Home ನಿಧನ ಸುದ್ದಿ ಮಾಜಿ ಶಾಸಕ ಪಟೇಲ್ ಶಿವರಾಂ ನಿಧನಕ್ಕೆ ಮಿಡಿದ ಕಂಬನಿ, ಅಂತಿಮ ದರ್ಶನ ಪಡೆದ ಹೆಚ್.ಡಿ. ದೇವೇಗೌಡರು,...

ಮಾಜಿ ಶಾಸಕ ಪಟೇಲ್ ಶಿವರಾಂ ನಿಧನಕ್ಕೆ ಮಿಡಿದ ಕಂಬನಿ, ಅಂತಿಮ ದರ್ಶನ ಪಡೆದ ಹೆಚ್.ಡಿ. ದೇವೇಗೌಡರು, ಸಂಸದ, ಶಾಸಕರು, ಮಾಜಿ ಸಚಿವರು

ಹಾಸನ : ಸರಳರು, ಸಜ್ಜನರು ಹಾಗೂ ಕಳಂಕ ರಹಿತ ರಾಜಕಾರಣಿ ವಿದಾನ ಪರಿಷತ್ತು ಮಾಜಿ ಸದಸ್ಯ ಪಟೇಲ್ ಶಿವರಾಂ 76 ವರ್ಷ ಗುರುವಾರದಂದು ಬೆಳಿಗ್ಗೆ ನಿಧನರಾಗಿದ್ದು, ಅಂತಿಮ ದರ್ಶನವನ್ನು ಅವರ ನಿವಾಸದಲ್ಲಿ ಗಣ್ಯರು ಪಡೆದು ನಮನ ಸಲ್ಲಿಸಿ ಕಂಬನಿ ಮಿಡಿದರು.


ಹಲವಾರು ದಿವಸದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟೇಲ್ ಶಿವರಾಂ ಹೌಸಿಂಗ್ ಬೋರ್ಡ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು, ಸ್ನೇಹಿತರು ಮನೆ ಮುಂದೆ ಜಮಾಯಿಸಿದರು. ಇನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಗಮಿಸಿ ಅಂತಿಮ ದರ್ಶನ ಪಡೆದು ಶರಣು ಮಾಡಿಕೊಂಡು ಕೆಲ ಸಮಯ ಆತ್ಮೀಯ ಸ್ನೇಹಿತನ ಪ್ರಾರ್ಥಿವ ಶರೀರದ ಮುಂದೆ ಕುಳಿತು ಕಣ್ಣೀರು ಹಾಕಿದರು. ಇನ್ನು ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಎಚ್.ಡಿ. ರೇವಣ್ಣ, ಹೆಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಸಚಿವ ಬಿ. ಶಿವರಾಂ, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ, ಕೆ.ಎಸ್. ಲಿಂಗೇಶ್, ಎಂ.ಎ. ಗೋಪಾಲಸ್ವಾಮಿ, ಶ್ರೀ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಸೇರಿದಂತೆ ವಿವಿಧ ಪಕ್ಷದ ರಾಜಕಾರಣಿಗಳು ಪಕ್ಷ ಬೇಧ ಮರೆತು ಅಂತಿಮ ದರ್ಶನ ಪಡೆದರು. ನಂತರ ತೆರೆದ ವಾಹನದಲ್ಲಿ ಮೃತರಾದ ಪಟೇಲ್ ಶಿವರಾಂರ ಪಾರ್ಥಿವ ಶರೀರವನ್ನು ಇಟ್ಟು ಮೆರವಣಿಗೆಯಲ್ಲಿ ಕೊಂಡೂಯ್ದರು. ಇದೆ ವೇಳೆ ಶಾಸಕ ಹೆಚ್.ಪಿ. ಸ್ವರೂಪ್ ಜೊತೆಯಲ್ಲಿಯೇ ನಡೆದರು. ಕೊನೆಯಲ್ಲಿ ಮೃತರ ಸ್ವಗ್ರಾಮವಾದ ದೊಡ್ಡಗೇಣಿಗೇರೆಯ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾಧ್ಯಮದೊಂದಿಗೆ ಮಾತನಾಡಿ, ಇವತ್ತು ಬ್ರಾಹ್ಮಿನಾ ಮುಹೂರ್ತದಲ್ಲಿ ನನ್ನ ಆತ್ಮೀಯ ಸ್ನೇಹಿತ ಪಟೇಲ್ ಶಿವರಾಂ ಶಿವೈಕ್ಯರಾಗಿದ್ದಾರೆ. 1984 ರಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಶ್ರೇಷ್ಟವಾದ ಆಡಳಿತ ನೀಡಿದ್ದರು. ಪ್ರಮಾಣಿಕತೆ, ಸ್ವಚ್ಚವಾದ ಆಡಳಿತ ನೀಡಿದ್ದರು. ಯಾರು ಏನೇ ಕಷ್ಟ ಅಂಥ ಹೇಳಿದ್ರು ವಾಸ್ತವಾಂಶವನ್ನು ಅವರಿಗೆ ತಿಳಿಸುತ್ತಿದ್ದರು. ಇದು ಆಗುತ್ತೆ, ಇದು ಆಗಲ್ಲ ಎನ್ನುತ್ತಿದ್ದರು. ನೇರ ನುಡಿಗೆ ಹೆಸರಾದಂತಹ ವ್ಯಕ್ತಿ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕಿತರಾಗದ ಒಬ್ಬ ಆತ್ಮೀಯ ಸ್ನೇಹಿತರಾಗಿದ್ದರು. ಕೊನೆಯಗಾಲದವರೆಗೂ ತನ್ನ ನಿಷ್ಠೆ ಪ್ರದರ್ಶಿಸಿ ಜೊತೆಯಾಗಿ ಉಳಿದ ವ್ಯಕ್ತಿ. ಜಿಲ್ಲೆಯ ಜನತೆ, ರೈತರಿಗೆ ಶಕ್ತಿ ಮೀರಿ ಕೆಲಸ ಮಾಡಿ, ದೇವೇಗೌಡರ ಹೆಸರು ಉಳಿಯಬೇಕು ಎಂದು ಡಿಸಿಸಿ ಬ್ಯಾಂಕ್ ಕಟ್ಟಡ ಕಟ್ಟಿಸಿ ದೇವೇಗೌಡರ ಸಭಾಂಗಣ ಎಂದು ನಾಮಕರಣ ಮಾಡಿದ್ದಾರೆ ಎಂದರು. ಸ್ಥಳೀಯ ಚುನಾವಣೆಯಲ್ಲಿ ಮೊದಲ ಬಾರಿ ಸೋತಿದ್ದು, ಅದರ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಸೋತರವರನ್ನು ಕೈಬಿಡಬಾರದು ಎಂದು ಜಿ.ಪಂ.ಗೆ ಅವರನ್ನು ನಿಲ್ಲಸಿದ್ದೆವು. ಆರು ವರ್ಷ ಎಂಎಲ್‌ಸಿ ಆಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ.

