Home ಬೆಂಗಳೂರು ಕರವೇ ರಾಜ್ಯೋತ್ಸವ: ಕನ್ನಡವನ್ನು ಪ್ರೀತಿಸಿ, ಬಳಸಿ

ಕರವೇ ರಾಜ್ಯೋತ್ಸವ: ಕನ್ನಡವನ್ನು ಪ್ರೀತಿಸಿ, ಬಳಸಿ

0

ಬೆಂಗಳೂರು: ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಇಂದು ಅಂದರೆ ನವೆಂಬರ್ 1ನೇ ತಾರೀಖು ಕೂಡ ಕರವೇ ಮುಖ್ಯ ಕಛೇರಿ ಬಳಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯ್ತು.

ಗಾಂಧಿನಗರದ ಕಚೇರಿಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ‌ ಮಾತನಾಡಿದ ಅವರು ಕನ್ನಡವು ಪ್ರತಿಯೊಬ್ಬ ಕನ್ನಡಿಗರ ಹೃದಯದ ಭಾಷೆಯಾಗಬೇಕು ಎಂದರು.

ಧ್ವಜಾರೋಹಣ ಮಾಡಿ ಮಾತನಾಡಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ‌ರಾದ ಡಾ.ಸಿ.ಎನ್.ಮಂಜುನಾಥ್ ಅವರು, ನಮ್ಮದು ವೈಭವದ ಪರಂಪರೆಯ ನಾಡು, ನಾವು ಎಷ್ಟೇ ದೊಡ್ಡವರಾದರೂ ಎಲ್ಲೇ ಇದ್ದರೂ ಕನ್ನಡವನ್ನು ಪ್ರೀತಿಸಬೇಕು, ಕನ್ನಡವನ್ನೇ ಬಳಸಬೇಕು ಎಂದು ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿ ರಾಜ್ಯೋತ್ಸವವನ್ನು ನಾವು ವಿಶಿಷ್ಠ ರೀತಿಯಿಂದ ಆಚರಿಸಿದೆವು. 41 ವರ್ಷದ ಕೂಲಿ ಕಾರ್ಮಿಕನೊಬ್ಬನಿಗೆ ಹೃದಯ ಕಸಿ (ಟ್ರಾನ್ಸ್ ಪ್ಲಾಂಟ್) ಮಾಡಿದೆವು. ಇಂಥ ಸಂಭ್ರಮಗಳು ನಮಗೆ ಸಾರ್ಥಕ ಭಾವ ಮೂಡಿಸುತ್ತವೆ ಎಂದು ತಿಳಿಸಿದರು.

ಕನ್ನಡದ ಬಳಕೆಯೇ ಕಡಿಮೆಯಾಗಿ ಇಂಗ್ಲಿಷ್ ಮೆರೆಯುತ್ತಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಉಳಿಸುವ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಇಂದು ಕನ್ನಡ ಉಳಿದಿದೆ ಎಂದರೆ ಅದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರಣ ಎಂದರು. ಕರವೇ ಮುಖಂಡರು, ಕಾರ್ಯಕರ್ತರ ಹೃದಯಗಳು ಪ್ರತಿನಿತ್ಯ ಕನ್ನಡಿಗರಿಗಾಗಿ, ಕರ್ನಾಟಕಕ್ಕಾಗಿ ಮಿಡಿಯುತ್ತಿವೆ. ಅದು ಸಂತೋಷದ ವಿಷಯ ಎಂದು ತಿಳಿಸಿದರು.

ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಅಧ್ಯಕ್ಷತೆ ವಹಿಸಿ‌ ಮಾತನಾಡಿ‌ ಎಸ್ ಎಸ್ ಸಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು, ಕನ್ನಡಿಗರಿಗೆ ಉದ್ಯೋಗ ನಡೆಯಬೇಕು, ಇಲ್ಲವಾದಲ್ಲಿ ಸರ್ಕಾರ ತೀವ್ರ ರೂಪದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ದೇಶ ಒಂದೇ ನಮ್ಮದು, ಭಾಷೆಯೂ ಒಂದೇ ಎಂಬುದನ್ನು ನಾವು ಒಪ್ಪುವುದಿಲ್ಲ, ಇದು ಹಿಂದಿ ದೇಶವಲ್ಲ‌. ಬಹುಭಾಷೆಗಳ ದೇಶವಾಗಿದ್ದು,ಎಸ್ ಎಸ್ ಸಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ನಲ್ಲಿ ಮಾತ್ರ ನಡೆಸುತ್ತಿರುವುದು ಸರಿಯಲ್ಲ. ನಾವು ಈಗಾಗಲೇ ಇದರ ವಿರುದ್ಧ ಪ್ರತಿಭಟನೆ ನಡೆಸಿ ಕನ್ನಡದಲ್ಲೂ ಪರೀಕ್ಷೆ ನಡೆಸಲು ಆಗ್ರಹಿಸಿದ್ದೇವೆ ಎಂದರು.

ಈಗ ಕೇಂದ್ರ ಸರ್ಕಾರದ ಇಲಾಖೆಗಳ ಕಾನ್ಸ್‌ಟೇಬಲ್ ಹುದ್ದೆಗಳನ್ನೂ ಸಹ ಕೇವಲ ಹಿಂದಿ, ಇಂಗ್ಲಿಷ್ ನಲ್ಲಿ ನಡೆಸಲಾಗುತ್ತಿದೆ. ಇದನ್ನು ಒಪ್ಪುವುದು ಸಾಧ್ಯವಿಲ್ಲ.
ಒಡೆದು ಚೂರಾಗಿದ್ದ ಕನ್ನಡ ನಾಡು ಒಂದಾದ ದಿನವನ್ನು ನಾವು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತೇವೆ. ಆದರೆ ಇನ್ನೂ ಕನ್ನಡಿಗರ ಸಮಸ್ಯೆಗಳು ಪರಿಹಾರವಾಗದೇ ಇರುವುದು ನೋವಿನ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖ್ಯಾತ ನಟಿ‌‌ ಮೇಘನಾ ರಾಜ್ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಲಕ್ಷ್ಮಣ ನಿಂಬರ್ಗಿ ಅವರು ಭಾಗವಹಿಸಿದ್ದರು.

You cannot copy content of this page

Exit mobile version