Home ಅಂಕಣ ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

0

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ ಪ್ರಶ್ನಾತೀತವೇನಲ್ಲ. ಮಾಧ್ಯಮವೂ ವಿಮರ್ಶೆಗೆ ಒಳಪಡಬೇಕು, ಯಾವುದನ್ನು ಮಾಧ್ಯಮ ತಪ್ಪು ಎಂದು ಹೇಳುತ್ತದೆಯೋ ಅದೇ ತಪ್ಪನ್ನು ಮಾಧ್ಯಮವೇ ಮಾಡಕೂಡದು ಎಂದು ಸಮಾಜ ನಿರೀಕ್ಷಿಸುತ್ತದೆ. ಆದರೆ ಈಗ ಹಾಗಾಗುತ್ತಿಲ್ಲ. ಮಾಧ್ಯಮ ಪ್ರಶ್ನಾತೀತವಾಗಿಯೇ ಇರಲು ಬಯಸುತ್ತದೆ. ಈ ಅಹಂಕಾರಕ್ಕೆ ಸ್ಪಷ್ಟ ಉದಾಹರಣೆ ಪೀಪಲ್ ಮೀಡಿಯಾ ಬಯಲಿಗೆಳೆದ ದೀಪಾವಳಿ ಭಕ್ಷೀಸು ಹಗರಣ.

ದೀಪಾವಳಿ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನೇತಾರರು, ಸರ್ಕಾರವನ್ನು ನಡೆಸುವವರು ಪತ್ರಕರ್ತರಿಗೆ ಸಿಹಿ ತಿಂಡಿ ಹಂಚುವ ಒಂದು ಸಂಪ್ರದಾಯ ಜಾರಿಯಲ್ಲಿದೆ. ಈ ಬಾರಿ ಸಿಹಿಯೊಂದಿಗೆ ಲಕ್ಷಗಟ್ಟಲೆ ಹಣವನ್ನೂ ಇಟ್ಟು ಹಂಚಲಾಯಿತು. ಇದನ್ನು ಹಂಚಿದವರು ಸ್ವತಃ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ. ಇದು ಪತ್ರಕರ್ತರನ್ನು ನೇರವಾಗಿ ಆಮಿಷಕ್ಕೆ ಒಳಪಡಿಸುವ ಭ್ರಷ್ಟಾಚಾರ‌. ನಮ್ಮ ಕಾನೂನು ಕಾಯ್ದೆಗಳ ಅಡಿಯಲ್ಲಿ ಇದೊಂದು ಅಪರಾಧ. ಮೇಲಾಗಿ ಇದು ರಾಜಕಾರಣಿಗಳು-ಪತ್ರಕರ್ತರ ನಡುವಿನ ಅನೈತಿಕ ಕೂಡಾವಳಿಗೊಂದು ಉದಾಹರಣೆ. ಆದರೆ ಹಗರಣ ಬಯಲಾದ ನಂತರ ನಡೆಯುತ್ತಿರುವ ಘಟನೆಗಳು ಗಾಬರಿ ಹುಟ್ಟಿಸುವಂತಿವೆ.

ಪತ್ರಕರ್ತರೆಲ್ಲರೂ ಭ್ರಷ್ಟರಲ್ಲ. ಆದರೆ ಪತ್ರಕರ್ತರಲ್ಲಿ ಭ್ರಷ್ಟರಿದ್ದಾರೆ ಮತ್ತು ಆ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದನ್ನು ಪ್ರಾಮಾಣಿಕ ಪತ್ರಕರ್ತರೂ ಒಪ್ಪಿಕೊಳ್ಳುತ್ತಾರೆ‌. ಲಾಗಾಯ್ತಿನಿಂದಲೂ ರಾಜಕಾರಣಿಗಳಿಂದ ಬೆಲೆ ಬಾಳುವ ಉಡುಗೊರೆ, ಹಣ ಪಡೆದವರ ಸಂಖ್ಯೆಯೇನು ಕಡಿಮೆ ಇಲ್ಲ. ತಮ್ಮ ಪ್ರಭಾವ ಬಳಸಿ ರಾಜಕಾರಣಿಗಳಿಂದ ಬೇರೆ ಬೇರೆ ರೀತಿಯ ಲಾಭ ಪಡೆದ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಆಳುವವರಿಗೆ ಮಾರಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಇದು ನಿಲ್ಲಬೇಕು ಎಂದು ಪತ್ರಕರ್ತರ ವಲಯದಲ್ಲಿನ ಪ್ರಾಮಾಣಿಕರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಆದರೆ ಈ ಧ್ವನಿಗಳು ದುರ್ಬಲವಾಗಿವೆ.  ಈ ಧ್ವನಿಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತಿಲ್ಲ.