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ತನ್ನ ಸೇವೆ ಸಲ್ಲಿಸಿದ್ದಾರೆ. ಎಂದು ಸ್ವಾರ್ಥಿ ಅಲ್ಲ, ಐದು ವರ್ಷದ ಹಿಂದೆ ಕಿಡ್ನಿ ವಿಫಲವಾಗಿತ್ತು. ಸುಧಾರಿಸಿಕೊಂಡು ಮನೆಯಲ್ಲಿದ್ದರು. 1984 ರಲ್ಲಿ ಜಿ.ಪಂ. ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸ್ವಚ್ಛ ಜೀವನವನ್ನು ರಾಜಕಾರಣದಲ್ಲಿ ಉಳಿಸಿಕೊಂಡಿದ್ದರು. ಗುರುವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದು ಶಿವನ ಪಾದವನ್ನು ಸೇರಿದ್ದಾರೆ. ದೇಶದ ರಾಜಕಾರಣ ಅವರಿಗೆ ಗೊತ್ತಿಲ್ಲ. ಒಂದೊAದು ಸಾರಿ ಸ್ವಲ್ಪ ಕೋಪ, ಏನಾದರೂ ಹೇಳಿದ್ರಿ ಆಗಲ್ಲ ಅಂತಿದ್ರು. ಅದನ್ನು ಕೆಲವರು ತಪ್ಪು ತಿಳಿದುಕೊಳ್ಳುತ್ತಿದ್ದರು. ಅದನ್ನು ಬಿಟ್ಟರೆ ಸ್ವಚ್ಛವಾದ ಜೀವನ, ತುಂಬು ಕುಟುಂಬ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಅವರಿಗೆ 75 ವರ್ಷ, ನನಗೆ 92 ವರ್ಷ ವಯಸ್ಸು ಆಗಿದೆ.ರಾಜಕಾರಣದಲ್ಲಿ ನಾ ಕಂಡ ಪರಿಶುದ್ಧವಾದ ವ್ಯಕ್ತಿ, ಆತ್ಮೀಯ ಸ್ನೇಹಿತರು. ನಮ್ಮಿಂದ ದೂರ, ಬಹುದೂರು ಹೋಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಟ್ಟು ಮೋಕ್ಷ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೋವನ್ನ, ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹಿಂದಿನ ನೆನಪನ್ನು ನೆನಪಿಸಿಕೊಂಡರು. ನನ್ನ ಆರೋಗ್ಯ ಸರಿಯಿಲ್ಲ, ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

You cannot copy content of this page

Exit mobile version