Tuesday, April 30, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರಲ್ಲಿ ತುಳು ನಾಡಿನ ಕಂಬಳ; ಫ್ಯೂಡಲ್‌ ಕ್ರೀಡೆಗೆ ಪ್ರಭುತ್ವದ ಪ್ರೋತ್ಸಾಹ

“ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು” ಅನ್ನೋ ಗಾದೆ ಈ ಕಾಂಗ್ರೆಸ್ ಪಕ್ಷಕ್ಕೆ ಕಾಲಕಾಲಕ್ಕೆ ಸರಿಯಾಗಿ ಅನ್ವಯಿಸುವಂತಿದೆ. “ಛೇ ಅದು ಕುದುರೆ ಅಂತಾ ಯಾರು ಹೇಳಿದ್ದು, ಕತ್ತೇನೇ ಮಾರಾಯ್ರೇ ಕುದುರೆ ವೇಷ ಹಾಕಿರುತ್ತದೆ ಹಾಗೂ ಆಗಾಗ ವೇಷ ಕಳಚಿದಾಗ ಕತ್ತೆ ಅವತಾರ ಬೆತ್ತಲಾಗುತ್ತದೆ” ಎಂದು ಹೇಳುವವರೂ ಇದ್ದಾರೆ. ಬಿಜೆಪಿ ಎಂಬ ಕತ್ತೆಕಿರುಬನ ಹಾವಳಿ ತಪ್ಪಿಸಲು ಕರ್ನಾಟಕದ ಜನತೆ  ಕುದುರೆ ಎಂದು ನಂಬಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತಂದರು. ಆದರೆ ಮತ್ತೆ ಮತ್ತೆ ತಾನು ಕತ್ತೆ ಎನ್ನುವುದನ್ನು ಕಾಂಗ್ರೆಸ್ಸಿಗರು ಆಗಾಗ ಸಾಬೀತು ಪಡಿಸುತ್ತಲೇ ಇದ್ದಾರೆ. ಅಧಿಕಾರಕ್ಕಾಗಿ ಒಳಜಗಳ, ಗುಂಪುಗಾರಿಕೆ, ಆರೋಪ ಪ್ರತ್ಯಾರೋಪಗಳು ಇದಕ್ಕೆ ಸಾಕ್ಷಿಯಾಗಿವೆ.

ಕಂಬಳ

ಈಗ ತುಳುನಾಡಿನ ಗ್ರಾಮೀಣ ಕ್ರೀಡೆ ಕಂಬಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಕಂಬಳ ಸಮಿತಿಯ ಅಧ್ಯಕ್ಷರೂ ಆದ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ. ನವೆಂಬರ್ 25 ಹಾಗೂ 26 ರಂದು ಈ ಕೋಣದ ಓಟದ ಸ್ಪರ್ಧೆ ಕಂಬಳ ನಡೆಯುತ್ತಿದ್ದು ಇದಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ರವರನ್ನು ಆಹ್ವಾನಿಸಲಾಗಿತ್ತು. ವಿವಾದದ ಕಿಡಿ ಹೊತ್ತಿದ್ದೇ ಇಲ್ಲಿ. ಯಾಕೆಂದರೆ ಆತ ಬಿಜೆಪಿಗ ಅನ್ನೋದಷ್ಟೇ ಅಲ್ಲಾ ಭಾರತ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷನಾಗಿದ್ದಾಗ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ದೇಶಾದ್ಯಂತ ಕುಖ್ಯಾತಿ ಪಡೆದಿದ್ದ. ಈ ಆರೋಪಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಂತಹ ಪ್ರಖ್ಯಾತ ಕುಖ್ಯಾತ ಸ್ತ್ರೀಪೀಡಕನನ್ನು ಕಂಬಳದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಈ ಕಾಂಗೈ ಶಾಸಕನಿಗೆ ಸಿಎಂ ಸಿದ್ದರಾಮಯ್ಯನವರು ಕರೆದು ಬುದ್ದಿ ಹೇಳಬಹುದಾಗಿತ್ತು ಹೇಳಲಿಲ್ಲ. ಅಷ್ಟೇ ಯಾಕೆ ಈ ಕಂಬಳಕ್ಕೆ ರಾಜ್ಯ ಸರಕಾರ ಒಂದು ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡಿತ್ತು!