ಹಿಂದೆ ಮೆರಾಜುದ್ದೀನ್ ಪಟೇಲ್ ಅವರು ಇಂಗ್ಲಿಷ್ ಪತ್ರಿಕೆಯ ವರದಿಗಾರ್ತಿಯೊಬ್ಬರಿಗೆ ಹಣ ನೀಡಿದಾಗ ಅವರು ಅದನ್ನು ಅಲ್ಲೇ ಪ್ರತಿಭಟಿಸಿ ಸಂಸ್ಥೆಯ ಗಮನಕ್ಕೆ ತಂದಿದ್ದರು. ಆ ಮಾಧ್ಯಮವೂ ಕೂಡ ಈ ಕುರಿತು ವರದಿಯೊಂದನ್ನು ಪ್ರಕಟಿಸಿ, ಸಚಿವರ ನಿಲುವನ್ನು ಖಂಡಿಸಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿಗಳ ಕಚೇರಿಯಿಂದ ಭಕ್ಷೀಸು ಬಂದಾಗ ಅದನ್ನು ತಿರಸ್ಕರಿಸಿದ ಮಾಧ್ಯಮಗಳು ಇದನ್ನೊಂದು ಅನೈತಿಕ ಘಟನೆ, ಭ್ರಷ್ಟಾಚಾರ ಎಂದು ಪರಿಗಣಿಸಿ ಸುದ್ದಿ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಹಣ ಹಿಂದಿರುಗಿಸಿದ ಪತ್ರಕರ್ತರು ಈ ವಿಷಯವನ್ನು ವಾಟ್ಸಾಪ್ ಗಳಲ್ಲಿ ಹಂಚಿಕೊಂಡರಾದರೂ ಮಾಧ್ಯಮಗಳು ಬಹಿರಂಗವಾಗಿ ಆದ ಘಟನೆಯನ್ನು ಹೇಳಿಕೊಳ್ಳುವ ಧೈರ್ಯ ತೋರಬೇಕಿತ್ತು. ಅದು ಆಗಲಿಲ್ಲ.

