Home ಸಂಪಾದಕೀಯ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

0

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ  ಈ ಹಿಂದೆ ಇದ್ದವರಲ್ಲಿ ಹಲವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಎಸ್‌ ಜಿ ಸಿದ್ದರಾಮಯ್ಯ ಅವರು ಹಿಂದಿ ಹೇರಿಕೆಯ ಕುರಿತಂತೆ, ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ ಯಾವುದೇ ಗುರುತರವಾದ ಪ್ರಯತ್ನ ನಡೆಯಲಿಲ್ಲ. ಈಗ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಸೂಕ್ತರಾದವರನ್ನು, ಕನ್ನಡದ ಕೆಲಸಕ್ಕೆ ಬದ್ಧತೆ ಮತ್ತು ಉತ್ಸಾಹ ಹೊಂದಿರುವವರನ್ನು ನೇಮಕ ಮಾಡಲಿ. ಈ ಮೂಲಕ ಕನ್ನಡದ ಕೀರ್ತಿ ಎಲ್ಲೆಡೆ ಪಸರಿಸಲಿ.

ಇದೀಗ ಕರ್ನಾಟಕ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯು ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಇನ್ನಷ್ಟು ಬಲಪಡಿಸಲಿದೆ. ಕನ್ನಡವೂ ಸೇರಿದಂತೆ ಇತರ ಅನೇಕ ದೇಸೀ ಭಾಷೆಗಳನ್ನು ಅದು ಸದ್ಯಕ್ಕೆ ಹಿಂದಕ್ಕೆ ತಳ್ಳಿದೆ. ದೇಸೀ ಭಾಷೆಗಳ ಅಭಿವೃದ್ಧಿಯ ಜವಾಬ್ದಾರಿಯು ರಾಜ್ಯ ಸರಕಾರದ್ದು ಎಂದಷ್ಟೇ ಹೇಳಿ ಅದು ಹಿಂದಿಯನ್ನು ಎಲ್ಲರೂ ಓದುವಂತೆ ಮಾಡಲು ಕ್ರಮ ಕೈಕೊಳ್ಳುತ್ತಿದೆ. ಆದರೆ ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರೀಂ ಕೋರ್ಟ್ 2015 ರಲ್ಲಿಯೇ ಅದನ್ನು   ತಿರಸ್ಕರಿಸಿ, ಈ ತೀರ್ಮಾನವು ಸಂವಿಧಾನದ (19ಎ) ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿತು. ಹಾಗಾಗಿ  ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ಮಾಡದ ಹೊರತು ಕನ್ನಡದಲ್ಲಿ ಬೋಧನೆ ಸಾಧ್ಯವೇ ಇಲ್ಲ.

ಇದರ ಜೊತೆಗೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ‘ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳು ಸಾಯುತ್ತಿರುವುದು. ಈ ಬಗ್ಗೆ ಸರಕಾರಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆದ ಹಾಗೆ, ಹಿನ್ನಡೆ ಅನುಭವಿಸುತ್ತಿರುವ ಕನ್ನಡದಂಥ ಭಾಷೆಯ ಉಳಿಯುವಿಕೆಯ ಕುರಿತು ಗಂಭೀರ ಸಂವಾದ ನಡೆಯುತ್ತಿಲ್ಲ. ಕೊರಗ, ಬ್ಯಾರಿ, ಕೊಡವ, ಬಡಗ, ಮೊದಲಾದ ಭಾಷೆಗಳು ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ.