ಯಾವಾಗ ಈ ಮಹಿಳಾ ಪೀಡಕನಿಗೆ ಕೊಟ್ಟ ಆಹ್ವಾನಕ್ಕೆ ವಿರೋಧ ವ್ಯಕ್ತವಾಗತೊಡಗಿತೋ ಆಗ ಇದೇ ಶಾಸಕ ರೈ ಕೊಟ್ಟ ಸಮರ್ಥನೆ ಹೇಗಿತ್ತೆಂದರೆ ” ಬ್ರಿಜ್ ಭೂಷಣ್ ರವರು ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಈ ಜನಾಂಗದ ಮುಖಂಡರು ಬಂದು ಮನವಿ ಮಾಡಿದ್ದರಿಂದ ಆಹ್ವಾನಿಸಲಾಯ್ತು” ಎಂದು.  “ಈ ಆಹ್ವಾನದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ” ಎಂದು ಸಿದ್ದಿ ಜನಾಂಗದವರು ಹೇಳುತ್ತಿದ್ದಾರೆ. ಇದರಿಂದಾಗಿ ಈ ಕಾಂಗೈ ಶಾಸಕನ ಸುಳ್ಳು ಸಮರ್ಥನೆಯೂ ಬೆತ್ತಲಾಗಿದೆ. ಯಾವಾಗ ಲೈಂಗಿಕ ಕಿರುಕುಳದ ಆರೋಪಿಯನ್ನು ಕಂಬಳಕ್ಕೆ ಆಹ್ವಾನಿಸಲಾಗಿದೆ ಎಂಬ ಸುದ್ದಿ ಕಾಂಗ್ರೆಸ್ಸಿನ ಹೈಕಮಾಂಡ್ ರಾಹುಲ್ ಗಾಂಧಿಯವರ ಕಿವಿಗೆ ಬಿತ್ತೋ ಆಗ ಆಹ್ವಾನವನ್ನು ರದ್ದುಮಾಡಲು ಹಾಗೂ ಕೋಟಿ ರೂಗಳ ಅನುದಾನವನ್ನು ತಡೆಹಿಡಿಯಲು ಸಿಎಂ ಸಾಹೇಬರಿಗೆ ಆದೇಶ ಬಂತು. ಈಗ ಎರಡನ್ನೂ ತಡೆಹಿಡಿಯಲಾಗಿದೆ. ಕಂಬಳದ ಆಹ್ವಾನ ಪತ್ರಿಕೆಯಿಂದಲೂ ಬ್ರಿಜ್ ಭೂಷಣ್ ಹೆಸರು ತೆಗೆದು ಹಾಕಲಾಗಿದೆ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಹಾಗೆ “ಎರಡು ದಿನಗಳ ಹಿಂದೆಯೇ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದರು” ಎಂದು ಈ ಪುತ್ತೂರಿನ ಕಾಂಗ್ರೆಸ್ ಶಾಸಕ ಮಾಡಿದ ತಪ್ಪು ಮುಚ್ಚಿಕೊಳ್ಳಲು ತಿಪ್ಪೆಸಾರಿಸಿ ಸುಳ್ಳಿನ ರಂಗೋಲಿ ಹಾಕತೊಡಗಿದರು. ಇದೆಲ್ಲಾ ಬೇಕಿತ್ತಾ? 

ಅಶೋಕ್‌ ಕುಮಾರ್‌ ರೈ- ಈ ಹಿಂದೆ

ಈ ಸಂಘ ಪರಿವಾರದಿಂದ ಕಾಂಗ್ರೆಸ್ಸಿಗೆ ವಲಸೆ ಬಂದು ಶಾಸಕರಾದ ಈ ಅಶೋಕ ಕುಮಾರ್ ರೈ ರವರಿಗೆ ಇನ್ನೂ ಸಂಘೀ ಸಂಸ್ಕಾರ ಹೋಗಿಲ್ಲ, ಹೋಗುವುದೂ ಇಲ್ಲಾ. ಹೀಗಾಗಿಯೇ ಬೆಂಗಳೂರಿನ  ಕಂಬಳ ಸ್ಪರ್ಧೆಗೆ ಬ್ರಿಜ್ ಭೂಷಣ್ ರನ್ನು ಆಹ್ವಾನಿಸಿದ್ದು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಡಿಯೂರಪ್ಪಾದಿಯಾಗಿ ಬಹುತೇಕ ಬಿಜೆಪಿಗರಿಗೇ ಸ್ಥಾನ ಸಿಕ್ಕಿದ್ದು. ಸಂಘೀ ಆತ್ಮದೊಂದಿಗೆ ಕಾಂಗೈ ವೇಷಧಾರಿಯಾದ ಈ ಶಾಸಕನಿಂದ ಇದಕ್ಕಿಂತಾ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಿದ್ದರಾಮಯ್ಯನವರು ಇಂತವರಿಂದ ಎಚ್ಚರವಹಿಸದೇ ಹೋದರೆ ಈ ಗಣವೇಷಧಾರಿ ಕಾಂಗ್ರೆಸ್ಸನ್ನೂ ಕೇಸರೀಕರಣಗೊಳಿಸುವುದರಲ್ಲಿ ಸಂದೇಹವಿಲ್ಲ.

