ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಸಿಡಿದೆದ್ದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್ ಸೋಮವಾರ ಕಾಂಗ್ರೆಸ್ ಪಕ್ಷ ಸೇರುವ ಮುನ್ಸೂಚನೆ ಸಿಕ್ಕಿದೆ.
ಕೆಲ ದಿನಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆಗಿನ ಭೇಟಿಯ ನಂತರ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹರಿದಾಡುತ್ತಿತ್ತು. ಸಧ್ಯ ಭಾನುವಾರದ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾತುಗಳನ್ನಾಡಿದ್ದಾರೆ.
ಆಯನೂರು ಮಂಜುನಾಥ್ ಅವರ ಜೊತೆ ಜೊತೆಗೆ ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೇವಲ 11,000 ಮತಗಳ ಅಂತರದಲ್ಲಿ ಬಿಜೆಪಿಯ ಬಿ.ವೈ. ವಿಜಯೇಂದ್ರಗೆ ತೀವ್ರ ಸ್ಪರ್ಧೆ ಒಡ್ಡಿದ್ದ ನಾಗರಾಜ್ ಗೌಡ ಮತ್ತು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರೂ ಕಾಂಗ್ರೆಸ್ ಸೇರಲಿದ್ದಾರೆ.
ಪಕ್ಷಾಂತರ ಪರ್ವದಲ್ಲಿ ಆಯನೂರು ಮಂಜುನಾಥ್ ಹೆಸರು ; ಜೆಡಿಎಸ್ ಗೆ ಬೈ ಹೇಳ್ತಾರಾ?
ರಾಜಕೀಯ ವಲಯದಲ್ಲಿ ಆಪರೇಷನ್ ಹಸ್ತದ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದ್ದರೂ ಚುನಾವಣೆ ನಂತರ ಈ ವರೆಗೆ ಬೇರೆ ಪಕ್ಷಗಳಿಂದ ಯಾವುದೇ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಿರಲಿಲ್ಲ. ಸಧ್ಯ ಆಯನೂರು ಮಂಜುನಾಥ್ ಸೇರ್ಪಡೆ ನಂತರ ಈಗ ಜೆಡಿಎಸ್ ಕಡೆಗೇ ಕಾಂಗ್ರೆಸ್ ನ ಮೊದಲ ಆಪರೇಷನ್ ವಿಶೇಷ ಎನ್ನಿಸಿದೆ.
ಮೂರು ದಿನಗಳ ಹಿಂದೆ ಜೆಡಿಎಸ್ ಪಕ್ಷ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ 21 ಸದಸ್ಯರ ಕೋರ್ ಕಮಿಟಿ ರಚಿಸಿತ್ತು. ಜೆಡಿಎಸ್ ನಲ್ಲೇ ಇರುವ ಹಿರಿಯ ಸದಸ್ಯರ ಪಟ್ಟಿಯಲ್ಲಿ ಆಯನೂರು ಮಂಜುನಾಥ್ ಅವರ ಹೆಸರು ಬಿಟ್ಟಿದ್ದು, ಜೆಡಿಎಸ್ ಪಕ್ಷವೇ ಆಯನೂರು ಮಂಜುನಾಥ್ ಪಕ್ಷ ಬಿಡುವ ಮುನ್ಸೂಚನೆ ಕೊಟ್ಟಿತ್ತು. ಸಧ್ಯ ಈ ಒಂದು ಸುದ್ದಿ ಅಧಿಕೃತ ಎಂಬ ಸೂಚನೆ ಸಿಕ್ಕಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಆಯನೂರು ಮಾತುಕತೆ ನಡೆಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯನೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಆಯನೂರು, ‘ಬಿಜೆಪಿ ತೊರೆದಾಗಲೇ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದೆ. ಆದರೆ, ಆಗ ಸೇರ್ಪಡೆಗೆ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವಕಾಶ ನೀಡಿದ್ದರಿಂದ ಜೆಡಿಎಸ್ ಸೇರಿದ್ದೆ’ ಎಂದರು.
‘ಪಕ್ಷ ಸೇರ್ಪಡೆ ಬಗ್ಗೆ ಅಧ್ಯಕ್ಷರ ಜೊತೆ ಒಂದು ಹಂತದ ಮಾತುಕತೆಯಾಗಿದೆ. ನಾನು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿ. ಆದರೆ, ಪಕ್ಷ ಸೇರ್ಪಡೆ ಆಗುವಾಗ ಷರತ್ತು ಹಾಕುವುದಿಲ್ಲ’ ಎಂದರು.
ಇನ್ನು ಬಿಜೆಪಿ ತೊರೆದು ಕಾಂಗ್ರೆಸ್ ನ ಕೈ ಹಿಡಿಯಲಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರ ಬೆಂಬಲಿಗರ ಬಗ್ಗೆ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಬೆಂಬಲಿಗರು ಯಾರೂ ಕಾಂಗ್ರೆಸ್ಗೆ ಹೋಗುತ್ತಿಲ್ಲ. ಜೆಡಿಎಸ್‌ನ ಕೆಲವು ಮಾಜಿ ಪಾಲಿಕೆ ಸದಸ್ಯರು ಹೋಗುತ್ತಿದ್ದಾರೆ. ಕಾಂಗ್ರೆಸ್ ಸೇರಲು ಯಾರಿಗೆ ಆಸೆ ಇದೆಯೋ ಅವರು ಹೋಗುತ್ತಾರೆ. ನನಗೆ ಪಕ್ಷದ ಮೇಲೆ ಅಸಮಾಧಾನ ಇಲ್ಲ. ಆದರೆ ಕ್ಷೇತ್ರದ ವಿಚಾರವಾಗಿ ಅಸಮಾಧಾನವಿದೆ’ ಎಂದಿದ್ದಾರೆ. ಅಷ್ಟೆ ಅಲ್ಲ, ‘ಬಿಜೆಪಿ ಪಕ್ಷ ಕಟ್ಟಲು ಪ್ರಾಮಾಣಿಕ ಶ್ರಮ ಹಾಕಿದ್ದೇನೆ. ನನಗೆ ಬೇಸರಿಸದಂತೆ ನೋಡಿಕೊಳ್ಳುವುದು ಬಿಜೆಪಿ ಜವಾಬ್ದಾರಿ, ಈ ಬಗ್ಗೆ ಪಕ್ಷದ ನಾಯಕರೂ ಒಪ್ಪಿದ್ದಾರೆ’ ಎಂದು ಶಾಸಕ ಸೋಮಶೇಖರ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.