1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇಕಡಾ 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇಕಡಾ 56.6 ಆಗಿದ್ದರೆ ತಮಿಳಿನಲ್ಲಿ ಶೇಕಡಾ 6 ಆಗಿದೆ. ಈ ನಡುವೆ ಸುಮಾರು 172 ಭಾಷೆಗಳು ಅಪಾಯದ ಅಂಚಿನಲ್ಲಿವೆ. ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ನಮ್ಮ ಸರಕಾರಗಳು  ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಸುಮಾರು 72 ಭಾಷೆಗಳಿರುವ ಕರ್ನಾಟಕಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆ ಅತ್ಯಂತ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ. ಇವುಗಳ ಜೊತೆಗೆ ನಾಡಿನ ಕೋಮುವಾದೀಕರಣ ಪ್ರಕ್ರಿಯೆಯೂ ನಡೆಯುತ್ತಿದ್ದು, ಕರ್ನಾಟಕ ಎಂಬ ‘ಸರ್ವಜನಾಂಗದ ಶಾಂತಿಯ ತೋಟ’ದ ಸೌಹಾರ್ದ ಪರಂಪರೆಯ ಮೇಲೆ ಘೋರ ಪರಿಣಾಮ ಉಂಟುಮಾಡಿದೆ. 

ಈ ಸವಾಲುಗಳನ್ನು ಮತ್ತು ಅಪಾಯಗಳನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿಕೊಂಡು, ಕನ್ನಡವನ್ನು ಸಮಕಾಲೀನಗೊಳಿಸುವ ಕೆಲಸ ಇಂದು ಅತ್ಯಗತ್ಯವಾಗಿ ನಡೆಯಬೇಕಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು, ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳ ನೆರವನ್ನು ಪಡೆದುಕೊಂಡು, ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಾ ಕನ್ನಡ ಸಂಸ್ಕೃತಿಯ ಸಬಲೀಕರಣವನ್ನು ಸಾಧಿಸಬೇಕಾಗಿದೆ. ಕೋಮುವಾದದ ಹರಡುವಿಕೆಯನ್ನು ತಡೆಯುವ ದೃಷ್ಟಿಯಿಂದ, ಜಿಲ್ಲಾ ಮಟ್ಟದಲ್ಲಿ ಯುವಕರಿಗೆ ಕರ್ನಾಟಕ ಸೌಹಾರ್ದ ಪರಂಪರೆಯ ಕುರಿತು ಕಮ್ಮಟಗಳ ಆಯೋಜನೆ, ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದ ವಿದ್ಯಾರ್ಥಿಗಳು ಸುಲಭವಾಗಿ ಓದಲು ಸಾಧ್ಯವಾಗುವಂತೆ ಕರ್ನಾಟಕದ ಸೌಹಾರ್ದ ಪರಂಪರೆಯ ಕುರಿತು ಪುಸ್ತಕಗಳ ಪ್ರಕಟಣೆ, ಪ್ರಾದೇಶಿಕ ಮಟ್ಟದಲ್ಲಿ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸಾರುವ ಕಲಾ ಪ್ರದರ್ಶನಗಳ ಆಯೋಜನೆ ಹೀಗೆ ನಮ್ಮ ಬಹುಮುಖೀ ಪರಂಪರೆಯ ಕುರಿತು ಹೊಸ ತಲೆಮಾರಿನ ಜನರಿಗೆ ತಿಳಿಸುವ ಕೆಲಸ ಅಗತ್ಯವಾಗಿ ಆಗಬೇಕು. ಬದಲಾಗುತ್ತಿರುವ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ  ಆಲೋಚನೆ ಬರುವಂತೆ ಮಾಡುವುದು, ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ಬೆಳೆಸುವುದು ಇತ್ಯಾದಿ ಕೆಲಸಗಳು ತುರ್ತಾಗಿ ನಡೆಯಬೇಕು.