ಇಷ್ಟಕ್ಕೂ ಕರಾವಳಿಯ ತುಳು ನಾಡಿನ ಕಂಬಳವನ್ನು ಈಗ  ಬೆಂಗಳೂರಲ್ಲಿ ನಡೆಸುವ ಉಮೇದು ಇವರಿಗೆ ಯಾಕೆ ಬಂತು? ಕೋಣಗಳ ಸ್ಪರ್ಧೆಗೂ ಬೆಂಗಳೂರಿಗೂ ಎತ್ತಲಿಂದೆತ್ತ ಸಂಬಂಧ? ಇದೆ, ಸಂಬಂಧ ಇದೆ. ಅದು ರಾಜಕೀಯದ ಓಟಿನ ಸಂಬಂಧ. ಈ ಕಂಬಳದ ಹಬ್ಬ ಇದೆಯಲ್ಲಾ ಇದರ ಜೊತೆ ಈ ತುಳುನಾಡಿನವರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಆದರೆ ಕರಾವಳಿ ಪ್ರದೇಶ ಈಗಾಗಲೇ ಕೇಸರಿಮಯವಾಗಿದೆ. ಈ ಸಲದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ ಬಿಜೆಪಿ ಸೋತರೂ ಕರಾವಳಿಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿ ಕೊಂಡಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕೇಸರಿ ಪಡೆಯ ಪ್ರಭಾವವನ್ನು ಕಡಿಮೆ ಮಾಡಿ ಕಾಂಗ್ರೆಸ್ ಬಾವುಟ ಹಾರಿಸಲು ಕಾಂಗ್ರೆಸ್ ಪಕ್ಷ ಈ ಕಂಬಳವನ್ನು ಬಳಸಿಕೊಂಡು ತುಳು ನಾಡಿನ ಜನರನ್ನು ಮೆಚ್ಚಿಸಲು ಬೆಂಗಳೂರಲ್ಲಿ ಕೋಣದ ಓಟದ ಸ್ಪರ್ಧೆಯನ್ನು ಆಯೋಜಿಸಲಾಯಿತು. ನಮ್ಮ ಭಾಗದ ಕಂಬಳವು ಕಾಂಗ್ರೆಸ್ ಆಡಳಿತದಲ್ಲಿ ರಾಜಧಾನಿಯಲ್ಲಿಯೂ ಮೆರೆದಾಡಿತು ಎಂಬ ಭಾವನೆಯನ್ನು ಕರಾವಳಿಗರಲ್ಲಿ ಹುಟ್ಟಿಸುವ ರಾಜಕೀಯ ತಂತ್ರದ ಭಾಗವಾಗಿಯೇ ಈ ಕಂಬಳ ಸ್ಪರ್ಧೆ ಬೆಂಗಳೂರಲ್ಲಿ ನಡೆಯುತ್ತಿದೆ. ಇದನ್ನು ಸಿದ್ದರಾಮಯ್ಯನವರ ಗಮನಕ್ಕೆ ತಂದೇ ಅನುಷ್ಟಾನಗೊಳಿಸಲಾಗುತ್ತಿದೆ. ಕಾಂಗ್ರೆಸ್ ಸರಕಾರ ಒಂದು ಕೋಟಿ ಹಣವನ್ನು ಈ ಆಟಕ್ಕೆ ಮಂಜೂರು ಮಾಡಿದ್ದೇ ಇದಕ್ಕೆ ಪೂರಕ ಸಾಕ್ಷಿಯಾಗಿದೆ. ಅರಮನೆ ಮೈದಾನವನ್ನು ಕೆಸರು ಗದ್ದೆ ಮಾಡಲು ಅನುಮತಿ ಕೊಟ್ಟಿದ್ದೇ ಪುರಾವೆಯಾಗಿದೆ.