ಪ್ರಕರಣ ಈಗ ಲೋಕಾಯುಕ್ತರ ಮುಂದಿದೆ. ಜನಾಧಿಕಾರ ಸಂಘರ್ಷ ಪರಿಷತ್ ದೂರು ನೀಡಿದೆ. ಆದರೆ ಹಲವು ಪ್ರಶ್ನೆಗಳು ಹಾಗೇ ಉಳಿದಿವೆ. ದೀಪಾವಳಿ ಸಿಹಿತಿಂಡಿ ಪೊಟ್ಟಣದಲ್ಲಿ ಹಣ ಇದ್ದಿದ್ದು ಪತ್ರಕರ್ತರಿಗೆ, ಮಾಧ್ಯಮ ಸಂಸ್ಥೆಗಳಿಗೆ ಒಂದು ಆಘಾತಕಾರಿ ಸುದ್ದಿ ಎಂದು ಯಾಕೆ ಅನಿಸಲಿಲ್ಲ? ಇದು ಗಂಭೀರ ರೂಪದ ಭ್ರಷ್ಟಾಚಾರ ಪ್ರಕರಣ ಎಂದು ಅವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಹಲವಾರು ಮಾಧ್ಯಮಗಳಲ್ಲಿ ಕೆಲಸ ಮಾಡಿದವರು, ವರದಿ ಮಾತ್ರವಲ್ಲ, ಅಂಕಣಗಳನ್ನೂ ಬರೆದವರು. ಅವರು ಮುಗ್ಧರೂ ಅಲ್ಲ ಅಮಾಯಕರೂ ಅಲ್ಲ. ಸಿಹಿತಿಂಡಿಯಲ್ಲಿ ಹಣವಿರುವುದನ್ನು ಹೇಳಿಯೇ ಅವರು ಪತ್ರಕರ್ತರಿಗೆ ವಿತರಿಸಿದ್ದಾರೆ. ಹೀಗೆ ಹಣ ಕೊಡುವುದು ಭ್ರಷ್ಟಾಚಾರವೆಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ತಾವು ದೀಪಾವಳಿ ಸಿಹಿಯ ಜೊತೆ ಹಣ ಕೊಡಲು ಯಾರಿಗೂ ನಿರ್ದೇಶನ ನೀಡಿರಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳ ಗಮನಕ್ಕೆ ಬರದಂತೆ ಮುಖ್ಯಮಂತ್ರಿಗಳ ಕಚೇರಿ ಇಂಥ ದುಸ್ಸಾಹಸ ಮಾಡಲು ಸಾಧ್ಯವೇ? ಒಂದು ವೇಳೆ ಇಂಥ ದುಸ್ಸಾಹಸವನ್ನು ಯಾರಾದರೂ ಮಾಡಿದ್ದರೆ ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ? ಇದೀಗ ದಿ ಫೈಲ್‌ ಪತ್ರಿಕೆಯಲ್ಲಿ ವರದಿಯಾದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಹಂಚಿಕೆಯಾಗಿರುವ ಕಾರನ್ನು (ನಂ. KA 01- G 5898) ಕೆ ಆರ್‌ ಎಸ್‌ ಕಾರ್ಯಕರ್ತರೊಬ್ಬರು ವಿಚಾರಿಸಿದ್ದರು. ಆಗ ಕಾರಿನಲ್ಲಿದ್ದವರು ಇದು ಸಿಎಂ ಕಚೇರಿಯಿಂದ ದೀಪಾವಳಿ ಉಡುಗೊರೆ ನೀಡಲು ಹೋಗುತ್ತಿರುವುದಾಗಿ ಹೇಳಿದ್ದರು. ಹೀಗೆ ಭಕ್ಷೀಸನ್ನು ಮುಖ್ಯಮಂತ್ರಿಗಳ ಸಚಿವಾಲಯದ ವಾಹನದಲ್ಲೇ ಆಯ್ದ ಪತ್ರಕರ್ತರ ಮನೆಗಳಿಗೆ ತೆರಳಿ ಉಡುಗೊರೆ ಹಂಚಲಾಗಿದೆ ಎಂಬುದಕ್ಕೆ ಬಲವಾದ ಪುರಾವೆಯೂ ಬಯಲಾಗಿವೆ. ಇಷ್ಟೆಲ್ಲಾ ಸಾಕ್ಷಿಗಳಿರುವಾಗಲೂ ಸಿ ಎಂ ಬೊಮ್ಮಾಯಿಯವರು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರಲಿಲ್ಲ ಮಾತ್ರವಲ್ಲ ಪರೋಕ್ಷವಾಗಿ ಈ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷದವರು ಹಿಂದೆ ಪತ್ರಕರ್ತರಿಗೆ ಲ್ಯಾಪ್ ಟಾಪ್, ಐ ಫೋನ್, ಬಂಗಾರದ ಉಂಗುರಗಳನ್ನು ಪತ್ರಕರ್ತರಿಗೆ ಕೊಟ್ಟಿದ್ದರು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಭ್ರಷ್ಟಾಚಾರ ನಡೆಸಿದರು ಎಂದು ನೀವು ಭ್ರಷ್ಟಾಚಾರ ನಡೆಸುವಿರಾ? ಅವರು ಭ್ರಷ್ಟಾಚಾರ ಮಾಡಿದ್ದು, ನೀವು ಭ್ರಷ್ಟಾಚಾರ ನಡೆಸಲು ಸಿಕ್ಕ ಲೈಸೆನ್ಸ್ ಆಗುವುದು ಹೇಗೆ? ಅವರು ಐ ಫೋನು, ಲ್ಯಾಪ್ ಟಾಪ್, ಬಂಗಾರದ ಉಂಗುರ ಕೊಡುವಾಗ ನೀವೇಕೆ ಸುಮ್ಮನಿದ್ದಿರಿ? ನೀವೇಕೆ ಈ ಭ್ರಷ್ಟಾಚಾರವನ್ನು ಸಹಿಸಿಕೊಂಡಿದ್ದಿರಿ? ಒಂದೊಮ್ಮೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹೀಗೆಲ್ಲಾ ನಡೆದಿದ್ದರೆ ಈಗ ನಿಮ್ಮದೇ ಅಧಿಕಾರವಿರುವಾಗ ತನಿಖೆ ನಡೆಸಿ ಭ್ರಷ್ಟಾಚಾರ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲು ನಿಮಗೆ ಯಾರು ತಡೆಯಾಗಿದ್ದಾರೆ?

