Home ಬ್ರೇಕಿಂಗ್ ಸುದ್ದಿ ಶರಣರ ಚಿಂತನೆ ವಿಶ್ವಮಾನವತೆಯ – ಹೆಚ್.ಎಲ್. ಮಲ್ಲೇಶ್ ಗೌಡ

ಶರಣರ ಚಿಂತನೆ ವಿಶ್ವಮಾನವತೆಯ – ಹೆಚ್.ಎಲ್. ಮಲ್ಲೇಶ್ ಗೌಡ

ಹಾಸನ : ಅರಸ ಎಂದರೆ ಮೇಲಲ್ಲ, ಅಗಸ ಎಂದರೆ ಕೀಳಲ್ಲ. ವ್ಯಕ್ತಿಯ ಘನತೆ ಅವನ ವೃತ್ತಿಯಲ್ಲಿ ಅಲ್ಲ, ಅವನ ಮೌಲ್ಯಗಳಲ್ಲಿ ಅಡಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಶಿಕ್ಷಕ ತರಗತಿಯಲ್ಲಿ ಇರುವ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ ಎಂಬುದು ಜಗತ್ತಿನ ಸಾಮಾನ್ಯ ಸತ್ಯ. ಆದರೆ ನಿಜವಾದ ಸತ್ಯವೆಂದರೆ, ಒಂದು ತರಗತಿಯಲ್ಲಿ ಇರುವ ಅಷ್ಟು ವಿದ್ಯಾರ್ಥಿಗಳು ಸೇರಿ ಒಬ್ಬ ಶಿಕ್ಷಕರನ್ನೇ ರೂಪಿಸುತ್ತಾರೆ ಎಂಬುದು. ಈ ಪರಸ್ಪರ ಸಂಬಂಧವೇ ಶಿಕ್ಷಣದ ನಿಜವಾದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು. ವಿಶ್ವಕ್ಕೆ ಸಾಮಾಜಿಕ ರೂಪುರೇಷೆ ನೀಡಿದವರು ಶರಣರು. ಒಂದು ಸಾಮಾನ್ಯ ಶಿಕ್ಷಕ ಪ್ರಬುದ್ಧ ತರಗತಿಗೆ ಹೋದರೆ ಎರಡು ವರ್ಷಗಳಲ್ಲಿ ಆತ ಸಹ ಪ್ರಬುದ್ಧನಾಗುತ್ತಾನೆ. ಅದೇ ರೀತಿ, ಬಸವಣ್ಣನವರನ್ನು ಪ್ರಬುದ್ಧವಾಗಿ ರೂಪಿಸುವಲ್ಲಿ ಮಡಿವಾಳ ಮಚಿದೇವ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಬಸವಣ್ಣನ ಕಾಲಘಟ್ಟದಲ್ಲಿ ಅಲ್ಲಮಪ್ರಭುವಿನ ನೇತೃತ್ವದಲ್ಲಿ ನಡೆದ ವಿಚಾರಗೋಷ್ಠಿಯ ವೇದಿಕೆಯನ್ನು ವಿಶ್ವದ ಮೊದಲ ಪ್ರಜಾಪ್ರಭುತ್ವದ ವೇದಿಕೆ ಎಂದು ಇತಿಹಾಸ ಗುರುತಿಸಿದೆ. ಶರಣರು ತಮ್ಮ ವೃತ್ತಿಯನ್ನು ಶ್ರದ್ಧೆಯಿಂದ ನಡೆಸುತ್ತಾ, ವೃತ್ತಿಯ ಮೂಲಕ ಘನತೆ ಮತ್ತು ಮಾನವೀಯತೆಯನ್ನು ಸಾಧಿಸಬಹುದು ಎಂಬ ಸಂದೇಶವನ್ನು 12ನೇ ಶತಮಾನದಲ್ಲೇ ಜಗತ್ತಿಗೆ ನೀಡಿದರು. 12ನೇ ಶತಮಾನದಲ್ಲಿ ಹುಟ್ಟಿದ ನೂರಾರು ಶರಣರು ಪ್ರತ್ಯೇಕ ಯುಗಗಳಲ್ಲಿ ಹುಟ್ಟಿದ್ದರೆ ಯುಗಪ್ರವರ್ತಕರಾಗುವ ಶಕ್ತಿ ಹೊಂದಿದ್ದವರು. ಆದರೆ, ಒಂದೇ ಕಾಲಘಟ್ಟದಲ್ಲಿ ಒಟ್ಟಾಗಿ ಹುಟ್ಟಿ ಸಮಾಜ ಪರಿವರ್ತನೆಗೆ ಕಾರಣವಾದುದು ಅಚ್ಚರಿಯ ಸಂಗತಿ. ಬಸವಣ್ಣನವರ ಮಾರ್ಗದರ್ಶನದಲ್ಲಿ ಅನೇಕ ಶರಣರು ರೂಪುಗೊಂಡರು ಎಂಬುದು ಅವರ ಚಿಂತನೆಯ ಆಳವನ್ನು ತೋರಿಸುತ್ತದೆ ಎಂದು ಹೇಳಿದರು. ಮಡಿವಾಳ ಮಾಚಿದೇವರು ಗುರು ಬಸವೇಶ್ವರರ ಸಮಕಾಲೀನ ಶರಣರು . ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ನಾಶಪಡಿಸಲು ಉದ್ದೇಶಿಸಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಿದರು. ಅವರು ಕಲ್ಯಾಣ್‌ನಲ್ಲಿ ಧೋಬಿಯಾಗಿದ್ದರು ಎಂದು ಹಿಂದಿನ ಅವರ ಜೀವನವನ್ನು   ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ಸಾಹಿತಿಗಳು, ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

You cannot copy content of this page

Exit mobile version