ಇಷ್ಟಕ್ಕೂ ಈ ಕಂಬಳ ಎನ್ನುವುದು ಮೇಲ್ವರ್ಗದವರ ಪ್ರತಿಷ್ಠೆಯ ಕ್ರೀಡೆಯಾಗಿದೆಯೇ ಹೊರತು ಕೆಳ ತಳ ಸಮುದಾಯದವರ ಸಂಪ್ರದಾಯವೇನಲ್ಲ. ತುಳುನಾಡಿನ ಹಲವಾರು ಶ್ರೀಮಂತ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಠೆಯ ಸ್ಪರ್ಧೆಯಾಗಿಯೇ ಕಂಬಳವು ಉಳಿದು ಬೆಳೆದು ಬಂದಿದೆ. ಈ ಸ್ಪರ್ಧೆಗೆ ಬೇಕಾದ ಕೋಣಗಳನ್ನು ಪೋಷಿಸಿ ಕಟ್ಟುಮಸ್ತಾಗಿ ಬೆಳೆಸುವ ಕೆಲಸ ಮಾತ್ರ ಕೂಲಿ ಆಳುಗಳದ್ದಾಗಿದೆ. ಈ ತುರಿಸಿನ ಸ್ಪರ್ಧೆಯ ಹಿಂದಿನ ದಿನ ಕಂಬಳದ ಕೆಸರು ಗದ್ದೆಯನ್ನು  ಕೊರಗ ಸಮುದಾಯದವರು ಕುಟುಂಬ ಪರಿವಾರ ಸಮೇತ ಕಾಯುವುದು ಸಂಪ್ರದಾಯವಾಗಿದೆ. ಎಲ್ಲಿ ವಿರೋಧಿ ಗುತ್ತಿನವರು ಗದ್ದೆಯಲ್ಲಿ ಕಲ್ಲು ಗಾಜುಗಳನ್ನು ಹಾಕಿದ್ದಾರೋ ಎನ್ನುವುದನ್ನು ಪರಿಶೀಲಿಸಲು ಇದೇ ಕೊರಗರು ಸ್ಪರ್ಧೆಗೆ ಮೊದಲು ಬರಿಗಾಲಲ್ಲಿ ಕೆಸರಲ್ಲಿ ಓಡಿ ನೋಡಬೇಕಂತೆ. ಈ ಕಂಬಳ ಎನ್ನುವ ಸ್ಪರ್ಧೆಯೇ ಪಕ್ಕಾ ಪಾಳೇಗಾರಿಕೆ ಆಡಳಿತದ ಜೀವಂತ ಪಳೆಯುಳಿಕೆಯಾಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಶಡ್ಯಂತ್ರದ ಭಾಗವಾಗಿದೆ. ಕಂಬಳವನ್ನು ಜನಮಾನಸದಲ್ಲಿ ನೆಲೆಸುವಂತೆ ಮಾಡಲು ಇದೊಂದು ಗ್ರಾಮೀಣ ಜನಪದ ಕ್ರೀಡೆ, ಬಹುಜನರ ಸಂಸ್ಕೃತಿ ಎಂದೆಲ್ಲಾ ಪ್ರಚಾರ ಮಾಡಿ ಜನರ ಭಾವನೆಗಳನ್ನು ಪ್ರಚೋದಿಸಲಾಗುತ್ತಿದೆ. ಆದರೆ ಕೋಣಗಳ ಮಾಲೀಕತ್ವ ಹಾಗೂ ಸ್ಪರ್ಧೆಯ ಗೆಲುವುಗಳು ಜಮೀನ್ದಾರರದ್ದೇ ಆಗಿರುತ್ತವೆ. ಪಾಪ ಏನೂ ಗೊತ್ತಿಲ್ಲದ ಕೋಣಗಳು ಏಟು ತಿನ್ನುತ್ತಾ ಕೆಸರಿನ ಗದ್ದೆಯಲ್ಲಿ ಹಿಂಸೆಯನ್ನು ಅನುಭವಿಸುತ್ತಾ ಓಡುತ್ತವೆ. ಅದನ್ನು ನೋಡಿ ಸಹಸ್ರಾರು ಜನ ಹಿಂಸಾ ವಿನೋದವನ್ನು ಸಂಭ್ರಮಿಸುತ್ತಾರೆ. 