ಮಾಧ್ಯಮ ಸಂಸ್ಥೆಗಳು ಮೌನ ಮುರಿಯಬೇಕು. ಸಾಮಾನ್ಯ ಜನರಿಗೆ ಕೇವಲ ರಾಜಕಾರಣಿಗಳ ಮೇಲೆ ಅಸಹನೆ ಇದೆ ಎಂದು ಭಾವಿಸಬೇಡಿ. ಅವರು ಪತ್ರಕರ್ತರ ಮೇಲಿನ ನಂಬಿಕೆಯನ್ನೂ ಕಳೆದುಕೊಂಡಿದ್ದಾರೆ. ಇದರಿಂದ ನೋವು ಅನುಭವಿಸುತ್ತ ಇರುವವರು ನಿಷ್ಠೆಯಿಂದ ವೃತ್ತಿಧರ್ಮ ಅನುಸರಿಸುತ್ತಿರುವ ಪ್ರಾಮಾಣಿಕ ಪತ್ರಕರ್ತರು. ಹಿಂದೆ ಇಂಥ ಪ್ರಕರಣಗಳು ನಡೆದಾಗ ನೀವು ಅದನ್ನು ಬರೆಯದೇ ಮುಚ್ಚಿಡಬಹುದಿತ್ತು. ಆದರೆ ಈಗ ಹಾಗಲ್ಲ, ಜನರೇ ಮಾಧ್ಯಮವಾಗಿದ್ದಾರೆ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ದೀಪಾವಳಿ ಭಕ್ಷೀಸು ಹಗರಣ ಮೂಡಿಸಿದ ಸಂಚಲನವೇ ಸಾಕ್ಷಿ. ಮುಖ್ಯವಾಹಿನಿ ಮಾಧ್ಯಮ ಎನಿಸಿಕೊಂಡವು ಒಂದೇ ಒಂದು ಸಾಲು ಈ ಬಗ್ಗೆ ಬರೆಯದೇ ಇದ್ದರೂ ಹೇಗೆ ಇದು ರಾಜ್ಯದ ಜನತೆಯನ್ನು ಅಷ್ಟು ವ್ಯಾಪಕವಾಗಿ ತಲುಪಿತು? ಇದನ್ನು ಪತ್ರಕರ್ತರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಭ್ರಷ್ಟಾಚಾರ ಯಾರು ಮಾಡಿದರೂ ತಪ್ಪು. ಅದರಲ್ಲೂ ಪ್ರಜಾಪ್ರಭುತ್ವದ ಕಾವಲಿಗೆ ಇದ್ದೇವೆಂದು ಹೇಳಿಕೊಳ್ಳುವ ಮಾಧ್ಯಮ ಅದನ್ನು ಮಾಡಿದರೆ ಮಹಾಪರಾಧ. ನೀವೂ ಇದರ ಸುಳಿಯಲ್ಲಿ ಇದ್ದೀರೆಂದರೆ, ಯಾವ ನೈತಿಕತೆಯಿಂದ ನಿಮ್ಮ ವೃತ್ತಿ ಮಾಡುತ್ತೀರಿ?

