Home ಬ್ರೇಕಿಂಗ್ ಸುದ್ದಿ ಮೂಢನಂಬಿಕೆಗಳು ಮಾನವ ಪ್ರಗತಿಗೆ ಹಿನ್ನೆಡೆಯಾಗುತ್ತಿವೆ –  ಬಿ.ಆರ್.ಜಾನಕಿ

ಮೂಢನಂಬಿಕೆಗಳು ಮಾನವ ಪ್ರಗತಿಗೆ ಹಿನ್ನೆಡೆಯಾಗುತ್ತಿವೆ –  ಬಿ.ಆರ್.ಜಾನಕಿ

ಹಾಸನ: ಮೂಢನಂಬಿಕೆಗಳು ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಪ್ರಗತಿಗೆ ಗಂಭೀರ ಅಡ್ಡಿಯಾಗುತ್ತಿವೆ. ಮೂಢನಂಬಿಕೆಗಳ ಕಾರಣದಿಂದ ಮನುಷ್ಯ ಮೋಸ ಹೋಗುತ್ತಿದ್ದು, ತನ್ನ ಅಮೂಲ್ಯ ಸಮಯ, ಹಣ ಹಾಗೂ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಬಿಜಿ ವಿಎಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಜಾನಕಿ ಬಿ.ಆರ್. ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಪ್ರೌಢಶಾಲೆ, ಹೌಸಿಂಗ್ ಬೋರ್ಡ್, ಕುವೆಂಪುನಗರ, ಹಾಸನದಲ್ಲಿ ಆಯೋಜಿಸಲಾಗಿದ್ದ ವೈಜ್ಞಾನಿಕ ಮನೋವೃತ್ತಿ ಮತ್ತು ಮೂಢನಂಬಿಕೆಗಳು ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹುತೇಕ ಮೂಢನಂಬಿಕೆಗಳಿಗೆ ದೇವರು ಅಥವಾ ಧರ್ಮದೊಂದಿಗೆ ಯಾವುದೇ ನೇರ ಸಂಬಂಧವಿಲ್ಲ. ವಿಶ್ವದ ಭೌತಿಕ ನಿಯಮಗಳ ಆಧಾರದಲ್ಲಿ ಮೂಢನಂಬಿಕೆಗಳಿಗೆ ಕಾರಣ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಸಂವಾದದಲ್ಲಿ ಭಾಗವಹಿಸಿ, ಪ್ರಶ್ನೋತ್ತರಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೈಜ್ಞಾನಿಕ ಮನೋವೃತ್ತಿಯ ಅಗತ್ಯತೆಯ ಕುರಿತು ಬಿಜಿ ವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಬಿ.ಕೆ. ಲೋಲಾಕ್ಷಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರಾಧಾ ಎನ್.ಎಸ್. ಸೇರಿದಂತೆ ಶಿಕ್ಷಕರಾದ ಮೀನಾ ಎಸ್.ಆರ್., ಮೀನಾಕ್ಷಿ ಆರ್., ರಶ್ಮಿ ಎಂ.ಆರ್., ರವೀಂದ್ರ ಜಿ.ಜಿ., ಚನ್ನನ ಹಾಗೂ ಬೋರಮ್ಮ ಅವರು ಉಪಸ್ಥಿತರಿದ್ದರು.

You cannot copy content of this page

Exit mobile version