ಬ್ರಿಜ್ ಭೂಷಣ್‌ ಶರಣ್ ಸಿಂಗ್‌

ಈ ಕಂಬಳ ಎನ್ನುವುದೇ ಪ್ರಾಣಿ ಹಿಂಸೆಗೆ ಪ್ರತೀಕವಾದ ಮೋಜಿನ ಆಟವಾಗಿದೆ. ಇದೊಂದು ಕೋಣಗಳ ಕ್ರೂರ ಸ್ಪರ್ಧೆ. ಹೇಗಾದರೂ ಗೆಲ್ಲಲೇಬೇಕು ಎನ್ನುವ ಹಪಾಹಪಿಗೆ ಬಿದ್ದು ಸ್ಪರ್ಧೆ ಆರಂಭದ ಕೆಲವೇ ಕ್ಷಣಗಳ ಮೊದಲು ಕಂಬಳದ ಕೋಣಗಳ ಬಾಲಕ್ಕೆ ಗಾಯ ಮಾಡಿ ಕಾರದ ಪುಡಿ ಸವರಿ ಕೋಣಗಳಿಗೆ ಉರಿ ಬರುವಂತೆ ಮಾಡಲಾಗುತ್ತದೆ. ಉರಿ ತಾಳಲಾಗದೇ ಕೋಣಗಳು ಅಸಾಧ್ಯ ಸಂಕಟದಿಂದ ಓಡುತ್ತಿರುವುದನ್ನು ನೋಡುವ ಜನರು ಹಿಂಸಾನಂದದಿಂದ ಉದ್ರೇಕಿತರಾಗುತ್ತಾರೆ. ಈ ಪ್ರಾಣಿ ಹಿಂಸೆಯನ್ನು ನಿರ್ಬಂಧಿಸಲು ಪ್ರಾಣಿ ದಯಾ ಸಂಘ ‘ಪೇಟಾ’ ನ್ಯಾಯಾಲಯಕ್ಕೂ ಹೋಗಿತ್ತು. ಆದರೆ ಎಲ್ಲಿ ಈ ಕ್ರೀಡೆಯನ್ನು ಬ್ಯಾನ್ ಮಾಡಿದರೆ ಜನರ ಆಕ್ರೋಶವನ್ನು ಸರಕಾರ ಎದುರಿಸಬೇಕಾಗುತ್ತೋ ಎನ್ನುವ ಭಯದಲ್ಲಿ ಪ್ರಾಣಿ ಹಿಂಸಾತ್ಮಕ ಕ್ರೀಡೆ ನಿಲ್ಲದಂತೆ ಸರಕಾರ ನೋಡಿಕೊಂಡಿತು. ‘ಪೇಟಾ ವಿರೋಧ ವ್ಯಕ್ತಪಡಿಸಿದ್ದಾಗ ಸಿದ್ದರಾಮಯ್ಯನವರೇ ಕಂಬಳ ಕ್ರೀಡೆ ಮುಂದುವರೆಯಲು ಸಹಾಯ ಮಾಡಿದ್ದರು’ ಎಂದು ಶಾಸಕ ಅಶೋಕ್ ರೈ ಕಂಬಳವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಾಣಿ ದಯೆಯಿಂದಾಗಿ ಮತ ಬ್ಯಾಂಕನ್ನು ಕಳೆದುಕೊಳ್ಳಲು ಇಚ್ಚಿಸದ ಸಿದ್ದರಾಮಯ್ಯನವರಾಗಲೀ ಅಥವಾ ಯಾವುದೇ ನಾಯಕರಾಗಲೀ ಕಂಬಳದಂತಹ ಹಿಂಸಾನಂದ ಪೀಡಿತ ಕ್ರೀಡೆಗೆ ವಿರೋಧ ವ್ಯಕ್ತ ಪಡಿಸಲು ಸಾಧ್ಯವಿಲ್ಲ.