ರಾಜಕಾರಣಿಗಳೂ ಕೂಡ ಭ್ರಷ್ಟ ಪತ್ರಕರ್ತರನ್ನು ದೂರವಿಡಬೇಕು. ಗಿಫ್ಟ್ ಕೊಡುವ ನೀಚ ಸಂಪ್ರದಾಯವನ್ನು ನಿಲ್ಲಿಸಬೇಕು. ಇದು ನೇರವಾದ ಭ್ರಷ್ಟಾಚಾರ ಎಂಬುದು ನಿಮಗೆ ಗೊತ್ತಿಲ್ಲದೇನು ಇಲ್ಲ. ಪತ್ರಕರ್ತರಿಗೆ ಅವರು ಮಾಡುವ ಕೆಲಸಕ್ಕೆ ಸಂಸ್ಥೆಗಳಲ್ಲಿ ಸಂಬಳ ಕೊಡುತ್ತಾರೆ. ಬಡ ಪತ್ರಕರ್ತರಿಗಾಗಿ ಸರ್ಕಾರ ಕೆಲವೊಂದು ಸೌಲಭ್ಯಗಳನ್ನೂ ನೀಡುತ್ತಿದೆ. ಅದರಿಂದಾಚೆಗೆ ನೀವು ಏನೇ ಮಾಡಿದರೂ ಅದು ಭ್ರಷ್ಟಾಚಾರ.

ಮುಖ್ಯಮಂತ್ರಿಗಳ ಕಚೇರಿಯಿಂದ ಲಕ್ಷಗಟ್ಟಲೆ ಕ್ಯಾಶ್ ವಿತರಿಸಿದ ಘಟನೆಯ ಜೊತೆಯೇ ಆರೋಗ್ಯ ಸಚಿವ ಡಿ.ಸುಧಾಕರ್ ಪತ್ರಕರ್ತರಿಗೆ ಸ್ಕಾಚ್ ವಿಸ್ಕಿ, ವಾಚ್ ಇತ್ಯಾದಿ ದುಬಾರಿ ಕೊಡುಗೆಗಳ ಗಿಫ್ಟ್ ಹ್ಯಾಂಪರ್ ಕೊಟ್ಟು ಸುದ್ದಿಯಾದರು. ಅವರ ಸಮರ್ಥನೆಯೂ ವಿಚಿತ್ರವಾಗಿತ್ತು. ಗಿಫ್ಟ್ ಕೊಡುವುದು ಹಿಂದೂ ಸಂಪ್ರದಾಯ ಎಂದರು ಅವರು. ಹಬ್ಬಕ್ಕೆ ಹೆಂಡ ಹಂಚುವುದು ಹಿಂದೂ ಸಂಪ್ರದಾಯವೇ? ಹಿಂದುತ್ವದ ಠೇಕೇದಾರಿ ವಹಿಸಿಕೊಂಡವರೇ ಹೇಳಬೇಕು.

ಭ್ರಷ್ಟಾಚಾರದಲ್ಲಿ ತೊಡಗಿದವರು ಸಿಕ್ಕಿಬಿದ್ದಾಗ ಕನಿಷ್ಠ ಲಜ್ಜೆಯಿಂದ ತಲೆ ತಗ್ಗಿಸದೆ, ಸಮರ್ಥಿಸಿಕೊಂಡು ಹೂಂಕರಿಸುತ್ತಾರೆಂದರೆ ಏನರ್ಥ? ಇಲ್ಲಿ ಕಾನೂನು ಕಾಯ್ದೆಗಳಿಗೆ ಬೆಲೆಯೇ ಇಲ್ಲವೇ? ಜನಪ್ರತಿನಿಧಿಗಳು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ  ನೈತಿಕ ನಡಾವಳಿಗಳು ಸತ್ತೇ ಹೋದವೇ? ನಾವು ಯಾವ ಸಮಾಜವನ್ನು ಕಟ್ಟಲು ಹೊರಟಿದ್ದೇವೆ?

ದೀಪಾವಳಿ ಭಕ್ಷೀಸು ಹಗರಣದ ಸಂಪೂರ್ಣ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಪೀಪಲ್ ಮೀಡಿಯಾ ಆಗ್ರಹ.

You cannot copy content of this page

Exit mobile version