ಕಲಬುರಗಿ: ಬುರ್ಖಾ ಧರಿಸಿ ಬಸ್ ಹತ್ತಿ ಎಂದು ವಿದ್ಯಾರ್ಥಿನಿಯರಿಗೆ ಒತ್ತಡ ಹೇರಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿಯ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ.
ಮಂಗಳವಾರ ಕಲಬುರಗಿ-ಬಸವಕಲ್ಯಾಣ ಮಾರ್ಗದ ಕಮಲಾಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಂದಾದ ವಿದ್ಯಾರ್ಥಿನಿಯರಿಗೆ, ನೀವು ಮುಸ್ಲಿಮರಲ್ಲವೇ ಮೊದಲು ಬುರ್ಖಾ ಧರಿಸಿ ಬನ್ನಿ ಎಂದು ಒತ್ತಾಯಿಸಿ ಅವರನ್ನು ಬಸ್ಸಿನಿಂದ ಇಳಿಸಿದ್ದ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು.
ವಿದ್ಯಾರ್ಥಿನಿಯೊಬ್ಬಳು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದ ವೇಳೆ ವಿದ್ಯಾರ್ಥಿನಿಯನ್ನು ಚಾಲಕ ನಿಂದನೆ ಮಾಡಿದ್ದ. ವಿದ್ಯಾರ್ಥಿನಿ ಬಸ್ ಹತ್ತುತ್ತಿದ್ದಂತೆ ಚಾಲಕ ಅಡ್ಡಪಡಿಸಿದ್ದ, ಅಲ್ಲದೇ, ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ ಹೇಳಿ ಬಸ್‌ನಿಂದ ಕೆಳಗಿಳಿಸಿದ್ದ. ಈ ಮೂಲಕ ಚಾಲಕ ದರ್ಪ ಮೆರೆದಿದ್ದ.
ಈ ಕುರಿತ ವಿಡಿಯೋವನ್ನು ವಿದ್ಯಾರ್ಥಿಗಳು ಓದುತ್ತಿರುವ ಅದೇ ಶಾಲೆಯ ಶಿಕ್ಷಕರೊಬ್ಬರು ರೆಕಾರ್ಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಚಾಲಕನ ವರ್ತನೆ ವಿರುದ್ಧ ಸಾಕಷ್ಟು ಆಕ್ಷೇಪಗಳೂ ವ್ಯಕ್ತವಾಗಿದ್ದವು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಕೆಆರ್‌ಟಿಸಿ, ಬುಧವಾರ ಮತ್ತು ಗುರುವಾರ ಘಟನೆ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಮಹೆಬೂಬಸಾಬ್ ಮತ್ತು ಬಾಲಕಿಯ ಹೇಳಿಕೆಯನ್ನು ಕೊಂಡಿದೆ. ಹೇಳಿಕೆ ವೇಳೆ ಚಾಲಕ ಆರೋಪವನ್ನು ನಿರಾಕರಿಸಿದ್ದಾನೆ.
ಆದರೆ, ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಮಹೆಬೂಬಸಾಬ್ ಅವರನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ.