Home ರಾಜಕೀಯ ಏರುತ್ತಿರುವ ಕನ್ಹಯ್ಯ ಕುಮಾರ್‌ ರಾಜಕೀಯ ಬದುಕಿನ ಸೂಚ್ಯಂಕ – ಕಾಂಗ್ರೆಸ್‌ ಇವರಿಂದ ಪಡೆದಿದ್ದೇನು?

ಏರುತ್ತಿರುವ ಕನ್ಹಯ್ಯ ಕುಮಾರ್‌ ರಾಜಕೀಯ ಬದುಕಿನ ಸೂಚ್ಯಂಕ – ಕಾಂಗ್ರೆಸ್‌ ಇವರಿಂದ ಪಡೆದಿದ್ದೇನು?

0

ಫೆಬ್ರವರಿ 9, 2016ರ ಘಟನೆಯ ನಂತರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಕನ್ಹಯ್ಯ ಕುಮಾರ್ ಎಂಬ ಹೆಸರು ಹೊರಹೊಮ್ಮಿತು ಮತ್ತು ಅದು ದೇಶಾದ್ಯಂತ ಪ್ರತಿಧ್ವನಿಸಲು ಪ್ರಾರಂಭಿಸಿತು. ಆಗ ಕನ್ಹಯ್ಯ ಕುಮಾರ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿದ್ಯಾರ್ಥಿ ವಿಭಾಗವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ನ ನಾಯಕರಾಗಿದ್ದರು ಮತ್ತು JNU ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.

ಈಗ ಅದೆಲ್ಲ ಮುಗಿದು ಏಳೂವರೆ ವರ್ಷವಾಗಿರುವ ಹೊತ್ತಿನಲ್ಲಿ ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ ಪಕ್ಷದಲ್ಲಿ ನೆಲೆಯಾಗಿದ್ದಾರೆ. ಪ್ರಸ್ತುತ ಪಕ್ಷವು ಅವರನ್ನು ಕೇಂದ್ರ ಕಾರ್ಯಕಾರಿ ಸಮಿತಿಯ ಉಸ್ತುವಾರಿಯನ್ನಾಗಿ ಮಾಡಿದೆ. ರಾಜಕೀಯವಾಗಿ ಚುರುಕಿನ ಮನುಷ್ಯನಾದ ಕನ್ಹಯ್ಯ 2021ರಲ್ಲಿ ಕಾಂಗ್ರೆಸ್‌ ಬಹುಬೇಗನೆ ಬೆಳವಣಿಗೆಯ ಏಣಿಯನ್ನು ಏರುತ್ತಾ ಪ್ರಸ್ತುತ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಕಮ್ಯೂನಿಸ್ಟ್‌ ಪಕ್ಷದೊಂದಿಗಿನ 17 ವರ್ಷಗಳ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಬಂದ ಕನ್ಹಯ್ಯಾ ಅವರಿಗೆ ಎರಡೂ ಪಕ್ಷಗಳ ತತ್ವದಲ್ಲಿ ಸಾಕಷ್ಟು ಹೋಲಿಕೆ ಕಾಣಿಸಿತ್ತು. ಕನ್ಹಯ್ಯ ಪಕ್ಷದಲ್ಲಿ ತನ್ನ ಭವಿಷ್ಯದ ಗೆರೆಯನ್ನು ಕಂಡರೆ ಕಾಂಗ್ರೆಸ್‌ ಅವರಲ್ಲಿ ತನ್ನ ಭವಿಷ್ಯದ ನಾಯಕನನ್ನು ಕಂಡುಕೊಂಡಿತು. ಕನ್ಹಯ್ಯ ಪಕ್ಷಕ್ಕೆ ಬಂದಿದ್ದರಿಂದ ಆದ ಲಾಭವೆಂದರೆ ಆ ಪಕ್ಷಕ್ಕೆ ಬಿಹಾರದಲ್ಲಿ ಬಿಜೆಪಿಗರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬಲ್ಲ ಯುವ ನಾಯಕನೊಬ್ಬ ಸಿಕ್ಕಿದ್ದ. ಈ ಯಂಗ್‌ ಟರ್ಕ್‌ನಲ್ಲಿ ಕಾಂಗ್ರೆಸ್‌ ತನ್ನ ಭವಿಷ್ಯದ ನಾಯಕನನ್ನು ಕಾಣುತ್ತಿದೆ. ಮತ್ತು ಈ ನಿಟ್ಟಿನಲ್ಲಿ ಕನ್ಹಯ್ಯಾ ಕೂಡಾ ಪಕ್ಷವನ್ನು ನಿರಾಶೆ ಮಾಡದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ನೆಲದಲ್ಲಿ ನಿಂತು ಏಕಾಂಗಿಯಾಗಿ ಬಡಿದಾಡುವ ಕಮ್ಯುನಿಸ್ಟ್‌ ಗುಣವನ್ನು ಅವರು ಇಂದಿಗೂ ಬಿಟ್ಟುಕೊಟ್ಟಿಲ್ಲ. ಮೈಕು ಹಿಡಿದರೆಂದರೆ ವಿರೋಧ ಪಕ್ಷಗಳನ್ನು ತೊಳೆದು ಮುಗಿಸಿಯೇ ಮೈಕು ಕೆಳಗಿಡುವ ಗುಣ ಕನ್ಹಯ್ಯ ಅವರದು. ಅವರ ದಿಟ್ಟ ಮಾತುಗಳಿಗೆ ವಿರೋಧಿಗಳಿಗೂ ತಲೆದೂಗುವಂತೆ ಮಾಡುವ ಶಕ್ತಿಯಿದೆ.

ಕಾಂಗ್ರೆಸ್‌ ಈಗ ಕನ್ಹಯ್ಯ ಮೂಲಕ ಯುವಕರನ್ನು ತಲುಪಲು ಪ್ರಯತ್ನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಮೊದಲ ಸಲದ ಮತದಾರರನ್ನು ಅದು ಗುರಿಯಾಗಿಸಿಕೊಂಡು ಕನ್ಹಯ್ಯ ಅವರನ್ನು ಬಳಸಿಕೊಳ್ಳುತ್ತಿದೆ. ಕನ್ಹಯ್ಯ ವಿದ್ಯಾರ್ಥಿ ನಾಯಕನಾಗಿ ಜನಪ್ರಿಯರಾದವರು. ಅವರ ಮಾತಿನ ಮೋಡಿಗೆ ಯುವಕರು ಮರುಳಾಗಿದ್ದು ಕೂಡಾ ಅವರು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಎನ್ನುವುದು ಗಮನಾರ್ಹ. ಅವರು JNU ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದವರು. ಈ ಹಿನ್ನೆಲೆಯಲ್ಲೇ ಕನ್ಹಯ್ಯ ಅವರ ಮೇಲೆ ಭರವಸೆಯಿಟ್ಟು ಮುನ್ನಡೆಯುತ್ತಿದೆ.

 ಕಾಂಗ್ರೆಸ್‌ ಕನ್ಹಯ್ಯ ವಿಷಯದಲ್ಲಿ ಪರಿಗಣಿಸುತ್ತಿರುವ ಪ್ರಮುಖ ಅಂಶವೆಂದರೆ ಕನ್ಹಯ್ಯ ಮೂಲಕ ಬಿಹಾರದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವುದು. ವಾಸ್ತವವಾಗಿ, ಕನ್ಹಯ್ಯ ಬಿಹಾರದ ಲೆನಿನ್ಗ್ರಾಡ್ ಎಂದು ಕರೆಯಲ್ಪಡುವ ಮಿನಿ ಮಾಸ್ಕೋ ಅಥವಾ ಬೇಗುಸರಾಯ್ ಪ್ರದೇಶದಿಂದ ಬಂದವರು. JNU ಮೂಲಕ ಪಿಎಚ್ಡಿ ಪೂರ್ಣಗೊಳಿಸಿದ ನಂತರ, ಕನ್ಹಯ್ಯ 2019ರಲ್ಲಿ ಸಿಪಿಐ ಟಿಕೆಟ್ ಪಡೆದು ಬೇಗುಸರಾಯ್ ಕ್ಷೇತ್ರದಿಂದ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಅವರು ಆಗ ಗೆಲ್ಲದಿದ್ದರೂ,  ರಾಜ್ಯದಲ್ಲಿ ಕೋಲಾಹಲವೊಂದನ್ನು ಖಂಡಿತಾ ಸೃಷ್ಟಿಸಿದ್ದರು. ಆದಾಗ್ಯೂ, ಕನ್ಹಯ್ಯ ಚುನಾವಣೆಯ ನಂತರ ಒಂದು ವರ್ಷ ಸಿಪಿಐನಲ್ಲಿ ಕೆಲಸ ಮಾಡಿ ನಂತರ ಕಾಂಗ್ರೆಸ್ ಸೇರಿದರು.

