ಹಾಸನ: ಕಾಲೇಜುಗಳಲ್ಲಿ ಬ್ಯಾಕ್ ಲಾಗ್ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ನೀಡಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲು ಹಾಗೂ ಸ್ಥಗಿತಗೊಂಡಿರುವ 2000 ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿಮಾಡಲು ಸಂಭಂಧಪಟ್ಟ ಇಲಾಖೆಯ ಮಂತ್ರಿಗಳಿಗೆ, ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಎಸ್.ಸಿ., ಎಸ್.ಟಿ. ಪದವಿದರರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ದಲಿತ ಹಿರಿಯ ಮುಖಂಡರಾದ ಕೃಷ್ಣದಾಸ್ ಮಾತನಾಡಿ, ನಮ್ಮ ಸಂವಿಧಾನ ‘ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು’ ಎಂಬ ಆಶಯದ ತಳಹದಿಯ ಮೇಲೆ ನಿರ್ಮಾಣಗೊಂಡಿದೆ. ಸಂವಿಧಾನದ 16ನೇ ವಿಧಿಯು ಸರ್ಕಾರದ ಆಡಳಿತದಲ್ಲಿ ಧರ್ಮ, ಜಾತಿ, ಲಿಂಗ ತಾರತಮ್ಯ ಮಾಡಬಾರದೆಂದು ತಿಳಿಸುತ್ತದೆ. ಮುಂದುವರಿದು 16(4)ಬಿ)ಯಲ್ಲಿ ಸರ್ಕಾರಿ ಹುದ್ದೆ ನೇಮಕಾತಿಯ ಆ ವರ್ಷದಲ್ಲಿ ಪ. ಜಾತಿ /ಪ. ವರ್ಗದ ಅರ್ಹಅಭ್ಯರ್ಥಿಗಳು ದೊರೆಯದಿದ್ದಲ್ಲಿ ಅವರಿಗೆ ಮೀಸಲಾದ ಹುದ್ದೆಗಳನ್ನು ಹಿಂಬಾಕಿ ಹುದ್ದೆ ಎಂದು ಪರಿಗಣಿಸಿ ನಂತರದ ವರ್ಷಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಹಿಂಬಾಕಿ (ಬ್ಯಾಕ್ ಲಾಗ್ )ಹುದ್ದೆಗಳನ್ನು ಭರ್ತಿಮಾಡಲು 2001-02ರಲ್ಲಿ ಸರ್ಕಾರ ವಿಶೇಷ ಅಧಿಸೂಚನೆ ಹೊರಡಿಸಿ 1-1-1984 ರಿಂದ ಪೂರ್ವಾನ್ವಯವಾಗುವಂತೆ ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳು ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿದಿರುವ ಹಿಂಬಾಕಿ ಹುದ್ದೆಗಳನ್ನು ಶೀಘ್ರ ಗುರುತಿಸಿ 6 ತಿಂಗಳೊಳಗಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ಸ್ಪಷ್ಟ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸುಮಾರು 10 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಭೋಧಕ ಮತ್ತು ಭೋದಕೇತರ ಹುದ್ದೆಗಳಿಗೆ ಪ. ಜಾತಿಯ 163 ಪ. ಪಂಗಡದ 180 ಹಿಂಬಾಕಿ ಹುದ್ದೆ ಭರ್ತಿಮಾಡಲು 20019- 20 ರಲ್ಲಿ ಅಧಿಸೂಚನೆ ಹೊರಡಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ.
ದುರಂತವೆAದರೆ ಆಯ್ಕೆಮಾಡಿಕೊಂಡು 5 ವರ್ಷ ಕಳೆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಈವರೆವಿಗೂ ‘ನೇಮಕಾತಿ ಆದೇಶ ನೀಡಿಲ್ಲ ಮತ್ತು ಕರ್ತವ್ಯಕ್ಕೂ ತೆಗೆದುಕೊಂಡಿಲ್ಲ. ಸರ್ಕಾರದ ವಿವಿಧ ಇಲಾಖೆ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಿದ್ದು ನೇಮಕಾತಿ ಪ್ರಕ್ರಿಯೆಯನ್ನೇ ಸರ್ಕಾರ ಸ್ಥಗಿತಗೊಳಿಸಿದೆ ಎಂದು ದೂರಿದರು.ಈ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಪದವೀಧರರ ಒಕ್ಕೂಟ ಸಂಬಂಧಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಕಳೆದ 3-4 ವರ್ಷಗಳಿಂದ ಭೇಟಿಯಾಗಿ ಮನವಿ ಮಾಡುತ್ತಾ ಬಂದಿದ್ದರು ಯಾವುದೆ ಪ್ರಯೋಜನವಾಗಿಲ್ಲ.
ಅಲ್ಲದೆ ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರು ಹಾಗೂ ಡಾ. ಹೆಚ್.ಸಿ. ಮಹದೇವಪ್ಪ ಸೇರಿದಂತೆ ಸಂಬಂಧಪಟ್ಟ ಕಮಿಟಿಯ ಸದಸ್ಯರಾದ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆಯವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬ್ಯಾಕ್ ಲಾಗ್ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ನೀಡಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲು ಹಾಗೂ ಸ್ಥಗಿತಗೊಂಡಿರುವ 2000 ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿಮಾಡಲು ಸಂಭಂಧಪಟ್ಟ ಇಲಾಖೆಯ ಮಂತ್ರಿಗಳಿಗೆ, ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಕೋರುತ್ತೇವೆ ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಎಸ್.ಸಿ., ಎಸ್.ಟಿ. ಪದವಿದರರ ಒಕ್ಕೂಟದ ಆರ್. ಮರೀಜೋಸೇಫ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ತೋಟೆಶ್ ನಿಟ್ಟೂರ್, ವೀರರಾಜು, ವಿ.ಆರ್. ಪ್ರಕಾಶ್, ರಂಗಸ್ವಾಮಿ ಇತರರು ಭಾಗವಹಿಸಿದ್ದರು.