ದಾರಿ ಎಂದರ್ಥ, ದಿನವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದಲ್ಲ,” ಎಂದು ಅದು ಟೀಕಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ? ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ, ರಾಜ್ಯದಲ್ಲೂ ಮತ್ತು ಕಲಬುರಗಿ ಜಿಲ್ಲೆಯಲ್ಲೂ… ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಜಿಲ್ಲೆಯ ಮಕ್ಕಳಲ್ಲಿದೆ, ಮತ್ತು ಅದು ಸಾಧ್ಯವಾಗುತ್ತದೆ ಕೂಡ.
ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮಕ್ಕಳಿಗೂ “ದಡ್ಡರು” ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ?
ಜಿಲ್ಲೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಮಾತುಗಳನ್ನಾಡುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ನಾಡಿನ ದುರಂತ. ಕಲಬುರಗಿ ಜಿಲ್ಲೆಯ ಮಕ್ಕಳ ಶ್ರಮವನ್ನು, ಅವರ ಬೌದ್ಧಿಕ ಸಾಮರ್ಥ್ಯವನ್ನು ಅವಮಾನಿಸುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು” ಎಂದಿದ್ದಾರೆ.