ಕನ್ಹಯ್ಯ ತಮ್ಮ ವಿದ್ಯಾರ್ಥಿ ಜೀವನ ಆರಂಭದಿಂದಲೂ, ಎಂದರೆ 2002ರಿಂದಲೂ ಸಂಬಂಧ ಹೊಂದಿದ್ದರಾದರೂ JNU ಓದು ಮುಗಿಸಿ ಮರಳಿ ಬಂದವರಿಗೆ ಪಕ್ಷದ ಕಾರ್ಯಶೈಲಿಯಲ್ಲಿ ಯಾವ ವಿಶೇಷವೂ ಕಾಣಲಿಲ್ಲ. ಇನ್ನು ಈ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿಯ ಕುರಿತು ಹೇಳುವುದಾದರೆ ಈ ರಾಜ್ಯದಲ್ಲಿ ಪಕ್ಷಕ್ಕೆ 1990ರಿಂದ ಇದುವರೆಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಚೈತನ್ಯ ತುಂಬಿ ಅಧಿಕಾರಕ್ಕೆ ಮರಳಿಸಬಲ್ಲ ನಾಯಕರೂ ಕಾಣುತ್ತಿಲ್ಲ. ಈ ಪರಿಸ್ಥಿತಿಯನ್ನು ಬಿಡಿಸಿ ಹೇಳುವುದಾದರೆ, ಕನ್ಹಯ್ಯಗೆ ತನಗೆ ಸರಿಹೊಂದ ಬಲ್ಲ ಪಕ್ಷ ಕಾಣುತ್ತಿರಲಿಲ್ಲ, ಅತ್ತ ಕಾಂಗ್ರೆಸ್ಸಿಗೆ ತನ್ನ ಪಕ್ಷವನ್ನು ಮತ್ತೆ ಮೇಲೆತ್ತಬಲ್ಲ ನಾಯಕ ಕಾಣುತ್ತಿರಲಿಲ್ಲ. ಇಬ್ಬರಿಗೂ ಪರಸ್ಪರ ಒಬ್ಬರಿಗೊಬ್ಬರ ಅವಶ್ಯಕತೆಯಿತ್ತು.

ಕಾಂಗ್ರೆಸ್‌ ಕನ್ಹಯ್ಯ ಅವರಲ್ಲಿ ಕಂಡ ಇನ್ನೊಂದು ಭರವಸೆಯೆಂದರೆ ಅವರ ವಾಕ್ಚಾತುರ್ಯ. ಇದು ಪಕ್ಷದ ಪಾಲಿಗೆ ಅದ್ಭುತ ಸಾಧ್ಯತೆಯಾಗಿ ಕಾಣಿಸಿತ್ತು. ಪ್ರಸ್ತುತ ತಮ್ಮ ಮಾತುಗಳಿಂದ ಜನರನ್ನು ಹಿಡಿದಿಡಬಲ್ಲ ನಾಯಕರ ಪಟ್ಟಿ ಮಾಡುವಾಗ ಖಂಡಿತವಾಗಿಯೂ ನೀವು ಕನ್ಹಯ್ಯ ಅವರ ಹೆಸರನ್ನು ಹೊರಗಿಡಲಾರಿರಿ. ಇಂದು ಬಿಜೆಪಿಯ ಹಿಂದುತ್ವವಾದಿ ರಾಷ್ಟ್ರೀಯತೆಗೆ ದಿಟ್ಟವಾಗಿ ಉತ್ತರ ನೀಡಬಲ್ಲ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಕನ್ಹಯ್ಯ ಕೂಡಾ ಒಬ್ಬರೆಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ತಮ್ಮ ತೀಕ್ಷ್ಣ ಮಾತುಗಳಿಂದ ಎದುರಾಳಿ ಪಕ್ಷದ ನಾಯಕರ ಪಕ್ಷದ ಬಾಯಿಯನ್ನು ಕಟ್ಟಿಹಾಕುವುದು ಅವರ ದೊಡ್ಡ ಬಲವಾಗಿದೆ.

