ಉಡುಪಿ, ಜುಲೈ, 28: ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ವಿಡಿಯೋ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಈ ಪ್ರಕರಣದ ಆರೋಪ ಎದುರಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಇದೀಗ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಸಹಪಾಠಿ ವಿದ್ಯಾರ್ಥಿನಿ ಶೌಚಾಲಯದಲ್ಲಿರುವಾಗ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಪ್ಯಾರಾ ಮೆಡಿಕಲ್ ಡಿಪ್ಲೊಮಾ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಶಬನಾಜ್, ಆಲ್ಫಿಯಾ ಮತ್ತು ಅಲಿಮಾತುಲ್ ಶಾಫಿಯಾ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು.
ಆದರೆ ಇದೀಗ ಪ್ರಕರಣದ ಆರೋಪ ಎದುರಿಸುತ್ತಿದ್ದ ಈ ಮೂವರು ವಿದ್ಯಾರ್ಥಿನಿಯರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಮೂವರು ವಿದ್ಯಾರ್ಥಿನಿಯರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ಈ ವೇಳೆ ಇವರಿಗೆ ಜಾಮೀನು ಅಂಗೀಕಾರ ಮಾಡಲಾಗಿದೆ ಎನ್ನಲಾಗಿದೆ.
ಇತ್ತ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ನೇತ್ರತ್ವದ ಪ್ರತಿಭಟನೆ ಮುಂದುವರೆದಿದ್ದು ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರವು ಪೊಲೀಸರ ಕೈ ಕಟ್ಟಿ ಹಾಕಿದ್ದು ಪ್ರಕರಣವನ್ನು NIA ಗೆ ವಹಿಸಬೇಕು ಎಂದು ಆಗ್ರಹಿಸಲಾಗಿದೆ.