ಯೋಗ್ಯ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭದ್ರವಾದ ನೆಲೆಯನ್ನು ಕಟ್ಟಲು ಮೇಲಿನ ಕೆಲಸಗಳು ಬಹಳ ಮುಖ್ಯ. ಈ ಕೆಲಸ ಮಾಡುವಲ್ಲಿ ಕನ್ನಡ ಪ್ರಾಧಿಕಾರವು ನಿರ್ಣಾಯಕ ಪಾತ್ರವನ್ನು ವಹಿಸಬಲ್ಲುದು. ಇದು ಸಾಧ‍್ಯವಾಗಬೇಕಾದರೆ, ಅದರ ನೇತೃತ್ವವು ಯೋಗ್ಯರ ಕೈಗೆ ಹೋಗಬೇಕು. ಇಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯ ಇರುವ ಅನೇಕರು ನಮ್ಮಲ್ಲಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆ, ನಟರಾಜ್‌ ಹುಳಿಯಾರ್‌, ಆಶಾದೇವಿ, ರೂಪಾ ಹಾಸನ, ರಹಮತ್‌ ತರೀಕೆರೆ ತಕ್ಷಣ ನೆನಪಿಗೆ ಬರುವ ಕೆಲವು ಹೆಸರುಗಳು. ಇವರಲ್ಲಿ ಪ್ರೊ.ಬಿಳಿಮಲೆಯವರು ಕನ್ನಡದ ಕೈಂಕರ್ಯಗಳ ಕುರಿತು ಖಚಿತತೆ ಹಾಗೂ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದವರು.

1998 ರಿಂದ ದೆಹಲಿಯ ‘ಅಮೆರಿಕನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್’ ನ ನಿರ್ದೇಶಕರಾಗಿ 17 ವರ್ಷ ಕೆಲಸ ಮಾಡಿರುವ ಅವರಿಗೆ ದೇಶ ವಿದೇಶಗಳ ಅನೇಕ ವಿವಿಗಳ ನೇರ ಸಂಪರ್ಕವಿದೆ. 2005 ರಿಂದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸ್ಥಾಪಕ ಪ್ರಾಧ‍್ಯಾಪಕ ಮತ್ತು ಮುಖ್ಯಸ್ಥರಾಗಿ ರಾಜಧಾನಿಯಲ್ಲಿ ಕರ್ನಾಟಕದ ಪ್ರತಿನಿಧೀಕರಣವನ್ನು ಸಬಲಗೊಳಿಸುವ ಕೆಲಸ ಮಾಡಿದ್ದಾರೆ. ಕನ್ನಡದ ಅಭಿಜಾತ ಕೃತಿಗಳಾದ ‘ವಡ್ಡಾರಾಧನೆ’, ‘ಗದಾಯುದ್ಧ’, ‘ಕವಿರಾಜ ಮಾರ್ಗ’ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಕನ್ನಡ ಕರ್ನಾಟಕದ ಕುರಿತು ಒಟ್ಟು 27ಕೃತಿಗಳನ್ನು ಬರೆದಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಸಂಘದ ಹೊಸ ಕಟ್ಟಡವನ್ನು ಕಟ್ಟಿ ಬೆಳೆಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ  ಈ ಹಿಂದೆ ಇದ್ದವರಲ್ಲಿ ಹಲವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಉದಾಹರಣೆಗೆ ಎಸ್‌ ಜಿ ಸಿದ್ದರಾಮಯ್ಯ ಅವರು ಹಿಂದಿ ಹೇರಿಕೆಯ ಕುರಿತಂತೆ, ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ ಯಾವುದೇ ಗುರುತರವಾದ ಪ್ರಯತ್ನ ನಡೆಯಲಿಲ್ಲ. ಈಗ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಸೂಕ್ತರಾದವರನ್ನು, ಕನ್ನಡದ ಕೆಲಸಕ್ಕೆ ಬದ್ಧತೆ ಮತ್ತು ಉತ್ಸಾಹ ಹೊಂದಿರುವವರನ್ನು ನೇಮಕ ಮಾಡಲಿ. ಈ ಮೂಲಕ ಕನ್ನಡದ ಕೀರ್ತಿ ಎಲ್ಲೆಡೆ ಪಸರಿಸಲಿ.

You cannot copy content of this page

Exit mobile version