ಕನ್ಹಯ್ಯ ಎದುರಾಳಿಗಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬಲ್ಲ ಧೈರ್ಯ ಇರುವ ಮನುಷ್ಯ. CAA ಮತ್ತು NRC ವಿಷಯದಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಧೈರ್ಯ ಸಾಲದೆ ಪರದಾಡುತ್ತಿರುವಾಗ ಕನ್ಹಯ್ಯ ಏಕಾಂಗಿಯಾಗಿ ರಂಗಕ್ಕೆ ಧುಮುಕಿದ್ದರು. ಅವರು ಆಗ ಸೀಮಾಂಚಲದ ಅರಾರಿಯಾ, ಪೂರ್ಣಿಯಾ, ಕಥಿಹಾರ್ ಮತ್ತು ಕಿಶನ್ಗಂಜ್‌ ಮೊದಲಾದ ಪ್ರದೇಶಗಳಲ್ಲಿ ಸಭೆ ನಡೆಸಿದರು. ಆ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನುವುದು ಇಲ್ಲಿ ಗಮನಾರ್ಹ. 2019ರಲ್ಲಿ ಬೇಗುಸರಾಯ್‌ ಕ್ಷೇತ್ರದಲ್ಲಿ ಗಿರಿರಾಜ್‌ ಸಿಂಗ್‌ ಅವರೆದುರು ಸೋತ ನಂತರ ಕನ್ಹಯ್ಯ ರಾಜಕೀಯ ಬದುಕು ಮುಗಿದೇ ಹೋಯಿತು ಎಂದುಕೊಂಡಿದ್ದ ಬಿಜೆಪಿಗೆ ಇದು ಶಾಕಿಂಗ್‌ ಆಗಿ ಪರಿಣಮಿಸುತ್ತು.

ಇದು ಕಾಂಗ್ರೆಸ್‌ ಪಕ್ಷಕ್ಕೆ ಕನ್ಹಯ್ಯ ಮೇಲಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು. ಈ ಸಭೆಗಳಿಗೆ ಬಂದ ಜನರು ತನ್ನ ಪಕ್ಷದ ಹಿಂದೆ ನಿಲ್ಲುತ್ತಾರೆನ್ನುವ ಭರವಸೆ ಕಾಂಗ್ರೆಸ್ಸಿಗೆ ಹುಟ್ಟಿಸಿತು. ಇದರೊಂದಿಗೆ ಕನ್ಹಯ್ಯ ಅಲ್ಲಿನ ಒಂದು ಸಾಮಾನ್ಯ ಕುಟುಂಬದಿಂದ ಬಂದವರು ಹೀಗಾಗಿ ಅವರಿಗೆ ಜನಸಾಮಾನ್ಯರ ಬದುಕಿನ ಮಿಡಿತ ಗೊತ್ತು. ಜೊತೆಗೆ JNU ರೀತಿಯ ವಿಶ್ವವಿದ್ಯಾಲಯದಿಂದ PHD ಪಡೆದಿರುವುದು ಅವರನ್ನು ಬೌದ್ಧಿಕ ವಲಯವೂ ಮೆಚ್ಚಿ ಸ್ವೀಕರಿಸುವಂತೆ ಮಾಡಿದೆ.

ವಿದ್ಯಾರ್ಥಿ ರಾಜಕಾರಣದಲ್ಲಿ ಕನ್ಹಯ್ಯ ಅವರ ತಳಮಟ್ಟದ ಸಂಪರ್ಕ, ಅನುಭವ ಮತ್ತು ವಾಕ್ಚಾತುರ್ಯದ ಹೊರತಾಗಿ, ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖರನ್ನಾಗಿ ಮಾಡಲು ಮತ್ತೊಂದು ಕಾರಣವಿದೆ. ಅದು ರಾಹುಲ್‌ ಗಾಂಧಿಯವರೊಂದಿಗೆ ಅವರಿಗಿರುವ ನೇರ ಸಂಪರ್ಕ. ರಾಹುಲ್‌ ಆಪ್ತ ಬಳಗದ ನೇತಾರರಲ್ಲಿ ಕನ್ಹಯ್ಯ ಕೂಡಾ ಒಬ್ಬರು. ಭಾರತ ಜೋಡೋ ಯಾತ್ರೆಯ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಯಾಣದುದ್ದಕ್ಕೂ ಅವರು ರಾಹುಲ್ ಗಾಂಧಿ ಅವರೊಂದಿಗೆ ಇದ್ದರು. ಪಕ್ಷದ ನಾಯಕತ್ವದೊಂದಿಗಿನ ಈ ನೇರ ಸಂಪರ್ಕವೂ ಅವರನ್ನು ಪಕ್ಷದಲ್ಲಿ ಒಬ್ಬ ಪ್ರಮುಖ ನಾಯಕನನ್ನಾಗಿ ಹೊರಹೊಮ್ಮಿಸಿದೆ.

You cannot copy content of this page

Exit mobile version