ಪಾಟ್ನಾ: ಕನ್ಹಯ್ಯಾ ಕುಮಾರ್ ಅವರಿಗೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ನೀಡಿದೆ. ಕಾಂಗ್ರೆಸ್ ಕನ್ಹಯ್ಯಾ ಕುಮಾರ್ ಅವರನ್ನು ಪಕ್ಷದ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಉಸ್ತುವಾರಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಕನ್ಹಯ್ಯಾ ಕುಮಾರ್ ಅವರನ್ನು ಎನ್‌ಎಸ್‌ಯುಐ ಉಸ್ತುವಾರಿ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುವಾರದಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಕ್ಷಣವೇ ಜಾರಿಗೆ ಬರುವಂತೆ ಕನ್ಹಯ್ಯಾ ಕುಮಾರ್ ಅವರನ್ನು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಉಸ್ತುವಾರಿಯನ್ನಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಕನ್ಹಯ್ಯಾ ಕುಮಾರ್ ಅವರಿಗೆ ದೆಹಲಿ ಅಥವಾ ಬಿಹಾರದ ರಾಜ್ಯ ಉಸ್ತುವಾರಿಯಂತಹ ಕೆಲವು ಪ್ರಮುಖ ಹುದ್ದೆಯ ಜವಾಬ್ದಾರಿಯನ್ನು ಪಕ್ಷವು ನೀಡಬಹುದು ಎಂಬ ಚರ್ಚೆಗಳು ನಡೆಯುತ್ತಿತ್ತು. ಆದರೆ, ಕನ್ಹಯ್ಯ ಕುಮಾರ್ ಅವರ ರಾಜಕೀಯ ಅನುಭವವನ್ನು ಪರಿಗಣಿಸಿ, ಪಕ್ಷದ ಉನ್ನತ ನಾಯಕರು ಇದಕ್ಕೆ ಒಲವು ತೋರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಎನ್ ಎಸ್ ಯುಐ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ ಅವರ ಅನುಭವವನ್ನು ಪರಿಗಣಿಸಿ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಜೆಎನ್‌ಯುನಲ್ಲಿ ಓದುತ್ತಿರುವ ಸಮಯದಲ್ಲಿ ವಿದ್ಯಾರ್ಥಿ ರಾಜಕೀಯ ಕಣಕ್ಕೆ ಅವರು ಬಂದಿದ್ದರು. ಜೆಎನ್‌ಯುನಲ್ಲಿ ಕನ್ಹಯ್ಯಾ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅಧ್ಯಕ್ಷರಾಗಿದ್ದರು.