ಆದರೆ.. ಇಂತಹ ಮೇಲ್ಜಾತಿ ವರ್ಗಗಳ ಪ್ರತಿಷ್ಠೆಯ ಸಂಕೇತವಾದ ಹಿಂಸಾಪ್ರಚೋದಕ ಕ್ರೀಡೆಗಳು ಬೆಂಗಳೂರಿಗೂ ಬೇಕಾ? ಹೌದು ಬೇಕಿದೆ. ಜಮೀನ್ದಾರಿ ಅಹಮಿಕೆಯನ್ನು ತೃಪ್ತಿ ಪಡಿಸಲು, ಜನಸಾಮಾನ್ಯರ ಭಾವನೆಗಳನ್ನು ಕ್ರೀಡೆಯ ಮೂಲಕ ಪ್ರಚೋದಿಸಲು, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಖಾಯಂಗೊಳಿಸಲು, ಚುನಾವಣೆಗಾಗಿ ಮತಗಳನ್ನು ಕ್ರೋಢೀಕರಿಸಲು ಇಂತಹ ಕ್ರೀಡೆಗಳು ಪ್ರಭುತ್ವಕ್ಕೂ ಅಗತ್ಯವಾಗಿವೆ. ಅದಕ್ಕಾಗಿಯೇ ಆಳುವ ಸರಕಾರಗಳು ಈ ಪ್ಯೂಡಲ್ ಕ್ರೀಡೆಗೆ ಮನ್ನಣೆ ಹಾಗೂ ಪ್ರೋತ್ಸಾಹವನ್ನು ಕೊಡುತ್ತಲೇ ಬಂದಿದೆ. ತಳ ಕೆಳ ಸಮುದಾಯದ ಪರವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರವೂ ಇದಕ್ಕೆ ಹೊರತಾಗೇನೂ ಇಲ್ಲ. 

ತುಳುನಾಡಿನ ಕಂಬಳ ಕ್ರೀಡೆ ಈಗ ರಾಜಧಾನಿಗೆ ಬಂದಿದೆ. ಸರಕಾರಗಳ ಸಹಕಾರದಿಂದ ಇನ್ನೂ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದರೂ ಅಚ್ಚರಿ ಇಲ್ಲ. ಮತಗಳು ಕ್ರೋಢೀಕರಣ ಆಗುತ್ತದೆ ಎನ್ನುವುದಾದರೆ ಕೇಸರಿ ಪ್ರಭುತ್ವ ಈ ಫ್ಯೂಡಲ್ ಆಟವನ್ನು ರಾಷ್ಟ್ರೀಯ ಆಟ ಎಂದೂ ಘೋಷಿಸಿ ಪೋಷಿಸಬಹುದಾಗಿದೆ. ಈ ಎಲ್ಲಾ ಅಪಾಯಗಳನ್ನು ಮನಗಂಡು ಸಿದ್ದರಾಮಯ್ಯನವರು ಕಾಂಗ್ರೆಸ್ ಎನ್ನುವ ಕತ್ತೆಯನ್ನು ಕುದುರೆಯನ್ನಾಗಿಸಿ ಮುನ್ನಡೆಸಬೇಕೆಂದರೆ ಇಂತಹ ಫ್ಯೂಡಲ್ ಪ್ರಣೀತ ಪ್ರತಿಷ್ಠೆಯ ಹಿಂಸಾನಂದದ ಆಟವನ್ನು ನಿಯಂತ್ರಿಸಬೇಕಿದೆ. ಸರಕಾರದ ಪ್ರೋತ್ಸಾಹವನ್ನು ನಿಲ್ಲಿಸಬೇಕಿದೆ. ತಮ್ಮದೇ ಪಕ್ಷದ ಶಾಸಕನ ಉಪದ್ಯಾಪತನವನ್ನು ತಹಬದಿಗೆ ತರಬೇಕಿದೆ. ರಾಯರ ಕತ್ತೆ ಕುದುರೆಯಾಗಬೇಕಿದೆ. 

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದು)

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ದಾವೂದ್ ಇಬ್ರಾಹಿಂ ಸಹಚರನೂ ಕಂಬಳದ ಅತಿಥಿ!!! ; ವಿವಾದದ ಕೇಂದ್ರಬಿಂದು ಆಗುತ್ತಿದೆ ‘ಬೆಂಗಳೂರು ಕಂಬಳ’ https://peepalmedia.com/dawood-ibrahim-companion-is-also-kambala-guest/

Related Articles

ಇತ್ತೀಚಿನ ಸುದ್ದಿಗಳು