ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು ಹಿಡಿದಿದೆ. ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿ (BJP) ವಿರುದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Shivalinge Gowda) ರೊಚ್ಚಿಗೆದ್ದಿದ್ದಾರೆ. ಅಧಿವೇಶನದ ವೇಳೆ ಬಿಜೆಪಿ ನಾಯಕರನ್ನ ಏಕವಚನದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
‘ಮಾನ ಮರ್ಯಾದೆ ಇದೆಯಾ?’
ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶಗೊಂಡ ಶಿವಲಿಂಗೇಗೌಡ ಬಿಜೆಪಿ ಸದಸ್ಯ ಶರಣು ಸಲಗಾರ್ ಸೇರಿದಂತೆ ಇತರರ ವಿರುದ್ಧ ವಾಗ್ದಾಳಿ ನಡೆಸಿದ್ರು. ನಿಮಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ? ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ? ಎಂದು ಶಿವಲಿಂಗೇಗೌಡ ಗುಡುಗಿದ್ದಾರೆ. ‘ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..?’
ನಾವು ಧರಣಿ ಮಾಡುತ್ತೇವೆ ಆದ್ರೆ ಈ ರೀತಿಯಾಗಿ ಮಾಡಿಲ್ಲ. ನಿಮ್ಮಂಥ ಜನರನ್ನ ನಾನು ಎಲ್ಲಿಯೂ ನೋಡಿಲ್ಲ. ಲೇ ಅರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..? ಎನ್ನುತ್ತಾ ಹಿಗ್ಗಾಮುಗ್ಗಾ ಬೈದಿದ್ದಾರೆ ಶಿವಲಿಂಗೇಗೌಡರು.
